ಬೆಂಗಳೂರು, ಮಾರ್ಚ್ 11: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜನೆಯ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್ ) 9ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಏಪ್ರಿಲ್ 9 ರಿಂದ ಆರಂಭವಾಗಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಸೆಣಸಲಿವೆ.
ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ಸ್ ಆಗಿತ್ತು. ಈ ಬಾರಿ ಶನಿವಾರ (ಏಪ್ರಿಲ್ 9) ದಿಂದ ಆರಂಭಗೊಂಡು ಮೇ 29 (ಭಾನುವಾರ) ರ ತನಕ ನಡೆಯಲಿದೆ. [ಐಪಿಎಲ್ 2016: ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?]
ಒಟ್ಟು 51 ದಿನಗಳಲ್ಲಿ 60 ಪಂದ್ಯಗಳು (4 ಪ್ಲೇ ಆಫ್ ಸಹಿತ) ನಡೆಯಲಿವೆ. ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ರಾಯ್ ಪುರದ ಶಹೀದ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಹಾಗೂ ಕಿಂಗ್ಸ್ XI ಪಂಜಾಬ್ ತಂಡಕ್ಕೆ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ಸ್ ಸ್ಟೇಡಿಯಂ ಆತಿಥ್ಯ ನೀಡಲಿದೆ.
ಉಳಿದಂತೆ ಮೊಹಾಲಿ, ದೆಹಲಿ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್, ಕೋಲ್ಕತಾ, ರಾಜ್ ಕೋಟ್ ನಲ್ಲಿ ಪಂದ್ಯಗಳು ನಡೆಯಲಿವೆ ಎಂದು ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಹೇಳಿದರು. (ಪಿಟಿಐ)