ಐಪಿಎಲ್ 12 : ಬಿಕರಿಯಾಗದೆ ಉಳಿದ ಟೆಸ್ಟ್ ಸ್ಟಾರ್ ಪೂಜಾರಾ ಮತ್ತಿತರರು

ಜೈಪುರ, ಡಿಸೆಂಬರ್ 18 : ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸವಕಳಿಯಾದ, ಸಾಮರ್ಥ್ಯ ತೋರಲು ವಿಫಲರಾದ, ಕ್ವಿಕ್ ಫೈರ್ ಕ್ರಿಕೆಟ್ಟಿಗೆ ಹೊಂದಿಕೊಳ್ಳದ ಕ್ರಿಕೆಟಿಗರಿಗೆ ಅವಕಾಶವಿಲ್ಲ ಎಂಬುದು ಪಿಂಕ್ ಸಿಟಿಯಲ್ಲಿ ನಡೆಯುತ್ತಿರುವ ಹರಾಜಿನಲ್ಲಿ ಮತ್ತೆ ಸಾಬೀತಾಗಿದೆ.
ಚೇತೇಶ್ವರ ಪೂಜಾರಾ ಎಂಥ ಟೆಸ್ಟ್ ಆಟಗಾರ ಎಂಬುದು ಎಲ್ಲರಿಗೂ ಗೊತ್ತು. ಆಸ್ಟ್ರೇಲಿಯಾ ವಿರುದ್ಧ ಪರ್ತ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ, ಎರಡನೇ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿಗಿಂತ ಚೇತೇಶ್ವರ ಪೂಜಾರಾ ವಿಕೆಟ್ ಅತ್ಯಂತ ಮೌಲ್ಯಯುತವಾದದ್ದು ಎಂದು ಆಸೀಸ್ ಕ್ರಿಕೆಟಿಗರೇ ಹೇಳಿದ್ದರು. ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲಿಸಿದವರೇ ಪೂಜಾರಾ.
ಆದರೆ, ಐಪಿಎಲ್ ನಲ್ಲಿ? ಅವರನ್ನು ಯಾವ ತಂಡವೂ ಕೊಳ್ಳಲು ಮುಂದಾಗದಿರುವುದು, ಎಂಥ ಆಟಗಾರರನ್ನು ಟಿ20 ಬೇಡುತ್ತದೆ ಎಂಬುದಕ್ಕೆ ಸಾಕ್ಷಿ. ಕೇವಲ 50 ಲಕ್ಷ ಮೂಲ ಬೆಲೆಗೆ ಹರಾಜಿಗೆ ಬಂದಿದ್ದ ಚೇತೇಶ್ವರ ಪೂಜಾರಾ ಅವರ ಹೆಸರು ಬಿಕರಿಯಾಗದೆ ಹಾಗೆಯೇ ಉಳಿದಿದೆ. ಯಾವುದೇ ತಂಡ ಅವರನ್ನು ಕೊಳ್ಳಲು ಪ್ರಯತ್ನವನ್ನೇ ಮಾಡಿಲ್ಲ. ಹಾಗೆಂದ ಮಾತ್ರಕ್ಕೆ ಅವರು ಸವಕಳಿಯಾದ ಆಟಗಾರ ಎಂದು ಹೇಳಲು ಸಾಧ್ಯವೆ? ಅವರು ಟೆಸ್ಟ್ ತಾರೆ ಅಷ್ಟೇ.
ಐಪಿಎಲ್ 2019ರ ಹರಾಜು ವಿವರ ವಿಶೇಷ ಪುಟದಲ್ಲಿ ಪಡೆಯಿರಿ

ಬ್ರೆಂಡನ್ ಮೆಕಲ್ಲಮ್
ಭರ್ಜರಿ ಹೊಡೆತಗಳಿಗೆ ಹೆಸರಾಗಿದ್ದ ಆರಂಭಿಕ ಆಟಗಾರ ನ್ಯೂಜಿಲೆಂಡ್ ನ 36 ವರ್ಷದ ಬ್ರೆಂಡನ್ ಮೆಕಲ್ಲಮ್ ಒಂದಾನೊಂದು ಕಾಲದಲ್ಲಿ ಬೌಲರ್ ಗಳಿಗೆ ಕನಸಲ್ಲಿ ಬಂದು ಕಾಡುತ್ತಿದ್ದರು. ಆದರೆ, ಅವರೀಗ ಆಟದ ಲಯ ಕಳೆದುಕೊಂಡಿದ್ದಾರೆ. ಕಳೆದ ಸೀಸನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 6 ಪಂದ್ಯಗಳಲ್ಲಿ ಆಡಿ ಕೇವಲ 127 ರನ್ ಮಾತ್ರ ಗಳಿಸಿದ್ದರು.

ಯುವರಾಜ್ ಸಿಂಗ್
ಭಾರತ ತಂಡದಲ್ಲಿ ಸ್ಥಾನ ಗಳಿಸುವಲ್ಲಿ ಸತತವಾಗಿ ವಿಫಲರಾಗಿರುವ ಯುವರಾಜ್ ಸಿಂಗ್ ಅವರು ಹರಾಜಾಗದೆ ಉಳಿದಿರುವ ಮತ್ತೊಬ್ಬ ಪ್ರಮುಖ ಆಟಗಾರ. 1 ಕೋಟಿ ರುಪಾಯಿ ಮೂಲ ಬೆಲೆ ಅವರ ಹೆಸರನ್ನು ಕೂಗಲಾಗಿತ್ತು. ಆದರೆ, ಯಾವುದೇ ತಂಡ ಆಸಕ್ತಿ ತೋರಿಲ್ಲ. ಇದರಲ್ಲಿಯೂ ಮಾರಾಟವಾಗದೆ ಉಳಿದರೆ ಎಲ್ಲ ಕ್ರಿಕೆಟ್ ಗಳಿಂದ ಅವರು ನಿವೃತ್ತರಾಗುವುದು ಉತ್ತಮ.

ಕ್ರಿಸ್ ವೋಕ್ಸ್
ಇಂಗ್ಲೆಂಡ್ ನ 29 ವರ್ಷದ ಆಲ್ ರೌಂಡರ್ ಆಟಗಾರ ಕ್ರಿಸ್ ವೋಕ್ಸ್ (ಕ್ರಿಸ್ಟೋಫರ್ ರೋಜರ್ ವೋಕ್ಸ್) ಹರಾಜಾಗದೆ ಉಳಿದಿದ್ದು ನಿಜಕ್ಕೂ ಅಚ್ಚರಿಯ ಸಂಗತಿ. ಕಳೆದ ಸೀಸನ್ ನಲ್ಲಿ ಕ್ರಿಸ್ ವೋಕ್ಸ್ 7.4 ಕೋಟಿ ರುಪಾಯಿಗೆ ಮಾರಾಟವಾಗಿದ್ದರು. ಅವರು ಕೂಡ ಈ ಬಾರಿ ಎಲ್ಲ ತಂಡಗಳಿಂದ ಅವಗಣನೆಗೆ ಗುರಿಯಾಗಿದ್ದಾರೆ. ಐಪಿಎಲ್ ನಲ್ಲಿ ಅವರು ಆಡಿರುವ 18 ಪಂದ್ಯಗಳಲ್ಲಿ 11 ಇನ್ನಿಂಗ್ಸ್ ಗಳಲ್ಲಿ 63 ರನ್ ಮಾತ್ರ ಗಳಿಸಿದ್ದಾರೆ. ಅವರು ಮಧ್ಯದಲ್ಲಿಯೇ ತಂಡ ಬಿಟ್ಟು ಇಂಗ್ಲೆಂಡಿಗೆ ತೆರಳಿದ್ದರು.

ಮನೋಜ್ ತಿವಾರಿ
ಕಳೆದ ಸೀಸನ್ ನಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ಪರ 1 ಕೋಟಿ ರುಪಾಯಿಗೆ ಬಿಕರಿಯಾಗಿದ್ದ 33 ವರ್ಷದ ಮನೋಜ್ ತಿವಾರಿಯನ್ನು ಈ ಬಾರಿ ಯಾವ ತಂಡವೂ ಪರಿಗಣಿಸಿಲ್ಲ. 50 ಲಕ್ಷ ರುಪಾಯಿ ಮೂಲ ಬೆಲೆಗೆ ಅವರನ್ನು ಬಿಡ್ ಮಾಡಲಾಗಿತ್ತು. ಇಲ್ಲಿಯವರೆಗೆ ಅವರು ಐಪಿಎಲ್ ನಲ್ಲಿ 160 ಪಂದ್ಯಗಳನ್ನು ಆಡಿದ್ದು, 75 ರನ್ ಗರಿಷ್ಠ ರನ್ ನೊಂದಿಗೆ 3055 ರನ್ ಗಳಿಸಿದ್ದಾರೆ.

ಬೆನ್ ಮ್ಯಾಕ್ ಡರ್ಮಾಟ್
ಆಸ್ಟ್ರೇಲಿಯಾ ಪರ ಆಡುವ 24 ವರ್ಷದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮನ್ ಆಗಿರುವ ಬೆನ್ ಮ್ಯಾಕ್ ಡರ್ಮಾಟ್ ಅವರು ಬಿಕರಿಯಾಗದೆ ಉಳಿದಿರುವ ಮತ್ತೊಬ್ಬ ಆಟಗಾರ. ಮೂಲ ಬೆಲೆ 50 ಲಕ್ಷ ರುಪಾಯಿಗೆ ಆರಂಭವಾದ ಅವರ ಹರಾಜಿಗೆ ಯಾವ ತಂಡವೂ ಆಸಕ್ತಿ ತೋರಲಿಲ್ಲ. ಕಳೆದ ಬಾರಿ ಕೂಡ ಕೇವಲ 30 ಲಕ್ಷ ರುಪಾಯಿಗೆ ಅವರ ಹರಾಜು ಆರಂಭವಾಗಿದ್ದರೂ ಅವರು ಮಾರಾಟವಾಗದೆ ಉಳಿದಿದ್ದರು.

ನಮನ್ ಓಝಾ
ಭಾರತದ ಪರ ಕೇವಲ 1 ಟೆಸ್ಟ್ ಮತ್ತು 1 ಏಕದಿನ ಪಂದ್ಯ ಆಡಿರುವ 35 ವರ್ಷದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ನಮನ್ ಓಝಾ ಐಪಿಎಲ್ ನಲ್ಲಿ ಯಾವ ತಂಡಕ್ಕೂ ಬೇಡವಾಗಿದ್ದಾರೆ. ಮೂಲ ಬೆಲೆ 75 ಲಕ್ಷ ರುಪಾಯಿಗೆ ಅವರನ್ನು ಬಿಡ್ ಮಾಡಲಾಗಿತ್ತು. ಕಳೆದ ಸೀಸನ್ ನಲ್ಲಿ ಅವರು ದೆಹಲಿ ಕ್ಯಾಪಿಟಲ್ಸ್ ಪರ 1.4 ಕೋಟಿ ರುಪಾಯಿಗೆ ಮಾರಾಟವಾಗಿದ್ದರು. ಐಪಿಎಲ್ ನಲ್ಲಿ ಅವರು 93 ಪಂದ್ಯಗಳನ್ನು ಆಡಿದ್ದು, 1543 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಮೊತ್ತ ಅಜೇಯ 94.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications