ಐಪಿಎಲ್ 2020: ಲೀಗ್ ಹಂತದಲ್ಲಿ ಎಲ್ಲರನ್ನೂ ಅಚ್ಚರಿಗೊಳಪಡಿಸಿದ ಐವರು ಕ್ರಿಕೆಟಿಗರು

ಐಪಿಎಲ್ 13ನೇ ಆವೃತ್ತಿಯ ಲೀಗ್ ಹಂತ ಸಂಪೂರ್ಣವಾಗಿದೆ. ತೀವ್ರ ಪೈಪೋಟಿಯಿಂದ ಕೂಡಿದ ಪಂದ್ಯಗಳಲ್ಲಿ ಅಂತಿಮವಾಗಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆದುಕೊಳ್ಳಲು ಯಶಸ್ವಿಯಾಗಿದೆ.
ಈ ಬಾರಿಯ ಟೂರ್ನಿಯಲ್ಲಿ ಪಾಲ್ಗೊಂಡಿರುವ ಎಲ್ಲಾ ತಂಡಗಳು ಕನಿಷ್ಠ 12 ಅಂಕಗಳನ್ನು ಪಡೆದಿರುವುದು ಮತ್ತೊಂದು ವಿಶೇಷತೆಯಾಗಿದೆ. ಮಾತ್ರವಲ್ಲದೆ ಪ್ಲೇ ಆಫ್‌ನ ಮೂರು ಸ್ಥಾನಗಳು ಅಂತಿಮ ಎರಡು ದಿನಗಳಲ್ಲಿ ನಿರ್ಧಾರವಾಗಿದ್ದು ಟೂರ್ನಿಯೊಳಗಿದ್ದ ಪೈಪೋಟಿಗೆ ಸಾಕ್ಷಿಯಾಗಿದೆ.
ಇನ್ನು ಲೀಗ್ ಆಡಿದ 56 ಪಂದ್ಯಗಳಲ್ಲಿ ಕೆಲ ತಂಡಗಳ ಕೆಲ ಆಟಗಾರರು ಅತಿ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದಾರೆ. ಅದ್ಭತ ಪ್ರದರ್ಶನದ ಮೂಲದ ಎಲ್ಲರನ್ನೂ ಅಚ್ಚರಿಗೆ ಒಳಪಡಿಸಿದ್ದಾರೆ. ಹೀಗೆ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಐವರು ಆಟಗಾರರು ಯಾರು ಹಾಗೂ ಅವರ ಪ್ರದರ್ಶನ ಹೇಗಿತ್ತು ಎಂಬುದನ್ನು ಮುಂದೆ ಓದಿ..

ಕೆಎಲ್ ರಾಹುಲ್
ಕೆಎಲ್ ರಾಹುಲ್‌ಗೆ 2020 ಅದ್ಭುತವಾಗಿಯೇ ಆರಂಭವಾಗಿತ್ತು. ನ್ಯೂಜಿಲೆಂಟ್ ವಿರುದ್ದದ ಸೀಮಿತ ಓವರ್‌ಗಳ ಸರಣಿಯಲ್ಲಿ ಟಿ20 ಹಾಗೂ ಎಕದಿನ ಎರಡರಲ್ಲೂ ರಾಹುಲ್ 200ಕ್ಕೂ ಅಧಿಕ ರನ್ ಗಳಿಸಿ ಮಿಂಚಿದ್ದರು. ಆದರೆ ಐಪಿಎಲ್‌ನಲ್ಲಿ ರಾಹುಲ್‌ಗೆ ಇನ್ನಷ್ಟು ಹೆಚ್ಚಿನ ಸವಾಲಿತ್ತು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಇದೇ ಮೊದಲ ಬಾರಿಗೆ ಕೆಎಲ್ ರಾಹುಲ್ ಮುನ್ನಡೆಸಲಿದ್ದರು. ಐಪಿಎಲ್‌ನಂತಾ ಮಹತ್ವದ ಟೂರ್ನಿಯಲ್ಲಿ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಿದರೂ ಕೆಎಲ್ ರಾಹುಲ್ ಅದ್ಭುತ ನಾಯಕತ್ವವನ್ನು ನೀಡಿದರು. ಜೊತೆಗೆ ಬ್ಯಾಟಿಂಗ್‌ನಲ್ಲೂ ಶ್ರೇಷ್ಠ ಪ್ರದರ್ಶನ ನೀಡಿದ ಕೆಎಲ್ ರಾಹುಲ್ 14 ಪಂದ್ಯಗಳಲ್ಲಿ 670 ರನ್ ಸಿಡಿಸಿದರು. ಇದರಲ್ಲಿ ಐದು ಅರ್ಧ ಶತಕ ಹಾಗೂ ಒಂದು ಭರ್ಜರಿ ಶತಕ ಸೇರಿಕೊಂಡಿದೆ.

