
ಚೆನ್ನೈ, ಆಗಸ್ಟ್ 11: ಆಗಸ್ಟ್ 21ರಂದು ದುಬೈಗೆ ತಲುಪಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ತಂಡ ಚೆನ್ನೈ ಸೂಪರ್ ಕಿಂಗ್ಸ್, ತನ್ನ ತಂಡದ ಬಹುತೇಕ ವಿದೇಶಿ ಆಟಗಾರರಿಲ್ಲದೆಯೇ ಅಭ್ಯಾಸ ಆರಂಭಿಸಲಿದೆ. ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿರುವ 13ನೇ ಆವೃತ್ತಿಯ ಐಪಿಎಲ್ ನವೆಂಬರ್ 10ರಂದು ಕೊನೆಗೊಳ್ಳಲಿದೆ.
ಬಲ್ಲ ಮಾಹಿತಿಯ ಪ್ರಕಾರ, ಸಿಎಸ್‌ಕೆ ತಂಡದ ದಕ್ಷಿಣ ಆಫ್ರಿಕಾ ಆಟಗಾರರಾದ ಫಾ ಡು ಪ್ಲೆಸಿಸ್ ಸೆಪ್ಟೆಂಬರ್ 1ರ ಬಳಿಕವಷ್ಟೇ ತಂಡ ಸೇರಿಕೊಳ್ಳಲಿದ್ದಾರೆ. ಡು ಪ್ಲೆಸಿಸ್ ತನ್ನ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಅವರಿಗೆ ಸೆಪ್ಟೆಂಬರ್ 1 ಮೊದಲ ತಂಡವನ್ನು ಸೇರಿಕೊಳ್ಳಲಾಗುತ್ತಿಲ್ಲ.
ಐಪಿಎಲ್‌ಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಪ್ರಯಾಣಿಸುವಾಗ ದಕ್ಷಿಣ ಆಫ್ರಿಕಾ ವೇಗಿ ಲುಂಗಿ ಸಾನಿ ಎನ್‌ಗಿಡಿ ಕೂಡ ಡು ಪ್ಲೆಸಿಸ್ ಜೊತೆಗಿರಲಿದ್ದಾರೆ. ಇನ್ನು ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವಾಟ್ಸನ್, ಕೋಚ್ ಸ್ಟೀಫನ್ ಫ್ಲೆಮಿಂಗ್ ಮತ್ತು ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಆಗಸ್ಟ್ 22ರಂದು ದುಬೈ ತಲುಪುವುದನ್ನು ನಿರೀಕ್ಷಿಸಲಾಗಿದೆ.
ಇನ್ನುಳಿದ ವಿದೇಶಿ ಆಟಗಾರರಾದ ಡ್ವೇನ್ ಬ್ರಾವೋ (ಟ್ರಿನಿಡಾಡ್ ನೈಟ್ ರೈಡರ್ಸ್), ಮಿಚೆಲ್ ಸ್ಯಾಂಟ್ನರ್ (ಬಾರ್ಬೊಡೋಸ್ ಟ್ರಿಡೆಂಟ್ಸ್) ಮತ್ತು ಇಮ್ರಾನ್ ತಾಹಿರ್ (ಗಯಾನಾ ಅಮೆಝಾನ್ ವಾರಿಯರ್ಸ್) ಸದ್ಯ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬ್ಯುಸಿಯಾಗಿದ್ದಾರೆ.