
ಭಾರತ ಏಕದಿನ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ತಮ್ಮ ಪುತ್ರ ಜೊರಾವರ್‌ನನ್ನು ಎರಡು ವರ್ಷಗಳ ಬಳಿಕ ಭೇಟಿಯಾಗಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಈ ಸುಂದರ ಕ್ಷಣದ ವಿಡಿಯೋ ತುಣುಕನ್ನು ಶಿಖರ್ ಧವನ್ ಹಂಚಿಕೊಂಡಿದ್ದು ಭಾವನಾತ್ಮಕ ಸಾಲುಗಳೊಂಡಿಗೆ ಹಂಚಿಕೊಂಡಿದ್ದಾರೆ.
ಈ ಭಾವನಾತ್ಮಕ ವಿಡಿಯೋದಲ್ಲಿ ಶಿಖರ್ ಧವನ್ ಸುದೀರ್ಘ ಸಮಯದ ನಂತರ ಮುಖಾಮುಖಿಯಾಗುತ್ತಿರುವ ದೃಶ್ಯವಿದೆ. ಶಿಖರ್ ಧವನ್ ವೈವಾಹಿಕ ಜೀವನ ಕಳೆದ ವರ್ಷ ಅಂತ್ಯವಾಗಿದ್ದು ವಿವಾಹವಾದ 8 ವರ್ಷಗಳ ಬಳಿಕ ಶಿಖರ್ ಧವನ್ ಹಾಗೂ ಆಯೆಶಾ ಮುಖರ್ಜಿ ವಿಚ್ಚೇದನ ಪಡೆದುಕೊಂಡಿದ್ದರು. 2012ರಲ್ಲಿ ಮದುವೆಯಾಗಿದ್ದ ಶಿಖರ್ ಧವನ್ ಹಾಗೂ ಆಯೆಶಾ ದಂಪತಿಗಳಿಗೆ ಎರಡು ವರ್ಷಗಳ ನಂತರ ಪುತ್ರ ಜೊರಾವರ್ ಜನಿಸಿದ್ದ. ಇದು ಆಯೆಶಾ ಅವರ ಎರಡನೇ ವಿಚ್ಚೇದನವಾಗಿದೆ.
ಆಯೆಶಾ ಆಸ್ಟ್ರೇಲಿಯಾ ಮೂಲದವರಾಗಿರುವ ಕಾರಣ ಜೊರಾವರ್ ಆಸ್ಟ್ರೇಲಿಯಾದಲ್ಲಿಯೇ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾವೈರಸ್ ನಿಯಮಗಳು ಹಾಗೂ ಶಿಖರ್ ಧವನ್ ವೃತ್ತಿ ಜೀವನದಲ್ಲಿ ಬ್ಯುಸಿ ಇರುವ ಕಾರಣದಿಂದಾಗಿ 2020ರ ನಂತರ ಪುತ್ರನನ್ನು ಶಿಖರ್ ಧವನ್ ಭೇಟಿಯಾಗಿರಲಿಲ್ಲ. ಈಗ ಕಡೆಗೂ ಪುತ್ರನನ್ನು ಭಾರತದ ಅನುಭವಿ ಆಟಗಾರ ಭೇಟಿಯಾಗಿದ್ದು ಈ ಹರ್ಷ ಇಬ್ಬರ ಮುಖದಲ್ಲಿಯೂ ವ್ಯಕ್ತವಾಗಿದೆ.
"ನಾನು ನನ್ನ ಮಗನನ್ನು ಭೇಟಿಯಾಗಿ ಆತನೊಂದಿಗೆ ಆಟವಾಡಿ, ತಬ್ಬಿಕೊಂಡು ಮಾತನಾಡಿ ಎರಡು ವರ್ಷಗಳಾಗಿತ್ತು. ಇದು ಬಹಳ ಭಾವುಕ ಕ್ಷಣಗಳು. ಈ ರೀತಿಯ ಸಂದರ್ಭಗಳು ಸುದೀರ್ಘ ಕಾಲ ನೆನಪಿನಲ್ಲಿ ಉಳಿಯುತ್ತದೆ" ಎಂದು ಶಿಖರ್ ಧವನ್ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಶಿಖರ್ ಧವನ್ ತಮ್ಮ ವೈವಾಹಿಕ ಜೀವನದಿಂದ ವಿಚ್ಚೇದನ ಪಡೆದುಕೊಮಡ ನಂತರ ಕೆಲ ಕಾಲ ಕ್ರಿಕೆಟ್‌ನಿಂದ ದೂರವಿದ್ದರು. ಐಪಿಎಲ್ 2021ರ ಆವೃತ್ತಿಯಲ್ಲಿ ಅದ್ಭುತವಾದ ಪ್ರದರ್ಶನ ನೀಡಿದ್ದರೂ ಟಿ20 ವಿಶ್ವಕಪ್‌ಗೆ ಧವನ್ ಆಯ್ಕೆಯಾಗಿರಲಿಲ್ಲ. ಅಲ್ಲದೆ ಕಳೆದ ಜುಲೈ ತಿಂಗಳಿನಲ್ಲಿ ಭಾರತ ಯುವ ಆಟಗಾರರೊಂದಿಗೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ ಆ ತಂಡವನ್ನು ಧವನ್ ಮುನ್ನಡೆಸಿದ್ದರು.
ಇನ್ನು ಧವನ್ ಇತ್ತೀಚೆಗಷ್ಟೇ ಅಂತ್ಯವಾದ ವೆಸ್ಟ್ ಇಂಡಿಸ್ ವಿರುದ್ಧದ ಏಕದಿನ ಸರಣಿಯ ಭಾಗವಾಗಿದ್ದರು. ಆದರೆ ಕೊರೊನವೈರಸ್‌ಗೆ ತುತ್ತಾಗಿದ್ದ ಧವನ್ ಮೊದಲ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಅಂತಿಮ ಪಂದ್ಯದಲ್ಲಿ ಕಣಕ್ಕಿಳಿದಿದ್ದರೂ ಅವರು ಕೇವಲ 10 ರನ್ ಮಾತ್ರವೇ ಗಳಿಸಿದ್ದರು. ಇದಕ್ಕೂ ಮುನ್ನ ದಕ್ಷಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ಧವನ್ ಅದ್ಭುತ ಪ್ರದರ್ಶನ ನಿಡುವಲ್ಲಿ ಯಶಸ್ವಿಯಾಗಿದ್ದರು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ್ದ ಧವನ್ ಎರಡು ಅರ್ಧ ಶತಕ ಸಿಡಿಸಿ ಮಿಂಚಿದ್ದರು.
ಇನ್ನು ಧವನ್ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದು ಈ ಬಾರಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಪರವಾಗಿ ಆಡಲಿದ್ದಾರೆ. ಕಳೆದ ಆವರತ್ತಿಯವರೆಗೆ ಡೆಲ್ಲಿ ಕ್ಯಾಪಟಿಲ್ಸ್ ತಮಡದ ಭಾಗವಾಗಿದ್ದ ಧವನ್ ಅವರನ್ನು ಫ್ರಾಂಚೈಸಿ ಹರಾಜಿಗೆ ಬಿಡುಗಡೆಗೊಳಿಸಿದ ಕಾರಣ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 8.25 ಕೋಟಿ ನೀಡಿ ಸೇರ್ಪಡೆಗೊಳಿಸಿದೆ. ಇನ್ನು ಧವನ್ ಈ ಬಾರಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಮಡದ ನಾಯಕತ್ವದ ಸ್ಪರ್ಧೆಯಲ್ಲಿಯೂ ಕಾಣಿಸಿಕೊಂಡಿದ್ದು ಮಯಾಂಕ್ ಅಗರ್ವಾಲ್ ಹಾಗೂ ಧವನ್ ಮಧ್ಯೆ ಯಾರಿಗೆ ನಾಯಕನ ಪಟ್ಟ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.