ಶಿಖರ್ ಧವನ್
ಶಿಖರ್ ಧವನ್ ಕಲೆದ ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಹಲವು ತಂಡಗಳಲ್ಲಿ ಆಡಿ ಉತ್ತಮ ಪ್ರದರ್ಶನವನ್ನು ನೀಡಿಕೊಂಡು ಬಂದಿದ್ದಾರೆ. ಐಪಿಎಲ್‌ನಲ್ಲಿ 5000 ರನ್ ಹಾಗೂ 500 ಬೌಂಡರಿ ಬಾರಿಸಿದ ಕೇವಲ ಮೂರು ಬ್ಯಾಟ್ಸ್‌ಮನ್‌ಗಳಲ್ಲಿ ಧವನ್ ಕೂಡ ಒಬ್ಬರು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಧವನ್‌ಗೆ ಹೆಚ್ಚಿನ ಸವಾಲಿತ್ತು. ತನ್ನ ಅಸ್ಥಿತ್ವವನ್ನು ತೋರಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದರು ಧವನ್. ಅದಕ್ಕೆ ಕಾರಣ 2019ರ ವಿಶ್ವಕಪ್ ಬಳಿಕ ಆರಂಭಿಕರಾಗಿ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ಪೃಥ್ವಿ ಶಾ ನೀಡುತ್ತಿರುವ ಪ್ರದರ್ಶನ ಧವನ್ ಅವರಿಗೆ ಅವಕಾಶಗಳು ಕಡಿಮೆಯಾಗುವಂತೆ ಮಾಡಿತ್ತು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಧವನ್ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಸತತ 2 ಶತಕವನ್ನು ಗಳಿಸಿರುವ ಧವನ್ 14 ಪಂದ್ಯಗಳಲ್ಲಿ 525 ರನ್ ಗಳನ್ನು ಬಾರಿಸಿದ್ದು 47ಕ್ಕೂ ಅಧಿಕ ಸರಾಸರಿಯನ್ನು ಹೊಂದಿದ್ದಾರೆ. 145ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿ ಅಚ್ಚರಿ ಮೂಡಿಸಿದ್ದಾರೆ.

ಸಂದೀಪ್ ಶರ್ಮಾ
ಸಂದೀಪ್ ಶರ್ಮಾ ಕಳೆದ ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಪ್ರದರ್ಶನವನ್ನು ನಿಡುತ್ತಿದ್ದಾರೆ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸದ್ದು ಮಾಡಿದ್ದಾರೆ. ಭುವನೇಶ್ವರ್ ಕುಮಾರ್ ಗಾಯಗೊಂಡು ಹೊರಬಿದ್ದ ಬಳಿಕ ಹೈದರಾಬಾದ್ ತಂಡ ಖಲೀಲ್ ಅಹ್ಮದ್ ಅವರನ್ನು ಮುಖ್ಯ ಬೌಲರ್ ಆಗಿ ಜವಾಬ್ಧಾರಿ ನೀಡಿತ್ತು. ಆದರೆ ಸಂದೀಪ್ ಶರ್ಮಾ ತನ್ನ ಶ್ರೇಷ್ಠ ಪ್ರದರ್ಶನದ ಮೂಲಕ ಆ ಜವಾಬ್ಧಾರಿಯನ್ನು ತಾವೇ ವಹಿಸಿಕೊಂಡರು. ಪವರ್‌ಪ್ಲೇನಲ್ಲಿ ಶ್ರೇಷ್ಠ ಪ್ರದರ್ಶನವನ್ನು ನಿಡಿರುವ ಸಂದೀಪ್ ಶರ್ಮಾ ಆಡಿ 11 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್ ಅವರಂತಾ ಆಟಗಾರರ ವಿಕೆಟ್‌ಗಳು ಸಂದೀಪ್ ಶರ್ಮಾ ಖಾತೆಯಲ್ಲಿದೆ.

ಮೊಹಮ್ಮದ್ ಶಮಿ
ಸೀಮಿತ ಓವರ್‌ಗಳ ಮಾದರಿಯಲ್ಲಿ ಮೊಹಮದ್ ಶಮಿ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. ವಿಕೆಟ್ ಪಡೆಯಲು ಯಶಸ್ವಿಯಾದರೂ ಡೆತ್ ಓವರ್‌ಗಳಲ್ಲಿ ರನ್‌ಗೆ ಕಡಿವಾಣ ಹಾಕುವಲ್ಲಿ ವಿಫಲರಾಗುತ್ತಾರೆ ಎಂಬ ಮಾತಿದೆ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಮೊಹಮ್ಮದ್ ಶಮಿ 14 ಓವರ್‌ಗಳಲ್ಲಿ 20 ವಿಕೆಟ್ ಪಡೆದು ಮಿಂಚಿದ್ದಾರೆ. ಜೊತೆಗೆ ಕಿಂಗ್ಸ್ ಇಎಲವೆನ್ ಪಂಜಾಬ್ ತಂಡದ ಬೌಲಿಂಗ್ ವಿಭಾಗವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅದರಲ್ಲೂ ಸತತ ಎರಡು ಸೂಪರ್ ಓವರ್ ನಡೆದ ಪಂದ್ಯದಲ್ಲಿ ಐದು ರನ್‌ಗಳಿಗೆ ಎದುರಾಳಿಯನ್ನು ಶಮಿ ನಿಯಂತ್ರಿಸಿದ್ದು ಎಲ್ಲರನ್ನೂ ಅಚ್ಚರಿಗೆ ಒಳಪಡಿಸಿದೆ.

ಜಸ್ಪ್ರಿತ್ ಬೂಮ್ರಾ
ಗಾಯಗೊಂಡು ಚಿಕಿತ್ಸೆ ಪಡೆದ ಬಳಿಕ ಟೀಮ್ ಇಂಡಿಯಾಗೆ ಈ ವರ್ಷಾರಮಭದಲ್ಲಿ ಪುನರಾಗಮನ ಮಾಡಿದ ಬೂಮ್ರಾ ಉತ್ತಮ ಫಾರ್ಮ್‌ನಲ್ಲಿರಲಿಲ್ಲ. ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿ ಹಾಗೂ ನ್ಯೂಜಿಲೆಂಡ್ ನೆಲದಲ್ಲಿ ನಡೆದ ಸರಣಿಯಲ್ಲಿ ಬೂಮ್ರಾ ಕೆಟ್ಟ ಪ್ರದರ್ಶನ ನೀಡಿದ್ದರು. ಈ ಬಾರಿಯ ಐಪಿಎಲ್ ಆರಂಭವಾದಾಗಲೂ ಆರಂಭಿಕ ಕೆಲ ಪಂದ್ಯಗಳಲ್ಲಿ ಬೂಮ್ರಾ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ. ಆದರೆ ಆ ಸಂದರ್ಭದಲ್ಲಿ ಬೂಮ್ರಾ ಕೈಗೆ ನಾಯಕ ರೋಹಿತ್ ಶರ್ಮಾ ಹೊಸ ಚೆಂಡನ್ನು ನೀಡಿದ್ದರು. ಅಲ್ಲಿಂದ ಟೂರ್ನಿಯುದ್ದಕ್ಕೂ ಬೂಮ್ರಾ ಹಿಂದಿರುಗಿ ನೋಡಿದ್ದೇ ಇಲ್ಲ. 13 ಪಂದ್ಯಗಳಲ್ಲಿ ಕಣಕ್ಕಿಳಿದಿರುವ 23 ವಿಕೆಟ್ ಪಡೆದು ಪರ್ಪಲ್ ಕ್ಯಾಪ್‌ಗಾಗಿ 25 ವಿಕೆಟ್ ಪಡೆದಿರುವ ಕಗಿಸೋ ರಬಡಾ ಜೊತೆಗೆ ಪೈಪೋಟಿಯ ಸ್ಪರ್ಧೆಗೆ ಇಳಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications