
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಆಟಗಾರ ಇಮ್ರಾನ್ ತಾಹಿರ್ ಕಳೆದ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳುವ ಮೂಲಕ ಪರ್ಪಲ್ ಕ್ಯಾಪ್‌ಅನ್ನು ಮುಡಿಗೇರಿಸಿಕೊಂಡಿದ್ದರು. ಆದರೆ ದಕ್ಷಿಣ ಆಫ್ರಿಕಾದ ಈ ಅನುಭವಿ ಆಟಗಾರನಿಗೆ ಈ ಬಾರಿಯ ಆವೃತ್ತಿಯಲ್ಲಿ ಚೆನ್ನೈ ತಂಡದ ಆಡುವ ಬಳಗದಲ್ಲಿ ಇನ್ನೂ ಅವಕಾಶವೇ ದೊರೆತಿಲ್ಲ.
ಆಡುವ ಬಳಗದಲ್ಲಿ ಅವಕಾಶವನ್ನು ಗಳಿಸದ ಇಮ್ರಾನ್ ತಾಹೀರ್ ಹನ್ನೆರಡನೇ ಆಟಗಾರನಾಗಿ ತಂಡದ ಸಹ ಆಟಗಾರಿಗೆ ಡ್ರಿಂಕ್ಸ್ ಪೂರೈಸುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಅನುಭವಿ ಆಟಗಾರನ ಪ್ರತಿಭೆಗೆ ಮಣೆ ನೀಡುತ್ತಿಲ್ಲ, ಡ್ರಿಂಕ್ಸ್ ಪೂರೈಸಲು ಈ ಆಟಗಾರನನ್ನು ಚೆನ್ನೈ ತಂಡ ಉಪಯೋಗಿಸಿಕೊಳ್ಳುತ್ತಿದೆ ಎಂದು ನಾನಾ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತಾ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಭಿಮಾನಿಗಳ ಈ ರೀತಿಯ ಪ್ರತಿಕ್ರಿಯೆಗಳಿಗೆ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಇಮ್ರಾನ್ ತಾಹೀರ್ ಟ್ವಿಟ್ಟರ್‌ನಲ್ಲಿ ಹೃದಯರ್ಸ್ಪರ್ಶಿ ಸಂದೇಶವೊಂದನ್ನು ನೀಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ತನಗೆ ತಂಡ ಹಾಗೂ ತಂಡದ ಗೆಲುವು ಪ್ರಮುಖವಾಗಿದ್ದು ಅವಕಾಶ ಸಿಕ್ಕಾಗ ಖಂಡಿತಾ ಶ್ರೇಷ್ಠ ಪ್ರದರ್ಶನವನ್ನು ನೀಡುವುದಾಗಿ ಹೇಳಿದ್ದಾರೆ.
ಟ್ವಿಟ್ಟರ್‌ನಲ್ಲಿ ತಾಹೀರ್ "ನಾನು ಅಂಗಳದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಹಲವಾರು ಆಟಗಾರರು ನನಾಗಿ ಮೈದಾನಕ್ಕೆ ಡ್ರಿಂಕ್ಸ್ ಹೊತ್ತು ತರುತ್ತಿದ್ದರು. ಈಗ ಅರ್ಹ ಆಟಗಾರರು ಅಂಗಳದಲ್ಲಿ ಆಡುತ್ತಿರಬೇಕಾದರೆ ನಾನು ಅವರಿಗಾಗಿ ಈ ಕೆಲಸ ಮಾಡುವುದು ನನ್ನ ಕರ್ತವ್ಯ. ನನಗೆ ಇದು ಆಡುವ ಆಡದಿರುವ ಸಂಗತಿಯಲ್ಲ. ತಂಡದ ಗೆಲುವು ಮುಖ್ಯ. ನನಗೆ ಅವಕಾಶ ಸಿಕ್ಕಾಗ ನನ್ನ ಶ್ರೇಷ್ಠ ಪ್ರದರ್ಶನವನ್ನು ನೀಡುತ್ತೇನೆ. ನನಗೆ ತಂಡ ಮುಖ್ಯ" ಎಂದು ಬರೆದುಕೊಂಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿತ್ತು. ಆದರೆ ತಾಹಿರ್‌ಗೆ ತಂಡದಲ್ಲಿ ಅವಕಾಶ ದೊರೆತಿರಲಿಲ್ಲ. ಈ ಬಗ್ಗೆ ಮಾತನಾಡಿದ್ದ ಸಿಎಸ್‌ಕೆ ನಾಯಕ ಎಂಎಸ್ ಧೋನಿ 'ತಾಹಿರ್ ಅವರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳಲು ಬಯಸಿತ್ತು. ವಿದೇಶಿ ಆಟಗಾರನಾಗಿ ತಂಡದ ಸಂಯೋಜನೆಯಲ್ಲಿ ತಾಹಿರ್ ಸೇರ್ಪಡೆ ಅಸಂಭವವಾಗಿತ್ತು' ಎಂದಿದ್ದರು.