
ಮುಂಬೈ, ಮಾರ್ಚ್ 24: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್ ) 2019 ಚುಟುಕು ಕ್ರಿಕೆಟ್ ಸಮರಕ್ಕೆ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಮಾರ್ಚ್ 23ರಂದು ಅಧಿಕೃತವಾಗಿ ಚಾಲನೆ ಸಿಕ್ಕಿದೆ.
ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ತನ್ನ ಮೊದಲ ಪಂದ್ಯವನ್ನು ಮಾರ್ಚ್ 24ರಂದು ಆಡಲಿದ್ದು, ಹೊಸ ಹೆಸರು, ಹೊಸ ಜರ್ಸಿಯೊಂದಿಗೆ ಕಣಕ್ಕಿಳಿಯಲಿರುವ ಡೆಲ್ಲಿ ಕ್ಯಾಪಿಟಲ್ ತಂಡವನ್ನು ಎದುರಿಸಲಿದೆ.
ಐಪಿಎಲ್ 12ರ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಮೂರು ಬಾರಿ ರನ್ನರ್ ಅಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸುಲಭವಾಗಿ ಶರಣಾಯಿತು. 71ರನ್ ಗಳ ಗುರಿಯನ್ನು ಧೋನಿ ಪಡೆ ಚೇಸ್ ಮಾಡಿ ಮೊದಲ ಜಯ ದಾಖಲಿಸಿತು.
ಮುಂಬೈಗೆ ಹಿನ್ನಡೆ: ಮುಂಬೈ ತಂಡದ ಸ್ಟಾರ್ ಆಟಗಾರ, ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ ಅವರು, ಈ ಬಾರಿ ಐಪಿಎಲ್ ನ ಮೊದಲ 6 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಶ್ರೀಲಂಕಾದ ಸೂಪರ್ ಪ್ರಾವಿನ್ಶಿಯಲ್ ಏಕದಿನ ದೇಶಿ ಟೂರ್ನಮೆಂಟ್ ನಲ್ಲಿ ಮಾಲಿಂಗ ಆಡುತ್ತಿದ್ದು, ಏಪ್ರಿಲ್ 4 ರಿಂದ ಏಪ್ರಿಲ್ 11ರತನಕ ಆಯೋಜನೆಗೊಂಡಿದೆ. ವಿಶ್ವಕಪ್ ಗೆ ಪೂರ್ವತಯಾರಿಯಾಗಿರುವುದರಿಂದ ಮಾಲಿಂಗ ಅವರು ಈ ಟೂರ್ನಮೆಂಟ್ ತಪ್ಪಿಸಿಕೊಳ್ಳುತ್ತಿಲ್ಲ.
ಕಳೆದ ವರ್ಷ ಮುಂಬೈ ಇಂಡಿಯನ್ಸ್ ಪರ ಬೌಲಿಂಗ್ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಮಾಲಿಂಗ ಅವರು, ಈ ಬಾರಿ ಐಪಿಎಲ್ ನಲ್ಲಿ ಆಟಗಾರನಾಗಿ ಕಣಕ್ಕಿಳಿಯಲು ಸಿದ್ಧರಾಗಿದ್ದರು. ಆದರೆ, ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಐಪಿಎಲ್ ಆಡಲು ಅನುಮತಿ ಸಿಕ್ಕಿಲ್ಲ. ಐಪಿಎಲ್ ಹರಾಜಿನಲ್ಲಿ 2 ಕೋಟಿ ರು ಗೆ ಮಾಲಿಂಗರನ್ನು ಮುಂಬೈ ಇಂಡಿಯನ್ಸ್ ತಂಡವು ಕೊನೆ ಕ್ಷಣದಲ್ಲಿ ಖರೀದಿಸಿತ್ತು.
'ತಮ್ಮ ಸ್ಥಾನಕ್ಕೆ ಬದಲಿ ಆಟಗಾರನನ್ನು ಆಯ್ಕೆ ಮಾಡಿಕೊಳ್ಳುವಂತೆ ಮುಂಬೈ ಫ್ರಾಂಚೈಸಿ ಮ್ಯಾನೇಜ್ಮೆಂಟ್ ಗೆ ತಿಳಿಸಿದ್ದಾರೆ. ಸುಮಾರು 7 ರಿಂದ 8 ಪಂದ್ಯಗಳನ್ನಾಡಲು ಆಗುವುದಿಲ್ಲ, ನನಗಾಗಿ ಕಾಯುವ ಬದಲು ಬದಲಿ ಆಟಗಾರನನ್ನು ಹೊಂದುವುದು ಉತ್ತಮ, ಐಪಿಎಲ್ ಮಿಸ್ ಆಗುವುದರಿಂದ ಆರ್ಥಿಕ ನಷ್ಟವಾದರೂ, ದೇಶದ ಏಕದಿನ ತಂಡ ಮುನ್ನಡೆಸಬೇಕಿದೆ' ಮಾಲಿಂಗ ಪ್ರತಿಕ್ರಿಯಿಸಿದ್ದಾರೆ.
ಕಳೆದ ಆರು ತಿಂಗಳಿನಿಂದ ಉತ್ತಮ ಬೌಲಿಂಗ್ ಮಾಡುತ್ತಿರುವ ಮಾಲಿಂಗ ಅವರು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯಕ್ಕೂ ಆಯ್ಕೆಯಾಗಿದ್ದರು. ಈಗ ವಿಶ್ವಕಪ್ ತಂಡದಲ್ಲಿ ಆಡಲು ಬಯಸಿದ್ದಾರೆ.