ಶನಿವಾರ, ಜುಲೈ 22ರಂದು ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ಮಹಿಳಾ ತಂಡಗಳ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವು ರೋಚಕ ಟೈನಲ್ಲಿ ಅಂತ್ಯಗೊಂಡ ಕಾರಣ, ಸರಣಿ 1-1 ಅಂತರದಲ್ಲಿ ಸಮಬಲಗೊಂಡಿತು.
ರೋಚಕವಾಗಿ ಟೈನಲ್ಲಿ ಅಂತ್ಯಗೊಂಡಿದ್ದರಿಂದ ಪ್ರೇಕ್ಷಕರಿಗೆ ಮೂರನೇ ಪಂದ್ಯ ನಿರಾಶೆಗೊಳ್ಳಲಿಲ್ಲ. ಮೂರು ಪಂದ್ಯಗಳ ಏಕದಿನ ಸರಣಿಯನ್ನು ಉಭಯ ತಂಡಗಳು ಹಂಚಿಕೊಂಡವು. ಆದರೆ ಕೊನೆಯ ಪಂದ್ಯದಲ್ಲಿ ನಡೆದ ಕೆಲವು ಘಟನೆಗಳು ಗಮನ ಸೆಳೆದವು.

ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ವೀಪ್ ಮಾಡಲು ಪ್ರಯತ್ನಿಸುತ್ತಿದ್ದಾಗ ಎಲ್‌ಬಿಡಬ್ಲ್ಯೂ ತೀರ್ಪಿಗೆ ಔಟಾದರು. ಆದರೆ, ಅಂಪೈರ್ ತೀರ್ಪನ್ನು ಭಾರತ ತಂಡದ ನಾಯಕಿ ಒಪ್ಪಲಿಲ್ಲ ಮತ್ತು ತನ್ನ ಬ್ಯಾಟ್‌ನಿಂದ ಸ್ಟಂಪ್‌ಗಳನ್ನು ಹೊಡೆಯುವ ಮೂಲಕ ತನ್ನ ಆಕ್ರೋಶವನ್ನು ಹೊರಹಾಕಿದಳು.
ಪೆವಿಲಿಯನ್‌ಗೆ ಮರಳುವಾಗ 34 ವರ್ಷದ ಹರ್ಮನ್‌ಪ್ರೀತ್ ಕೌರ್ ಅವರು ಅಂಪೈರ್‌ರನ್ನು ತೆಗಳುತ್ತಿರುವುದು ಕಂಡುಬಂದಿತು ಮತ್ತು ಪಂದ್ಯದ ನಂತರದಲ್ಲಿ ಅಂಪೈರಿಂಗ್ ಮಟ್ಟವನ್ನು ಕರುಣಾಜನಕ ಎಂದು ಹರ್ಮನ್‌ಪ್ರೀತ್ ಬಹಿರಂಗವಾಗಿ ಟೀಕಿಸಿದರು.
ಕ್ರಿಕ್‌ಬಜ್ ವರದಿಯ ಪ್ರಕಾರ, "ಅನುಭವಿ ಆಟಗಾರ್ತಿ ಮೂರನೇ ಏಕದಿನ ಪಂದ್ಯದಲ್ಲಿನ ತನ್ನ ವರ್ತನೆಗಳ ನಂತರ, ದೊಡ್ಡ ಬೆಲೆ ತೆರಬೇಕಾಗಿದೆ. ಮ್ಯಾಚ್ ರೆಫರಿ ಅಖ್ತರ್ ಅಹ್ಮದ್ ಕೌರ್ ಅವರು ಹರ್ಮನ್‌ಪ್ರೀತ್ ಕೌರ್ ಅವರ ಕ್ರಮವನ್ನು ಲೆವೆಲ್ 2 ಅಪರಾಧ ಎಂದು ಪರಿಗಣಿಸಿದ್ದಾರೆ. ಹೀಗಾಗಿ ಭಾರತದ ನಾಯಕಿಗೆ ಪಂದ್ಯ ಶುಲ್ಕದ ಶೇ.75ರಷ್ಟು ದಂಡ ವಿಧಿಸಲಾಗುತ್ತದೆ ಮತ್ತು 3 ಡಿಮೆರಿಟ್ ಅಂಕಗಳನ್ನು ಸಹ ನೀಡಲಾಗುತ್ತದೆ," ಎಂದು ವರದಿಯಾಗಿದೆ.
"ಆನ್ ಫೀಲ್ಡ್‌ನಲ್ಲಿ ವಿಕೆಟ್ ಒಡೆದು ಹಾಕಿದ್ದರಿಂದ ಹರ್ಮನ್‌ಪ್ರೀತ್ ಕೌರ್‌ಗೆ ಪಂದ್ಯದ ಶುಲ್ಕದ ಶೇ.50ರಷ್ಟು ದಂಡವನ್ನು ವಿಧಿಸಲಾಗುತ್ತದೆ ಮತ್ತು ಪ್ರಶಸ್ತಿ ಸಮಾರಂಭದಲ್ಲಿ ಅಂಪೈರಿಂಗ್ ಮಟ್ಟವನ್ನು ಟೀಕಿಸಿದ ರೀತಿಗಾಗಿ ಪಂದ್ಯದ ಶುಲ್ಕದ ಶೇ.25ರಷ್ಟು ದಂಡವನ್ನು ವಿಧಿಸಲಾಗುತ್ತದೆ," ಎಂದು ಕ್ರಿಕ್‌ಬಜ್ ವರದಿ ತಿಳಿಸಿದೆ.
ಹರ್ಮನ್‌ಪ್ರೀತ್ ಕೌರ್ ಅವರು ಸ್ವೀಕರಿಸುವ 3 ಡಿಮೆರಿಟ್ ಪಾಯಿಂಟ್‌ಗಳಲ್ಲಿ, 2 ಅಂಕಗಳು ವಿಕೆಟ್ ಹೊಡೆದು ಹಾಕಿದ್ದಕ್ಕಾಗಿ ಮತ್ತು ಪ್ರಶಸ್ತಿ ಸಮಾರಂಭದಲ್ಲಿ ಅಂಪೈರಿಂಗ್ ಮಟ್ಟವನ್ನು ಬಹಿರಂಗವಾಗಿ ಟೀಕಿಸಿದ್ದಕ್ಕಾಗಿ 1 ಡಿಮೆರಿಟ್ ಅಂಕ ನೀಡಲಾಗಿದೆ.
ಅಂಪೈರಿಂಗ್ ಮಟ್ಟದ ಕುರಿತು ಹರ್ಮನ್‌ಪ್ರೀತ್ ಕೌರ್ ಅವರ ಕಾಮೆಂಟ್‌ಗಳನ್ನು ಬಾಂಗ್ಲಾದೇಶದ ನಾಯಕಿ ನಿಗರ್ ಸುಲ್ತಾನಾ ಟೀಕಿಸಿದ್ದಾರೆ
ಮೈದಾನದಲ್ಲಿ ಹರ್ಮನ್‌ಪ್ರೀತ್ ಕೌರ್ ವರ್ತನೆ ಟೀಕಿಸಿದ ಬಾಂಗ್ಲಾದೇಶ ತಂಡದ ನಾಯಕಿ
ಬಾಂಗ್ಲಾದೇಶ ಮಹಿಳಾ ತಂಡದ ನಾಯಕಿ ನಿಗರ್ ಸುಲ್ತಾನಾ ಅವರು ತಮ್ಮ ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆಪಟ್ಟರು. ಕಾರಣವೆಂದರೆ, ವಿಶ್ವದ ಅತ್ಯುತ್ತಮ ತಂಡದೊಂದಿಗೆ ಸರಣಿಯನ್ನು ಹಂಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ವೇಳೆ ಮೂರನೇ ಪಂದ್ಯದ ಅಂಪೈರಿಂಗ್ ಮಟ್ಟದ ಬಗ್ಗೆ ಹರ್ಮನ್‌ಪ್ರೀತ್ ಕೌರ್ ಅವರ ಟೀಕೆ ಬಗ್ಗೆ ಪ್ರಶ್ನಿಸಿದಾಗ, ಭಾರತ ತಂಡದ ನಾಯಕಿ ಉತ್ತಮ ನಡವಳಿಕೆಯನ್ನು ತೋರಿಸಬೇಕಾಗಿತ್ತು ಎಂದು 25 ವರ್ಷದ ನಿಗರ್ ಸುಲ್ತಾನಾ ಹೇಳಿದರು.
"ಇದು ಸಂಪೂರ್ಣವಾಗಿ ಹರ್ಮನ್‌ಪ್ರೀತ್ ಕೌರ್ ಸಮಸ್ಯೆ. ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆಟಗಾರ್ತಿಯಾಗಿ ಅವಳು ಉತ್ತಮ ನಡವಳಿಕೆಯನ್ನು ತೋರಿಸಬಹುದಿತ್ತು," ಎಂದು 3ನೇ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ನಿಗರ್ ಸುಲ್ತಾನಾ ತಿಳಿಸಿದರು.
ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ 4 ವಿಕೆಟ್‌ಗೆ 225 ರನ್ ಗಳಿಸಿತ್ತು. ಸುಲಭ ಗುರಿ ಬೆನ್ನಟ್ಟಿದ ಭಾರತದ ವನಿತೆಯರು ಚೇಸಿಂಗ್‌ನಲ್ಲಿ ಸ್ಥಿರವಾಗಿ ಸಾಗುತ್ತಿತ್ತು. ಕೊನೆಯ ಹಂತದ ಆಟದಲ್ಲಿ ಉಭಯ ತಂಡಗಳು ಟೈಗೆ ತೃಪ್ತಿಪಡಬೇಕಾಯಿತು.