
ನವದೆಹಲಿ, ಏಪ್ರಿಲ್ 14: ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಎಂಎಸ್ ಧೋನಿಗೆ ಎನಿಲ್ಲವಾದರೂ 2-3 ಪಂದ್ಯಗಳ ನಿಷೇಧವನ್ನಾದರೂ ಹೇರಬೇಕಿತ್ತು ಎಂದಿದ್ದಾರೆ. ಪಂದ್ಯದ ವೇಳೆ ಮೈದಾನಕ್ಕೆ ತೆರಳಿ ಅಂಪೈರ್ ಜೊತೆ ಧೋನಿ ವಾಗ್ವಾದಕ್ಕಿಳಿದಿದ್ದ ಪ್ರಸಂಗಕ್ಕೆ ಸಂಬಂಧಿಸಿ ಸೆಹ್ವಾಗ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 11ರಂದು ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದಿದ್ದ ಐಪಿಎಲ್ 25ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ನೋಬಾಲ್‌ಗೆ ಸಂಬಂಧಿಸಿ ಗರಂ ಆದ ಧೋನಿ ಆಟದ ನಡುವೆಯೇ ಮೈದಾನ ಪ್ರವೇಶಿಸಿ ಅಂಪೈರ್ ಅವರನ್ನು ಪ್ರಶ್ನಿಸಿದ್ದು ವಿವಾದಕ್ಕೀಡಾಗಿತ್ತು.
ಈ ವಿವಾದ ಕುರಿತು ಕ್ರಿಕ್‌ಬಝ್ ಜೊತೆ ಮಾತನಾಡುತ್ತ ಸೆಹ್ವಾಗ್, 'ನನಗನ್ನಿಸುವ ಪ್ರಕಾರ ಧೋನಿಗೆ 2-3 ಪಂದ್ಯಗಳ ನಿಷೇಧ ಹೇರಬೇಕಿತ್ತು. ಯಾಕೆಂದರೆ ಇವತ್ತು ಧೋನಿ ಮಾಡಿದರೆ, ನಾಳೆ ಇನ್ನೊಬ್ಬ ನಾಯಕ ಇದನ್ನೇ ಮಾಡುತ್ತಾನೆ. ಹೀಗಾದರೆ ಅಂಪೈರ್‌ಗಳ ಮೌಲ್ಯವೇನು?' ಎಂದಿದ್ದಾರೆ.
ಪಂದ್ಯದ ವೇಳೆ 'ಗರಂ ಆದ ಕೂಲ್ ಕ್ಯಾಪ್ಟನ್' ಧೋನಿಗೆ ಸಂಭಾವನೆಯ ಶೇ.50ರಷ್ಟು ದಂಡ ವಿಧಿಸಲಾಗಿತ್ತು. ಧೋನಿಯ ಈ ನಡೆಗೆ ಕ್ರಿಕೆಟ್ ವಲಯದಲ್ಲ ಟೀಕೆಯೂ ವ್ಯಕ್ತವಾಗಿತ್ತು. ಆದರೆ ಧೋನಿ ಅಭಿಮಾನಿಗಳು ಮಾತ್ರ ಧೋನಿ ಈ ವರ್ತನೆಯನ್ನು ಸಮರ್ಧಿಸಿಕೊಂಡಿದ್ದರು. ಒಟ್ಟಿನಲ್ಲಿ ಈ ವಿವಾದ ಈಗಲೂ ಕ್ರಿಕೆಟ್ ವಲಯದಲ್ಲಿ ಚರ್ಚಿಸಲ್ಪಡುತ್ತಿದೆ.