ಧೋನಿಯನ್ನು ಕೀಳಾಗಿ ನೋಡಿದ ಉದ್ಯಮಿಗೆ ಹಿಗ್ಗಾಮುಗ್ಗಾ ಬೈಯ್ಗುಳ
ಪುಣೆ, ಏಪ್ರಿಲ್ 7: ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವು ಗುರುವಾರ (ಏಪ್ರಿಲ್ 6) ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಹಿನ್ನೆಲೆಯಲ್ಲಿ ಪುಣೆ ತಂಡದ ಆಟಗಾರ ಧೋನಿಯ ಬಗ್ಗೆ ಲಘುವಾಗಿ ಟ್ವೀಟ್ ಮಾಡಿದ್ದ ಉದ್ಯಮಿಯೊಬ್ಬರನ್ನು ಧೋನಿ ಅಭಿಮಾನಿಗಳು ಟ್ವೀಟರ್ ನಲ್ಲಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಉದ್ಯಮಿಯ ಹೆಸರು ಹರ್ಷ ಗೋಯೆಂಕಾ. ಅವರು ಬೇರೆ ಯಾರೂ ಅಲ್ಲ, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರ ಸಹೋದರ. ಕಳೆದ ವರ್ಷವಷ್ಟೇ ಐಪಿಎಲ್ ಗೆ ಕಾಲಿಟ್ಟಿರುವ ಪುಣೆ ತಂಡ, ಧೋನಿ ನಾಯಕತ್ವದಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಹಾಗಾಗಿ, ಈ ಬಾರಿ ತಂಡದ ನಾಯಕತ್ವವನ್ನು ಬದಲಾಯಿಸಿದ್ದು, ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರಿಗೆ ಪುಣೆ ತಂಡದ ನಾಯಕತ್ವ ನೀಡಲಾಗಿದೆ.[ಧೋನಿ ಆಧಾರ್ ಕಾರ್ಡ್ ವಿವರ ಬಹಿರಂಗ, ಸಾಕ್ಷಿ ಗರಂ]

ನೆನ್ನೆ (ಏಪ್ರಿಲ್ 7) ಈ ಬಾರಿಯ ಐಪಿಎಲ್ ನಲ್ಲಿ ತನ್ನ ಮೊದಲ ಪಂದ್ಯವಾಡಿದ ಪುಣೆ, ಮುಂಬೈ ತಂಡದ ವಿರುದ್ಧ 7 ವಿಕೆಟ್ ಜಯ ಪಡೆಯಿತು. 54 ಎಸೆತಗಳಲ್ಲಿ 84 ರನ್ ಚಚ್ಚಿದ ಸ್ಮಿತ್, ಈ ಗೆಲುವಿನ ರೂವಾರಿ ಎನಿಸಿದರು.[ಪುಣೆ ತಂಡದ ನಾಯಕತ್ವದಿಂದ ಧೋನಿ ಔಟ್!]
ಇದನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ಹರ್ಷ, ''ಧೋನಿಯನ್ನು ನಾಯಕತ್ವದಿಂದ ಕೈಬಿಟ್ಟು ಸ್ಮಿತ್ ಗೆ ನಾಯಕತ್ವ ಕೊಟ್ಟ ನಿರ್ಧಾರ ಸರಿಯೆನಿಸಿತು. ಅವರು ಧೋನಿಯನ್ನು ಇಂದು ಮೂಲೆ ಗುಂಪು ಮಾಡಿದರು. ತಂಡಕ್ಕೆ ಯಶಸ್ಸು ತರುವ ನಿಟ್ಟಿನಲ್ಲಿ ಇದು ಮಹತ್ವದ ನಿರ್ಧಾರ'' ಎಂದಿದ್ದರು.
ಅವರ ಈ ಟ್ವೀಟ್ ನಿಂದ ರೊಚ್ಚಿಗೆದ್ದ ಕ್ರಿಕೆಟ್ ಅಭಿಮಾನಿಗಳು ಹರ್ಷ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. 'ಧೋನಿಯವರ ಬಗ್ಗೆ ನಿಮಗೇನು ಗೊತ್ತು? ಅವರ ಬಗ್ಗೆ ಲಘುವಾಗಿ ಮಾತನಾಡಬೇಡಿ' ಎಂದು ಕೆಲವರು ಹೇಳಿದ್ದರೆ, ಮತ್ತೂ ಕೆಲವರು 'ಇಷ್ಟೂ ಸಾಮಾನ್ಯ ಪ್ರಜ್ಞೆ ಇಲ್ಲದ ನೀವು ಅದ್ಹೇಗೆ ಉದ್ಯಮಿಗಳಾದಿರಿ' ಎಂದು ಪ್ರಶ್ನಿಸಿದ್ದಾರೆ.
ಹೀಗೆ, ಪುಂಖಾನುಪುಂಖವಾಗಿ ಬಂದ ಟೀಕೆಗಳಿಂದ ಸುಸ್ತಾದ ಹರ್ಷ, ಕೊನೆಗೂ ನೀವು ಹೇಳಿದ್ದು ಸರಿ. ಧೋನಿ ಒಬ್ಬ ಸ್ಟಾರ್ ಆಟಗಾರ. ಆದರೆ, ಗುರುವಾರದ ಪಂದ್ಯ ಮಾತ್ರ ಸ್ಮಿತ್ ಅವರದ್ದಾಗಿತ್ತು ಎಂದು ತಿಳಿಸಿದ್ದಾರೆ.





- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications