ಐಪಿಎಲ್ 10: ಪ್ಲೇ ಆಫ್ ಗೆ ಯಾವ 4 ತಂಡಗಳಿಗೆ ಅರ್ಹತೆ?
ಬೆಂಗಳೂರು, ಮೇ 06 : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ರಲ್ಲಿ ಪ್ರಮುಖ ತಂಡಗಳೆನಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಹಂತದ ಕನಸು ಎಂದೋ ಕೈಬಿಟ್ಟಿತು. ಗುಜರಾತ್ ಲಯನ್ಸ್ ತಂಡದ ಕನಸು ಇತ್ತೀಚೆಗೆ ಭಗ್ನವಾಯಿತು.
ಸತತ ಗೆಲುವು ಸಾಧಿಸುವ ಮೂಲಕ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ ಅಂಕಪಟ್ಟಿಯಲ್ಲಿ ಮೇಲಕ್ಕೇರಿದ್ದು ಪ್ಲೇ ಆಫ್ ತಲುಪುವ ಸಾಧ್ಯತೆ ಹೆಚ್ಚಿಸಿಕೊಂಡಿದೆ. ಉಳಿದಂತೆ ಯಾವ ತಂಡಗಳು ಅರ್ಹತೆ ಪಡೆಯಲಿವೆ ಮುಂದೆ ಓದಿ...
ಆಡಿರುವ 10 ಪಂದ್ಯಗಳಿಂದ 16 ಅಂಕ ಕಲೆಹಾಕುವ ಮೂಲಕ ನೇರವಾಗಿ ಪ್ಲೇ ಆಫ್ ಹಂತಕ್ಕೆ ಮೊದಲ ತಂಡವಾಗಿ ರೋಹಿತ್ ಶರ್ಮ ನೇತೃತ್ವದ ಮುಂಬೈ ಇಂಡಿಯನ್ಸ್ ಎಂಟ್ರಿ ಕೊಟ್ಟಿದೆ.
ಉಳಿದಂತೆ, ಗೌತಮ್ ಗಂಭೀರ್ ಅವರ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡಾ ಪ್ಲೇ ಆಫ್ ಸೇರಲಿದೆ. ಮಿಕ್ಕ ಎರಡು ಸ್ಥಾನಕ್ಕೆ ಭಾರಿ ಪೈಪೋಟಿ ನಡೆದಿದೆ. ಪುಣೆ ಹಾಗೂ ಹೈದರಾಬಾದ್ ಅಲ್ಲದೆ ಈಗ ಪಂಜಾಬ್ ಕೂಡಾ ಸ್ಪರ್ಧೆ ನೀಡುತ್ತಿದೆ.

ಪ್ಲೇ ಆಫ್ ಗೆ ಅರ್ಹತೆ
ಪ್ಲೇ ಆಫ್ ಗೆ ಅರ್ಹತೆ: ಟಾಪ್ ನಾಲ್ಕು ತಂಡಗಳ ಪೈಕಿ ಟಾಪ್ ಎರಡು ತಂಡಗಳು 'ಮೊದಲ ಕ್ವಾಲಿಫೈಯರ್' ನಲ್ಲಿ ಆಡಲಿವೆ. ಈ ಪಂದ್ಯ ಸೋತ ತಂಡಕ್ಕೆ ಇನ್ನೊಂದು ಅವಕಾಶ ಸಿಗಲಿದ್ದು, ಎರಡನೇ ಕ್ವಾಲಿಫೈಯರ್ ನಲ್ಲಿ ಆಡಲಿದೆ.
ಮೂರನೇ ಹಾಗೂ ನಾಲ್ಕನೇ ಸ್ಥಾನದ ತಂಡಗಳು 'ಎಲಿಮಿನೇಷನ್' ಪಂದ್ಯವಾಡಲಿದ್ದು, ಈ ಪಂದ್ಯದಲ್ಲಿ ಸೋತವರು ಟೂರ್ನಿಯಿಂದ ಔಟ್ ಆಗಲಿದ್ದಾರೆ. ಗೆದ್ದ ತಂಡವು ಎರಡನೇ ಕ್ವಾಲಿಫೈಯರ್ ನಲ್ಲಿ ಮೊದಲ ಕ್ವಾಲಿಫೈಯರ್ ನಲ್ಲಿ ಸೋತ ತಂಡದೊಡನೆ ಸೆಣಸಲಿದೆ.

ಮುಂಬೈ ಇಂಡಿಯನ್ಸ್
ಪ್ಲೇ ಆಫ್ ಗೆ ಅರ್ಹತೆ ಪಡೆದ ಮೊದಲ ತಂಡ ಎನಿಸಿಕೊಂಡಿದೆ. ರೋಹಿತ್ ಶರ್ಮ ನೇತೃತ್ವದ ಪಡೆ ಇತ್ತೀಚೆಗೆ ಆರ್ ಸಿಬಿ ವಿರುದ್ಧ 5 ವಿಕೆಟ್ ಗಳ ಜಯ ಸಾಧಿಸಿತು. 10 ಪಂದ್ಯಗಳ ಪೈಕಿ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ಮಾತ್ರ ಎರಡು ಪಂದ್ಯ ಸೋತಿದೆ. ಇತರೆ ತಂಡಗಳಿಗಿಂತ ಅತಿಹೆಚ್ಚು ಪಂದ್ಯಗಳನ್ನು ಗೆದ್ದಿರುವ ಮುಂಬೈ 16 ಅಂಕ ಪಡೆದಿದ್ದು, ಲೀಗ್ ಮುಕ್ತಾಯದ ವೇಳೆಗೆ ಅಂಕಗಳನ್ನು ಹೆಚ್ಚಿಸಿಕೊಂಡು ಅರ್ಹತೆಯನ್ನು ಉಳಿಸಿಕೊಳ್ಳುವುದು ಖಚಿತ.

ಕೋಲ್ಕತ್ತಾ ನೈಟ್ ರೈಡರ್ಸ್
ಮುಂಬೈ ಇಂಡಿಯನ್ಸ್ ತಂಡದಂತೆ ಎರಡು ಬಾರಿ ಚಾಂಪಿಯನ್ ಕೋಲ್ಕತಾ ನೈಟ್ಸ್ ರೈಡರ್ಸ್ ತಂಡ, ಮೇ 5ರಂತೆ 11 ಪಂದ್ಯಗಳಿಂದ 7 ಗೆಲುವು ಸಾಧಿಸಿದೆ. 4 ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದೆ. ಗೌತಮ್ ಗಂಭೀರ್ ಪಡೆಗೆ ಅಗ್ರಸ್ಥಾನಕ್ಕೇರುವ ತವಕದಲ್ಲಿದ್ದು 14 ಅಂಕಗಳನ್ನು ಸದ್ಯಕ್ಕೆ ಹೊಂದಿದೆ.

ಪುಣೆ ತಂಡ
ಐಪಿಎಲ್ 10ರ ಆರಂಭದಲ್ಲಿ ಪ್ಲೇ ಆಫ್ ಅರ್ಹತೆ ಗಳಿಸುವ ಯಾವುದೇ ಸೂಚನೆ ನೀಡದ ರೈಸಿಂಗ್ ಪುಣೆ ಸೂಪರ್ ಜೈಂಟ್ ಈಗ ಅರ್ಹತೆ ಗಿಟ್ಟಿಸಿಕೊಳ್ಳುವ ಲಕ್ಷಣ ಕಂಡು ಬಂದಿದೆ. ಸತತ ಮೂರು ಗೆಲುವಿನೊಂದಿಗೆ 11 ಪಂದ್ಯಗಳಿಂದ 12 ಅಂಕ ಸಂಪಾದಿಸಿದೆ. ಸ್ಟೀವ್ ಸ್ಮಿತ್ ಪಡೆಗೆ ಬ್ಯಾಟಿಂಗ್ ಸಮಸ್ಯೆ ಕಾಡುತ್ತಿದೆ. ಹೇಗಾದರೂ ಉಳಿದ ಪಂದ್ಯಗಳಲ್ಲಿ ಒಂದೆರಡು ಗೆಲುವು ಸಾಧಿಸಿ 16 ಅಂಕ ಗಳಿಸುವುದು ಈ ತಂಡ ಗುರಿಯಾಗಿದೆ.

ಹೈದರಾಬಾದ್
ಹಾಲಿ ಚಾಂಪಿಯನ್ ಸನ್ ರೈಸರ್ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆದರೂ ಈಗ ಸ್ವಲ್ಪ ತಿಣುಕುತ್ತಿದೆ. 11 ಪಂದ್ಯಗಳ ನಂತರ 6 ಗೆಲುವು, 5 ಸೋಲು ಹಾಗೂ 1 ಯಾವುದೇ ಫಲಿತಾಂಶವಿಲ್ಲದೆ 13 ಅಂಕ ಸಂಪಾದಿಸಿದೆ. ಡೇವಿಡ್ ವಾರ್ನರ್ ಅವರ ಸಮರ್ಥ ಬ್ಯಾಟಿಂಗ್ ಹಾಗೂ ನಾಯಕತ್ವದ ನೆರವಿನಿಂದ ಈ ಬಾರಿ ಅರ್ಹತೆ ಪಡೆಯುವ ಲಕ್ಷಣಗಳಿವೆ. ಭುವನೇಶ್ವರ್ ಕುಮಾರ್ ಅತಿ ಹೆಚ್ಚು ವಿಕೆಟ್ ಗಳಿಕೆ ಪಟ್ಟಿಯಲ್ಲಿ ಮುಂದಿದ್ದು, ತಂಡಕ್ಕೆ ಆಧಾರವಾಗಿದ್ದಾರೆ.

ಪಂಜಾಬ್ ತಂಡ
ಕಿಂಗ್ಸ್ ಎಲೆವನ್ ಪಂಜಾಬ್ ಹಾದಿ ಕಠಿಣವಾಗಿದ್ದರೂ ಅವಕಾಶವಂತೂ ಇದ್ದೆ ಇದೆ. 10 ಪಂದ್ಯಗಳಲ್ಲಿ 5 ಗೆದ್ದು, 5 ಸೋತಿದೆ. ಗ್ಲೆನ್ ಮ್ಯಾಕ್ಸ್ ವೆಲ್ ಪಡೆಗೆ ಉಳಿದ ಪಂದ್ಯಗಳಲ್ಲಿ ಗೆದ್ದರೆ ನಾಲ್ಕನೇ ತಂಡವಾಗಿ ಪ್ಲೇ ಆಫ್ ಗೆ ಅರ್ಹತೆ ಪಡೆಯುವ ಸಾಧ್ಯತೆಯಿದೆ. ಪುಣೆಗಿಂತ ಉತ್ತಮ ರನ್ ಸರಾಸತಿ ಹೊಂದಿರುವುದು ಮ್ಯಾಕ್ಸ್ ವೆಲ್ ಪಡೆಗೆ ಪ್ಲಸ್ ಪಾಯಿಂಟ್ ಆಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications