
ಮುಂಬೈ, ಏಪ್ರಿಲ್ 4: ಮುಂಬೈನಲ್ಲಿ ಬುಧವಾರ (ಏಪ್ರಿಲ್ 3) ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರ ಹಾರ್ದಿಕ್ ಪಾಂಡ್ಯ 8 ಎಸೆತಕ್ಕೆ 25 ರನ್ ಸಿಡಿಸಿದ್ದರು. ಅದಕ್ಕೂ ಹೆಚ್ಚಾಗಿ ಪಾಂಡ್ಯ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದು ಎಂಎಸ್ ಧೋನಿಯ ಹೆಲಿಕಾಪ್ಟರ್ ಶಾಟ್ ಮೂಲಕ.
ಅದೂ ಧೋನಿಯ ಸಿಎಸ್‌ಕೆ ಪಂದ್ಯದ ವಿರುದ್ಧ ಆಡುವಾಗಲೇ ಪಾಂಡ್ಯ ಹೆಲಿಕಾಪ್ಟರ್ ಬಾರಿಸಿದ್ದು ವಿಶೇಷವೆನಿಸಿತು. ಟಾಸ್ ಸೋತು ಇನ್ನಿಂಗ್ಸ್ ಇಳಿದ ಮುಂಬೈ ಇಂಡಿಯನ್ಸ್‌ಗೆ ಸೂರ್ಯ ಕುಮಾರ್ ಯಾದವ್ ಮತ್ತು ಕೃನಾಲ್ ಪಾಂಡ್ಯ ಕ್ರಮವಾಗಿ 59, 42 ರನ್ ಸೇರಿಸಿ ಕೊಂಚ ಬಲ ತುಂಬಿದ್ದರು. ಆದರೆ ತಂಡದ ರನ್ ಗಮನಾರ್ಹ ಏರಿಕೆ ಕಂಡಿದ್ದು ಅಂತಿಮ ಮೂರು ಓವರ್‌ಗಳಲ್ಲಿ.
ಮುಂಬೈ ಇನ್ನಿಂಗ್ಸ್ ವೇಳೆ ಕೊನೆಯೆರಡು ಓವರ್‌ನಲ್ಲಿ ಕೀರನ್ ಪೊಲಾರ್ಡ್ ಮತ್ತು ಪಾಂಡ್ಯ ಕ್ರೀಸ್‌ನಲ್ಲಿದ್ದರು. ಪಾಂಡ್ಯ 8 ಎಸೆತಕ್ಕೆ 25 ರನ್, ಪೊಲಾರ್ಡ್ 7 ಎಸೆತಕ್ಕೆ 17 ರನ್ ಬಾರಿಸಿದ್ದರು. 20ನೇ ಓವರ್‌ನಲ್ಲಿ ಪಾಂಡ್ಯ ಹೆಲಿಕಾಪ್ಟರ್ ಶಾಟ್ ಬಾರಿಸಿ, 'ಎಲಾ ಇವ್ನಾ, ಸೂರ್ಯಂಗೇ ಟಾರ್ಚಾ..?' ಅಂತ ಧೋನಿಯೇ ಮನಸ್ಸಿನಲ್ಲಿ ಅಂದುಕೊಂಡರೇನೋ ಎಂಬಂತೆ ಮಾಡಿದ್ದರು.
ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯ, 'ಹೆಲಿಕಾಪ್ಟರ್ ಶಾಟ್ ನೋಡಿ ಧೋನಿ ಬಂದು ನನ್ನನ್ನು ಅಭಿನಂದಿಸುತ್ತಾರೆ ಎಂದು ಭಾವಿಸಿದ್ದೆ. ಆದರೂ ಆ ಹೊಡೆತಕ್ಕೆ ನನಗೆ ಧೋನಿ ಸ್ಫೂರ್ತಿ. ಆ ಬಗ್ಗೆ ಖುಷಿಯಿದೆ' ಎಂದರು. ಪಂದ್ಯವನ್ನು ಮುಂಬೈ ಇಂಡಿಯನ್ಸ್ 37 ರನ್‌ನಿಂದ ಗೆದ್ದಿತ್ತು.