ಜೂನ್ 17 ಸೋಮವಾರ, ಮೈದಾನದಲ್ಲಿ ಕ್ರಿಕೆಟಿಗರು ದಾಖಲೆ ಮಾಡುವುದು ಒಂದೆಡೆಯಾದರೆ, ತೀರ್ಪುಗಾರರಿಗೆ ಅಂಪೈರಿಂಗ್ ಮಾಡುವುದು ಮತ್ತೊಂದೆಡೆ ಸವಾಲಾಗಿರುತ್ತದೆ. ಅಲ್ಲದೆ ಈಗಿನ ತಂತ್ರಜ್ಞಾನ ಬಳಕೆಯಲ್ಲಿ ಅಂಪೈರ್‌ಗಳು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಇನ್ನೂ ಕಷ್ಟಕರವಾಗಿರುತ್ತದೆ.
ಈ ಎಲ್ಲದರ ನಡುವೆಯೂ ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಎಲೈಟ್ ಪ್ಯಾನೆಲ್ ಅಂಪೈರ್ ಪಟ್ಟಿಯಲ್ಲಿರುವ ಭಾರತದ ಏಕೈಕ ತೀರ್ಪುಗಾರರಾಗಿರುವ ನಿತಿನ್ ಮೆನನ್ ಅವರು ಇತಿಹಾಸ ಸೃಷ್ಟಿಸಿದ್ದಾರೆ.

ನಿತಿನ್ ಮೆನನ್ ಆನ್-ಫೀಲ್ಡ್ ಅಂಪೈರ್ ಆಗಿ ಅತಿಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ ಭಾರತದ ಅಂಪೈರ್ ಆಗಿ ಹೊಸ ದಾಖಲೆ ಬರೆದಿದ್ದಾರೆ. ಜೂನ್ 11 ರಂದು ನಡೆದ 2024ರ ಟಿ20 ವಿಶ್ವಕಪ್‌ನ ಆಸ್ಟ್ರೇಲಿಯಾ ಮತ್ತು ನಮೀಬಿಯಾ ನಡುವಿನ ಪಂದ್ಯದ ವೇಳೆ ನಿತಿನ್ ಮೆನನ್, ಆನ್-ಫೀಲ್ಡ್ ಅಂಪೈರ್ ಆಗಿ ಅತಿಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ನಿರ್ವಹಿಸಿದ ಸಾಧನೆ ಮಾಡಿದ್ದಾರೆ.
ನಿತಿನ್ ಮೆನನ್ ಅವರು ಈವರೆಗೆ ಒಟ್ಟು 126 ಅಂತಾರಾಷ್ಟ್ರೀಯ ಪಂದ್ಯಗಳು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದು, ಭಾರತದ ಮಾಜಿ ಆಫ್ ಸ್ಪಿನ್ನರ್ ಮತ್ತು ಅನುಭವಿ ಅಂಪೈರ್ ಶ್ರೀನಿವಾಸ್ ವೆಂಕಟರಾಘವನ್ ಅವರ 125 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ 20 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ಮೆನನ್ ಇಲ್ಲಿಯವರೆಗೆ 23 ಅಂರಾಷ್ಟ್ರೀಯ ಟೆಸ್ಟ್ ಪಂದ್ಯಗಳು, 58 ಏಕದಿನ ಮತ್ತು 45 ಟಿ20ಗಳಲ್ಲಿ (ಒಟ್ಟು 126 ಪಂದ್ಯಗಳು) ಆನ್-ಫೀಲ್ಡ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. 6 ಟೆಸ್ಟ್‌ಗಳು, 14 ಏಕದಿನ ಮತ್ತು 24 ಟಿ20 ಪಂದ್ಯಗಳಲ್ಲಿ (44 ಪಂದ್ಯಗಳು) ಟಿವಿ ಅಂಪೈರ್ ಆಗಿ ಕೆಲಸ ಮಾಡಿರುವ ಅನುಭವವನ್ನು ಹೊಂದಿದ್ದಾರೆ.
ವೆಂಕಟರಾಘವನ್ ಅವರು 73 ಟೆಸ್ಟ್‌ಗಳು ಮತ್ತು 52 ಏಕದಿನ ಪಂದ್ಯಗಳಲ್ಲಿ (125 ಪಂದ್ಯಗಳು) ಆನ್-ಫೀಲ್ಡ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಆಗ ಟಿ20 ಕ್ರಿಕೆಟ್ ಅಸ್ತಿತ್ವದಲ್ಲಿ ಇರಲಿಲ್ಲ.
ವೆಂಕಟರಾಘವನ್ ಅವರು 18 ಏಕದಿನ ಮತ್ತು ಒಂದು ಟೆಸ್ಟ್‌ನಲ್ಲಿ ಟಿವಿ ಅಂಪೈರ್ ಆಗಿ ಕೆಲಸ ಮಾಡಿದ್ದು, 8 ಏಕದಿನ ಮತ್ತು 5 ಟೆಸ್ಟ್‌ಗಳಲ್ಲಿ ರೆಫರಿಯಾಗಿ ಸೇವೆ ಸಲ್ಲಿಸಿದ್ದಾರೆ.
40 ವರ್ಷದ ಮೆನನ್ ಅವರು ಮಧ್ಯಪ್ರದೇಶದ ಇಂದೋರ್‌ನವರು. ಪ್ರಸ್ತುತ ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಂಪೈರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೆನನ್ ಐಸಿಸಿ ಎಲೈಟ್ ಪ್ಯಾನೆಲ್‌ನಲ್ಲಿ ಭಾರತದ ಏಕೈಕ ಅಂಪೈರ್ ಆಗಿದ್ದು, 2020ರಲ್ಲಿ ಸ್ಥಾನ ಪಡೆದಿದ್ದಾರೆ.
ಅನೇಕ ಪಂದ್ಯಗಳು, ಸರಣಿಗಳು ಕ್ರೀಡೆಗಳು ಐಸಿಸಿ ಆಯೋಜಿಸುವ ಪ್ರತಿಷ್ಠಿತ ಟೂರ್ನಿಗಳಲ್ಲಿ ಮೆನನ್ ಆನ್-ಫೀಲ್ಡ್ ಅಂಪೈರ್ ಆಗಿದ್ದಾರೆ. 2023ರಲ್ಲಿ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆದ ಮೂರನೇ ಆಶಸ್ ಟೆಸ್ಟ್‌ಗೂ ಮೊದಲ ಬಾರಿಗೆ ಅಂಪೈರ್ ಮಾಡಿದ್ದರು.