
ನವದೆಹಲಿ, ಮೇ 3: ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ 32ನೇ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡಕ್ವರ್ಥ್ ಲೂಯೀಸ್ ಆಧಾರದಲ್ಲಿ 4 ರನ್ ಗೆಲುವು ದಾಖಲಿಸಿದೆ.
ಪಂದ್ಯದ ವೇಳೆ ಮಳೆ ಕಾಡಿದ್ದರಿಂದ ಡೆಲ್ಲಿ ಕಲೆ ಹಾಕಿದ್ದ 196 ರನ್ ಬದಲಿಗೆ ರಾಜಸ್ಥಾನ್ ತಂಡಕ್ಕೆ 151 ರನ್ ಗುರಿ ನೀಡಲಾಗಿತ್ತಾದರೂ ರಾಜಸ್ಥಾನ ತಂಡ 146 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಟಾಸ್ ಸೋತು ಬ್ಯಾಟಿಂಗಿಳಿಸಲ್ಪಟ್ಟ ಶ್ರೇಯಸ್ ಐಯರ್ ನಾಯಕತ್ವದ ಡೆಲ್ಲಿ ಡೇರ್ ಡೆವಿಲ್ಸ್ ತಂಡ 17.1 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಒಟ್ಟು 196 ರನ್ ಕಲೆ ಹಾಕಿತು. ಪಂದ್ಯದ ವೇಳೆ ಮಳೆ ಕಾಡಿದ್ದರಿಂದ ಡೆಲ್ಲಿ ಇನ್ನಿಂಗ್ಸ್ ನಲ್ಲಿ ಎರಡು ಓವರ್ ಕಡಿತ ಗೊಳಿಸಲಾಗಿತ್ತು.
ಡೆಲ್ಲಿ ಪರ ಪೃಥ್ವಿ ಶಾ (47/25) ಮತ್ತು ಶ್ರೇಯಸ್ ಐಯರ್ (50/35) ಭರ್ಜರಿ ಬ್ಯಾಟ್ ಬೀಸಿದರು.ಇವರಿಬ್ಬರಿಗಿಂತಲೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದವರೆಂದರೆ ರಿಶಬ್ ಪಂತ್ (69/29). 14ನೇ ಓವರ್ ಮುಕ್ತಾಯದ ವೇಳೆ ವಿಕೆಟ್ ಒಪ್ಪಿಸಿ ಪಂತ್ ನಿಂರ್ಗಮಿಸುವಾಗ ತಂಡ 172 ರನ್ ಕಲೆ ಹಾಕಿತ್ತು.
ಬ್ಯಾಟ್ಸ್ಮನ್ ಗಳ ಪೈಕಿ ಕಾಲಿನ್ ಮುನ್ರೋ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ರನ್ ಕೊಡುಗೆ ನೀಡಲಿಲ್ಲ. ಮುನ್ರೋ ಸೊನ್ನೆಗೆ ಮತ್ತು ಮ್ಯಾಕ್ಸ್ ವೆಲ್ 5 ರನ್ ಗಳಿಸಿ ಆರ್ಚರ್ ಎಸೆತಕ್ಕೆ ಎಲ್ಬಿಡ್ಬ್ಲ್ಯೂ ಆಗಿ ಪೆವಿಲಿಯನ್ ನತ್ತ ಸಾಗಿದರು. ರಾಜಸ್ಥಾನ ಪರ ಜಯದೇವ್ ಉನಾದ್ಕತ್ 46 ರನ್ನಿಗೆ 3 ವಿಕೆಟ್ ಕಬಳಿಸಿ ಬೌಲಿಂಗ್ ಪರಾಕ್ರಮ ಮೆರೆದರು.
ಡಕ್ವರ್ಥ್ ಲೂಯೀಸ್ ನಿಯಮದ ಪ್ರಕಾರ ಡೆಲ್ಲಿ ಇನ್ನಿಂಗ್ಸನ್ನು 18 ಓವರ್ಗೆ ಮೊಟಕು ಗೊಳಿಸಲಾಯಿತು. ರಾಜಸ್ಥಾನ ಇನ್ನಿಂಗ್ಸ್ ವೇಳೆ 8 ಓವರ್ ಮೊಟಕುಗೊಳಿಸಿ 12 ಓವರ್ ಗಳಲ್ಲಿ 151 ರನ್ ಗುರಿಯನ್ನು ರಾಜಸ್ಥಾನ್ ತಂಡಕ್ಕೆ ನೀಡಲಾಗಿತ್ತು.
ಆರಂಭದಲ್ಲಿ ರಾಜಸ್ಥಾನ್ ಭರ್ಜರಿ ಬ್ಯಾಟಿಂಗ್ ನಡೆಸಿ ಗೆಲ್ಲುವ ನಿರೀಕ್ಷೆ ಮೂಡಿಸಿತ್ತಾದರೂ ಆರನೇ ಓವರ್ನಲ್ಲಿ ರಾಜಸ್ಥಾನ್ ವಿಕೆಟ್ ಉರುಳುತ್ತಾ ಸಾಗಿತು. ಡಿ' ಆರ್ಸಿ ಶಾರ್ಟ್ 44 (25), ಜೋಸ್ ಬಟ್ಲರ್ 67 (26) ರನ್ ಕೊಡುಗೆ ನೀಡಿದ್ದು ಬಿಟ್ಟರೆ ಬೇರ್ಯಾರೂ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಹೀಗಿದ್ದೂ ರಾಜಸ್ಥಾನ್ 5ನೇ ವಿಕೆಟ್ ಪತನದ ವೇಳೆ 11.4 ಓವರ್ ಗೆ 141 ರನ್ ಪೇರಿಸಿ ಗೆಲುವಿನಂಚಿಗೆ ಬಂದಿತ್ತಾದರೂ ಕಡೇಯ ಎರಡು ಎಸೆತಗಳಲ್ಲಿ ಗುರಿ ಮುಟ್ಟಲಾಗಲಿಲ್ಲ. 12 ಓವರ್ ಗೆ 146 ರನ್ ಪೇರಿಸಿದ ರಾಜಸ್ಥಾನ್ ಡೆಲ್ಲಿಗೆ ಶರಣಾಯಿತು.