ಬಹು ನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ಅಕ್ಟೋಬರ್ 5ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಪಂದ್ಯದ ಮೂಲಕ ಆರಂಭಗೊಂಡಿದ್ದು, ಇನ್ನೂ ಒಂದೂವರೆ ತಿಂಗಳ ಕಾಲ ಭಾರತದಲ್ಲಿ ಕ್ರಿಕೆಟ್ ಹಬ್ಬ ನಡೆಯಲಿದೆ.
ಇದೇ ವೇಳೆ ಶನಿವಾರ, ಅಕ್ಟೋಬರ್ 14ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಆದಾಗ್ಯೂ, ವಸತಿ ಸೌಕರ್ಯಕ್ಕಾಗಿ ಹೆಚ್ಚಿದ ಬೇಡಿಕೆ ಮತ್ತು ದುಬಾರಿ ವಿಮಾನ ಟಿಕೆಟ್‌ಗಳು ತಮ್ಮ ಪಂದ್ಯದ ಸ್ಥಳವನ್ನು ತಲುಪಲು ಅಭಿಮಾನಿಗಳಿಗೆ ಕಷ್ಟಕರವಾಗಿದೆ. ಈ ಸಮಸ್ಯೆಗೆ ಪ್ರತಿಕ್ರಿಯೆಯಾಗಿ, ಭಾರತೀಯ ರೈಲ್ವೆ ಬಹು ನಿರೀಕ್ಷಿತ ಪಂದ್ಯಕ್ಕಾಗಿ ವಿಶೇಷ ವಂದೇ ಭಾರತ್ ರೈಲನ್ನು ಓಡಿಸುವ ನಿರ್ಧಾರವನ್ನು ಪ್ರಕಟಿಸಿದೆ.
ವರದಿಗಳ ಪ್ರಕಾರ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಪ್ರಯಾಣಿಸುವ ಅಭಿಮಾನಿಗಳಿಗೆ ಅನುಕೂಲವಾಗುವಂತೆ ನೆರೆಯ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದಿಂದ ಭಾರತೀಯ ರೈಲ್ವೆ ವಿಶೇಷ ವಂದೇ ಭಾರತ್ ರೈಲುಗಳನ್ನು ಓಡಿಸಲಿದೆ.

ಈ ವಿಶೇಷ ರೈಲುಗಳ ವೇಳಾಪಟ್ಟಿಯು ಪಂದ್ಯದ ಆರಂಭಕ್ಕೆ ಕೆಲವು ಗಂಟೆಗಳ ಮೊದಲು ಅಭಿಮಾನಿಗಳು ಅಹಮದಾಬಾದ್‌ಗೆ ಪ್ರಯಾಣಿಸಬಹುದು ಮತ್ತು ಪಂದ್ಯ ಮುಗಿದ ನಂತರ ಸುಲಭವಾಗಿ ಮನೆಗೆ ಮರಳಬಹುದು.
"ವಿಪರೀತ ವಿಮಾನ ಟಿಕೆಟ್ ದರ, ವಸತಿ ಕೊರತೆ, ಹೆಚ್ಚಿದ ಹೋಟೆಲ್ ದರವನ್ನು ಎದುರಿಸಲು ಈ ವ್ಯವಸ್ಥೆ ಮಾಡಲಾಗಿದೆ. ಪಂದ್ಯಕ್ಕೆ ಮುಂಚಿತವಾಗಿ ತಲುಪುವುದು ಮತ್ತು ಪಂದ್ಯ ಮುಗಿದ ನಂತರ ಜನರು ಮನೆಗೆ ಮರಳಬಹುದು ಎಂಬುದು ಈ ವಿಶೇಷ ರೈಲುಗಳನ್ನು ಓಡಿಸುವ ಹಿಂದಿನ ಆಲೋಚನೆಯಾಗಿದೆ," ಎಂದು ಭಾರತೀಯ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
"ಈ ವಿಶೇಷ ಸ್ಥಳಗಳಿಂದ ಸಂಚರಿಸುವ ರೈಲುಗಳು ಸಬರಮತಿ ಮತ್ತು ಅಹಮದಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತವೆ. ಇವೆರಡೂ ನರೇಂದ್ರ ಮೋದಿ ಕ್ರೀಡಾಂಗಣದ ಸಮೀಪದಲ್ಲಿವೆ," ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ 18 ವರದಿ ಮಾಡಿದೆ.
ಅಭಿಮಾನಿಗಳ ಅನುಕೂಲತೆಯ ಜೊತೆಗೆ, ದೇಶಭಕ್ತಿ ಗೀತೆಗಳನ್ನು ನುಡಿಸುವ ಮೂಲಕ ಮತ್ತು ಹಿಂದಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಐತಿಹಾಸಿಕ ಕ್ರಿಕೆಟ್ ಕ್ಷಣಗಳನ್ನು ಪ್ರದರ್ಶಿಸುವ ಮೂಲಕ ಪ್ರಯಾಣದ ಅನುಭವವನ್ನು ಹೆಚ್ಚಿಸಲು ಭಾರತೀಯ ರೈಲ್ವೇಸ್ ಯೋಜಿಸಿದೆ.
ಭಾರತ ಮತ್ತು ಪಾಕಿಸ್ತಾನ ವಿಶ್ವಕಪ್ ಪಂದ್ಯದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಾದ ನಂತರ, ಕ್ಷಣಾರ್ಧದಲ್ಲೇ ಸೋಲ್ಡ್ ಔಟ್ ಆಗಿದ್ದವು. ಇದು ಈ ಪಂದ್ಯಕ್ಕಿರುವ ಅಪಾರ ನಿರೀಕ್ಷೆಯನ್ನು ಸೂಚಿಸುತ್ತದೆ. ಈ ದೊಡ್ಡ ಮಟ್ಟದ ಪಂದ್ಯಕ್ಕಾಗಿ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಹಲವಾರು ವಿಐಪಿಗಳು ಮತ್ತು ವಿವಿಐಪಿಗಳನ್ನು ಆಹ್ವಾನಿಸುವ ನಿರೀಕ್ಷೆಯಿದೆ.
ಭಾರತದ ಪ್ರಮುಖ ಹತ್ತು ಸ್ಥಳಗಳಲ್ಲಿ ವಿಶ್ವಕಪ್ ಆಡಲಾಗುತ್ತದೆ. ಅವುಗಳೆಂದರೆ ಅಹಮದಾಬಾದ್, ಹೈದರಾಬಾದ್, ಚೆನ್ನೈ, ಮುಂಬೈ, ಬೆಂಗಳೂರು, ಕೋಲ್ಕತ್ತಾ, ದೆಹಲಿ, ಧರ್ಮಶಾಲಾ, ಪುಣೆ ಮತ್ತು ಲಕ್ನೋದಲ್ಲಿ ಪಂದ್ಯಗಳು ನಡೆಲಿವೆ.
ಮುಂಬೈನ ವಾಂಖೆಡೆ ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್ ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.