ಲಗಾನ್ ಚಿತ್ರದ ಕ್ಲೈಮಾಕ್ಸ್ ಮತ್ತೆ ನೋಡಿದ ಹಾಗೇ ಆಯ್ತು!
ಹೈದ್ರಾಬಾದ್, ಮೇ 16: ಅಮೀರ್ ಖಾನ್ ಲಗಾನ್ ಚಿತ್ರದ ಕ್ಲೈಮಾಕ್ಸ್ ಹೈದ್ರಾಬಾದ್ ಕ್ರೀಡಾಂಗಣದಲ್ಲಿ ಮತ್ತೆ ಪುನರಾವರ್ತನೆಯಾಗಿದೆ. ಎತ್ತರಕ್ಕೆ ಅಟ್ಟಿದ ಚೆಂಡನ್ನು ಹಿಡಿದ ನಾಯಕ ವಾರ್ನರ್ ಬೌಂಡರಿ ಗೆರೆ ತುಳಿದು ಬೆಂಗಳೂರಿಗೆ ಗೆಲವು ಸಿಗುವಂತೆ ಆಗಿದೆ.
ಅಮೀರ್ ಖಾನ್ ಬದಲು ಇಲ್ಲಿ ಕ್ರೀಸ್ ನಲ್ಲಿ ಇದ್ದದ್ದು ವಿರಾಟ್ ಕೊಹ್ಲಿ. ಕೊನೆಯ ಎರಡು ಎಸೆತದಲ್ಲಿ 4 ರನ್ ಬೇಕಿದ್ದಾಗ ಕೊಹ್ಲಿ ನೇರವಾಗಿ ಹೊಡೆದ ಚೆಂಡನ್ನು ಲಾಂಗ್ ಆನ್ ಬೌಂಡರಿ ತುದಿಯಲ್ಲಿ ಹಿಡಿದ ವಾರ್ನರ್ ಬೌಂಡರಿ ಗೆರೆ ತುಳಿದಿದ್ದರು.
ಬೆಂಗಳೂರು ತಂಡ 32 ಚೆಂಡುಗಳಲ್ಲಿ ಗಳಿಸಿದ್ದು ಬರೋಬ್ಬರಿ 83 ರನ್ ಅದು ಚೇಸಿಂಗ್ ನಲ್ಲಿ. ಗೇಲ್ , ಕೊಹ್ಲಿ ಕಮಾಲಿಗೆ ವಾರ್ನರ್ ಪಡೆ ಕಕ್ಕಾಬಿಕ್ಕಿಯಾಗಿದ್ದು ತಡರಾತ್ರಿ ನಡೆದ ಪಂದ್ಯದ ಹೈಲೈಟ್ಸ್.
ಟಿ-20 ಪಂದ್ಯದ ಮಜವೇ ಅನುಭವಿಸಿಯೇ ಸವಿಯಬಬೇಕು. ಇಲ್ಲಿ ಬೌಲರ್ ಗಳ ಸಾವು , ಬ್ಯಾಟ್ಸ್ ಮನ್ ಗಳ ವೈಭವ ಕಂಡುಬರುತ್ತಿರುವುದನ್ನು ಹೊಸದಾಗಿ ಹೇಳಬೇಕಿಲ್ಲ.[ಐಪಿಎಲ್ ಪ್ಲೇ ಆಫ್: ಚೆನ್ನೈ ಸೇಫ್, 3 ಸ್ಥಾನಕ್ಕೆ 5 ತಂಡಗಳ ಫೈಟ್]
ಬೆಂಗಳೂರು ತಂಡ ಹೈದ್ರಾಬಾದ್ ನಲ್ಲಿ ರನ್ ಹೊಳೆಯನ್ನೇ ಹರಿಸಿ ಪ್ಲೇ ಅಪ್ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿದೆ. ಮಳೆ ಅಡ್ಡಿ ನೀಡಿದ ಪಂದ್ಯದ ಫಲಿತಾಂಶ ಮಾತ್ರ ರೋಚಕವಾಗಿತ್ತು.
ವಿರಾಟ್ ಕೊಹ್ಲಿ ಅಜೇಯ 44 ರನ್ ನೆರವಿನಲ್ಲಿ ಆರ್‌ಸಿಬಿ, ಹೈದ್ರಾಬಾದ್ ವಿರುದ್ಧದ ಡಕ್‌ವರ್ಥ್ ಲೂಯೀಸ್ ನಿಯಮದ ಪಂದ್ಯವನ್ನು ರೋಚಕ 6 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. 11 ಓವರ್‌ಗಳಿಗೆ ಸೀಮಿತವಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದ್ರಾಬಾದ್ ಆಕ್ರಮಣಕಾರಿ ಆಟ ಆಡಿ 3 ವಿಕೆಟ್‌ಗೆ 135 ರನ್‌ಗಳಿಸಿತು. ಮತ್ತೆ ಮಳೆ ಸುರಿದುದರಿಂದ ಪಂದ್ಯವನ್ನು 6 ಓವರ್‌ಗೆ ಇಳಿಸಿ ಆರ್‌ಸಿಬಿಗೆ 81 ರನ್ ಟಾರ್ಗೆಟ್ ಕೊಡಲಾಯಿತು. ಆರಂಭದಿಂದಲೇ ಆರ್ಭಟಿಸಿದ ಚಾಲೆಂಜರ್ಸ್ ಆಟಗಾರರು ಗೆಲುವು ದಕ್ಕಿಸಿಕೊಂಡರು.

ಕ್ರಿಸ್ ಗೇಲ್ ಆರ್ಭಟ
ಬ್ಯಾಟಿಂಗ್ ಗೆ ಇಳಿದ ಕ್ರಿಸ್ ಗೇಲ್ ಕೇವಲ 10 ಎಸೆತದಲ್ಲಿ 35ರನ್ ಸ್ಫೋಟಿಸಿದರು(4 ಬೌಂಡರಿ,3 ಸಿಕ್ಸರ್) ಬೆಂಗಳೂರು ಎರಡನೇ ಓವರ್ ಮುಕ್ತಯದ ವೇಳೆಗೆ 40 ರನ್ ಗಡಿ ದಾಟಿತ್ತು. ಬ್ಯಾಟಿಂಗ್ ನಲ್ಲೂ ಅಬ್ಬರಿಸಿದ್ದ ಹೈದ್ರಾಬಾದ್ ನ ಹೆನ್ರಿಕ್ಸ್ ಗೇಲ್ ವಿಕೆಟ್ ಪಡೆದು ಸಂಭ್ರಮಿಸಿದರು.. ಜತೆಗೆ ಮರು ಎಸೆತದಲ್ಲೇ ಎಬಿಡಿ ವಿಕೆಟ್ ಕಿತ್ತು ಪಂದ್ಯದ ಗತಿ ಬದಲಾಯಿಸಿದರು.

ಪಟ ಪಟನೇ ಉದುರಿದ ವಿಕೆಟ್ ಗಳು
ಎಬಿಡಿ ಔಟ್ ಆದ ನಂತರ ಬಂದ ಮನ್‌ದೀಪ್ ಸಿಂಗ್1 ರನ್, ದಿನೇಶ್ ಕಾರ್ತಿಕ್ 2 ರನ್‌ಗೆ ವಿಕೆಟ್ ಕಳೆದುಕೊಂಡರು. ಹೀಗಾಗಿ ಆರ್‌ಸಿಬಿ ಗೆ ಗೆಲುವಿನ ದಾರಿಯಲ್ಲಿ ಆತಂಕ ಎದುರಾಗಿತ್ತು. ಆದರೆ ಒಂದೆಡೆ ಕ್ರೀಸ್ ಗೆ ಅಂಟಿಕೊಂಡಿದ್ದ ಕೊಹ್ಲಿ ಗೆಲುವನ್ನು ಸುಲಭವಾಗಿಸಿದರು.

ಕೊನೆ ಓವರ್ ವಿಶೇಷ
ಭುವನೇಶ್ವರ್ ಕುಮಾರ್ ಎಸೆಯಲು ಬಂದ ಕೊನೆ ಓವರ್ ನಲ್ಲಿ ಬೆಂಗಳೂರಿಗೆ ಬೇಕಿದ್ದದ್ದು 13 ರನ್. ಕ್ರೀಸ್ ನಲ್ಲಿದ್ದ ದಿನೇಶ್ ಕಾರ್ತಿಕ್ ಒಂದು ರನ್ ಗಳಿಸಿದರು. ಆದರೆ ಮರು ಎಸೆತದಲ್ಲಿ ದಿನೇಶ್ ಪ್ಯಾಡಿಗೆ ಬಡಿದ ಚೆಂಡನ್ನು ಭುವನೇಶ್ವರ್ ವಿಕೆಟ್ ಗೆ ತಾಗಿಸಿದರು. ಆದರೆ ಅತ್ತ ಕ್ರೀಸ್ ನಲ್ಲಿದ್ದ ಕೊಹ್ಲಿ 3 ಮತ್ತು 4 ನೇ ಎಸೆತಗಳನ್ನು ಆಕರ್ಷಕವಾಗಿ ಬೌಂಡರಿಗೆ ಅಟ್ಟಿದರು. ಕೊನೆಯ ಎರಡು ಚೆಂಡಿಗೆ ನಾಲ್ಕು ರನ್ ಬೇಕಿದ್ದ ವೇಳೆ ಕೊಹ್ಲಿ ನೇರವಾಗಿ ಹೊಡೆದ ಚೆಂಡು ವಾರ್ನರ್ ಕೈ ಸೇರಿದ್ದರೂ ಅವರು ಬೌಂಡರಿ ಗೆರೆಯನ್ನು ಸ್ಪರ್ಶಿಸಿದ್ದರು.

ಹೈದ್ರಾಬಾದ್ ಗೆ ಮಾಡಿ ಇಲ್ಲವೇ ಹೊರನಡಿ
ಆರ್‌ಸಿಬಿ ವಿರುದ್ಧ ಸೋಲು ಕಂಡ ಹೈದ್ರಾಬಾದ್ ಪಟ್ಟಿಯಲ್ಲಿ ಹಿಂದಕ್ಕೆ ಬಿದ್ದಿದೆ. ಒಟ್ಟು 13 ಪಂದ್ಯ ಆಡಿರುವ ಹೈದ್ರಾಬಾದ್ 14 ಅಂಕ ಗಳಿಸಿದೆ. ಮುಂಬೈ ವಿರುದ್ಧ ಕೊನೆಯ ಪಂದ್ಯ ಆಡಲಿದ್ದು ಗೆಲ್ಲಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದೆ.

ಆರ್‌ಸಿಬಿಯೂ ಜಯ ಬೇಕು
ಹೈದ್ರಾಬಾದ್ ವಿರುದ್ಧ ಗೆದ್ದಿರುವ ಆರ್‌ಸಿಬಿ ಒಟ್ಟು 13 ಪಂದ್ಯಗಳಿಂದ 15 ಅಂಕಗಳಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಡೆಲ್ಲಿ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿರುವ ಕೊನೆ ಪಂದ್ಯ ಜಯಗಳಿಸಿದರೆ ಮಾತ್ರ ಪ್ಲೇ ಅಪ್ ಸ್ಥಾನ ಖಚಿತ. ಆದರೆ ಬೆಂಗಳೂರಿನ ರನ್ ರೇಟ್ ಇತರ ಎಲ್ಲರಿಗಿಂತ ಉತ್ತಮವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications