ಡೇರ್ ಡೆವಿಲ್ಸ್ ಗೆಲುವಿನ 'ಶ್ರೇಯಸ್ಸು' ಸಾರ್ಥಕಗೊಳಿಸಿದ ಮಿಶ್ರಾ
ಕಾನ್ಪುರ, ಮೇ 10: ಮಧ್ಯಮ ಕ್ರಮಾಂಕದ ಶ್ರೇಯಸ್ ಅಯ್ಯರ್ ಅವರ ಪ್ರಭಾವಿ ಬ್ಯಾಟಿಂಗ್ ಹಾಗೂ ಇನಿಂಗ್ಸ್ ನ ಕೊನೆಯ ಓವರ್ ನಲ್ಲಿ ಅಮಿತ್ ಮಿಶ್ರಾ ಸಿಡಿಸಿದ ಎರಡು ಭರ್ಜರಿ ಬೌಂಡರಿಗಳ ನೆರವಿನಿಂದಾಗಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ, ಬುಧವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡವನ್ನು 2 ವಿಕೆಟ್ ಗಳಿಂದ ಮಣಿಸಿತು.
ಪಂದ್ಯದ ಗೆಲ್ಲಲು ಕೊನೆಯ ನಾಲ್ಕು ಎಸೆತಗಳಲ್ಲಿ 6 ರನ್ ಅವಶ್ಯಕತೆಯಿದ್ದಾಗ ಮಿಶ್ರಾ ಎರಡು ಬೌಂಡರಿ ಬಾರಿಸಿ ತಂಡಕ್ಕೆ ಗೆಲುವು ತಂದಿದ್ದು ಮಾತ್ರವಲ್ಲ ಅಯ್ಯರ್ ಅವರ ವೀರೋಚಿತ ಹೋರಾಟಕ್ಕೆ ಸಾರ್ಥಕತೆ ತಂದರು.

ಇಲ್ಲಿನ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಲಯನ್ಸ್ ತಂಡ, ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್ ಪೇರಿಸಿತ್ತು. ಈ ಮೊತ್ತವನ್ನು ಹಿಂದಿಕ್ಕಿದ ಡೆಲ್ಲಿ ಡೇರ್ ಡೆವಿಲ್ಸ್ ಪಡೆ, 19. 4 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಗುಜರಾತ್ ತಂಡ, ಅರ್ಧಶತಕ ಸಿಡಿಸಿದ ಆರೋನ್ ಫಿಂಚ್ ಅವರಿಂದಾಗಿ ಉತ್ತಮ ಮೊತ್ತ ದಾಖಲಿಸಿತು.[ಸ್ಕೋರ್ ವಿವರ]

ಫಿಂಚ್ ಅವರ ದೇಣಿಗೆಯ ಜತೆಗೆ, ಆರಂಭಿಕ ಆಟಗಾರ ಈಶನ್ ಕಿಶನ್, ಮಧ್ಯಮ ಕ್ರಮಾಂಕದ ದಿನೇಶ್ ಕಾರ್ತಿಕ್ ಕೂಡ ಬ್ಯಾಟಿಂಗ್ ನಲ್ಲಿ ಮಿಂಚಿದ್ದು ಗುಜರಾತ್ ತಂಡದ ಈ ಉತ್ತಮ ಮೊತ್ತಕ್ಕೆ ಕಾರಣ. ಆದರೆ, ಆನಂತರ ಬ್ಯಾಟಿಂಗ್ ಗೆ ಇಳಿದ ಡೆಲ್ಲಿ ತಂಡ, ಗುಜರಾತ್ ಗಿಂತಲೂ ಉತ್ತಮವಾಗಿ ಬ್ಯಾಟಿಂಗ್ ನಡೆಸಿದ್ದು ಶ್ಲಾಘನೀಯ.
(ಫೋಟೋಗಳು: ಪಿಟಿಐ ಮತ್ತು www.iplt20.com)

ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಕ್ರಿಕೆಟಿಗ
ಈ ಗೆಲುವಿನ ಮೊದಲ ಶ್ರೇಯಸ್ಸು ಅಯ್ಯರ್ ಅವರಿಗೇ ಸಲ್ಲಬೇಕು. ದೊಡ್ಡ ಮೊತ್ತವನ್ನು ಬೆನ್ನಟ್ಟುವ ಭರದಲ್ಲಿ ಆರಂಭಿಕರಾದ ಸಂಜು ಸ್ಯಾಮ್ಸನ್ ಹಾಗೂ ಮೂರನೇ ಕ್ರಮಾಂಕದ ರಿಷಬ್ ಪಂತ್ ಬೇಗನೇ ವಿಕೆಟ್ ಚೆಲ್ಲಿದರೂ, 4ನೇ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿದ ಅವರು, ಮತ್ತೊಬ್ಬ ಆರಂಭಿಕ ಕರುಣ್ ನಾಯರ್ ಜತೆಗೆ 3ನೇ ವಿಕೆಟ್ ಗೆ 57 ರನ್ ಪೇರಿಸಿದರು. ಇನಿಂಗ್ಸ್ ಗೆ ಕೊನೆಯ ಓವರ್ ನವರೆಗೂ ಕ್ರೀಸ್ ನಲ್ಲಿದ್ದು ಆರ್ಭಟಿಸಿದ ಅವರು ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರು.

ಉತ್ತಮ ಪ್ರಯತ್ನದಿಂದ ತಂಡಕ್ಕೆ ಗೆಲುವು
8ನೇ ಓವರ್ ನಲ್ಲಿ ಕರುಣ್ ಔಟಾದ ನಂತರ, ಕ್ರೀಸ್ ನಲ್ಲಿದ್ದ ಅಯ್ಯರ್ ಗೆ ತಂಡದ ಮಿಕ್ಕವರಿಂದ ಸರಿಯಾದ ಬೆಂಬಲ ಸಿಗಲಿಲ್ಲ. ಕ್ರೀಸ್ ನ ಮತ್ತೊಂದು ತುದಿಯಲ್ಲಿ ಒಂದರ ಹಿಂದೊಂದರಂತೆ ವಿಕೆಟ್ ಉರುಳುತ್ತಿದ್ದರೂ ಏಕಾಂಗಿ ಹೋರಾಟ ನಡೆಸಿದ ಅವರು, ತಂಡವನ್ನು ಗೆಲುವಿನ ಗೆರೆಯತ್ತ ತಂದು ನಿಲ್ಲಿಸುವಲ್ಲಿ ಯಶಸ್ವಿಯಾದರು.

ತಂಡವನ್ನು ಗೆಲುವಿನಂಚಿಗೆ ತಂದರು
ವೈಯಕ್ತಿಕ ಶತಕದಂಚಿನಲ್ಲಿದ್ದಾಗ ಔಟಾದರೂ (96 ರನ್, 57 ಎಸೆತ, 15 ಬೌಂಡರಿ, 2 ಸಿಕ್ಸರ್) ತಂಡಕ್ಕೆ ವೀರೋಚಿತ ಜಯ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅಯ್ಯರ್ ಬ್ಯಾಟಿಂಗ್ ಗೆ ಸಾರ್ಥಕತೆ ತಂದ ಮಿಶ್ರಾ
ಶ್ರೇಯಸ್ ಔಟಾದಾಗ ತಂಡದ ಮೊತ್ತ 189 ರನ್. ಆಗ ಕ್ರೀಸ್ ಗೆ ಆಗಮಿಸಿದ ಅಮಿತ್ ಮಿಶ್ರಾ ಅವರು ತಂಡವನ್ನು ಗೆಲುವಿನ ಗೆರೆ ದಾಟಿಸಿದರು. ಶ್ರೇಯಸ್ ಔಟಾದ ನಂತರ ಡೆಲ್ಲಿ ಪಾಲಿಗೆ, ಪಂದ್ಯ ಗೆಲ್ಲಲು 4 ಎಸೆತಗಳಲ್ಲಿ ಆರು ರನ್ ಗಳ ಅಗತ್ಯವಿತ್ತು. ಈ ಓವರ್ ಮಾಡಿದ್ದು ಬಾಸಿಲ್ ಥಂಪಿ. ಆದರೆ, ಅದೇ ಓವರ್ ನ 3 ಮತ್ತು 4ನೇ ಎಸೆತಗಳಲ್ಲಿ ಎರಡು ಭರ್ಜರಿ ಬೌಂಡರಿ ಸಿಡಿಸಿದ ಅಮಿತ್ ಮಿಶ್ರಾ ತಂಡಕ್ಕೆ ರೋಚಕ ಗೆಲುವನ್ನು ತಂದುಕೊಟ್ಟರು. ಹಾಗೊಂದು ವೇಳೆ, ಮಿಶ್ರಾ ಈ ಎರಡು ಬೌಂಡರಿ ಬಾರಿಸಿದೇ ಇದ್ದಿದ್ದರೆ, ಅಯ್ಯರ್ ಅವರ ಬ್ಯಾಟಿಂಗ್ ಸಾರ್ಥಕವಾಗುತ್ತಿರಲಿಲ್ಲ.

ಶ್ರೇಯಸ್ ಬ್ಯಾಟಿಂಗ್ ಮುಂದೆ ಬೌಲಿಂಗ್ ಶಕ್ತಿ ನಿಲ್ಲಲಿಲ್ಲ
ಅತ್ತ, ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಗುಜರಾತ್ ತಂಡವು ಬೌಲಿಂಗ್ ನಲ್ಲಿ ಅಂಥ ಕಟ್ಟುನಿಟ್ಟಾದ ಪ್ರದರ್ಶನ ನೀಡಲಿಲ್ಲ. ಅದಕ್ಕಿಂತ ಮಿಗಿಲಾಗಿ, ಅಯ್ಯರ್ ಮುಂದೆ ಗುಜರಾತ್ ತಂಡದ ಬೌಲಿಂಗ್ ಆಟ ನಡೆಯಲಿಲ್ಲ. ಅಂತಿಮವಾಗಿ, ಡೆಲ್ಲಿ ತಂಡ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications