
ದುಬೈ, ಅ. 11: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕ ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂಬ ಅಂಶದ ಬಗ್ಗೆ ರಣತಂತ್ರ ರೂಪಿಸಲಾಗಿತ್ತು. ಆದರೆ, ಕೊನೆಯಲ್ಲಿ ಧೋನಿ ಬಂದು ಸ್ಫೋಟಕ ಬ್ಯಾಟಿಂಗ್ ಮಾಡುವ ಬಗ್ಗೆ ಆತಂಕವಂತೂ ಇತ್ತು. ಹೀಗಾಗಿ, ಎಂಎಸ್ ಧೋನಿ ವಿರುದ್ಧ ಬೌಲ್ ಮಾಡಿದ್ದು, ರನ್ ನಿಯಂತ್ರಿಸಿ, ವಿಕೆಟ್ ಪಡೆದಿದ್ದು, ಪಂದ್ಯಕ್ಕೆ ತಿರುವು ನೀಡಿತು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಪಿನ್ ಮಾಂತ್ರಿಕ ಯಜುವೇಂದ್ರ ಚಹಾಲ್ ಅಭಿಪ್ರಾಯಪಟ್ಟಿದ್ದಾರೆ.
170ರನ್ ಚೇಸ್ ಮಾಡಲು ಕಣಕ್ಕಿಳಿದ ಚೆನ್ನೈ ಸೂಪರ್ ಕಿಂಗ್ಸ್ ಅಂತಿಮವಾಗಿ 132/8 ಸ್ಕೋರ್ ಮಾಡಿ 37 ಪಂದ್ಯಗಳಿಂದ ಸೋಲು ಕಂಡಿತು. ಚಹಾಲ್ 4 ಓವರ್ ಗಳಲ್ಲಿ 35ರನ್ನಿತ್ತು ಧೋನಿ ವಿಕೆಟ್ ಪಡೆದರು 16ನೇ ಓವರ್ ನಲ್ಲಿ ಧೋನಿ ಇನ್ನಿಂಗ್ಸ್(10ರನ್) ಮುಗಿಯುತ್ತಿದ್ದಂತೆ ಪಂದ್ಯ ಕೂಡಾ ಸಂಪೂರ್ಣವಾಗಿ ಆರ್ ಸಿಬಿ ಕಡೆಗೆ ವಾಲಿಬಿಟ್ಟಿತು.
''ನಾನು ಧೋನಿಗೆ ಮಾಡಿದ ಓವರ್ ತುಂಬಾ ಮಹತ್ವದ್ದಾಗಿತ್ತು. ನಾನು ಹೆಚ್ಚು ಸ್ಟಂಪ್ ಟು ಸ್ಟಂಪ್ ಎಸೆತ ಹಾಕಲು ಯತ್ನಿಸಿದೆ. ಒಂದು ಎಸೆತ ಮಾತ್ರ ಸ್ಟಂಪ್ ನಿಂದ ವೈಡ್ ಆಗಿ ಫುಲ್ ಲೆಂಗ್ತ್ ಹಾಕಿದೆ. ಧೋನಿ ಇದೇ ಎಸೆತವನ್ನು ಸರಿಯಾಗಿ ಅರಿಯದೆ, ಭಾರಿ ಹೊಡೆತಕ್ಕೆ ಯತ್ನಿಸಿ ಕ್ಯಾಚಿತ್ತು ನಿರ್ಗಮಿಸಿದರು. 2014ರಲ್ಲಿ ಧೋನಿ ವಿಕೆಟ್ ಪಡೆದ ಬಳಿಕ ಈ ಪಂದ್ಯದಲ್ಲಿ ಧೋನಿ ಔಟ್ ಮಾಡಿದ್ದು ನನ್ನ ಪಾಲಿಗೆ ಅತ್ಯಂತ ದೊಡ್ಡ ವಿಕೆಟ್ ಹಾಗೂ ತಂಡದ ಗೆಲುವಿಗೆ ಕೊಡುಗೆಯಾಗಿದ್ದು ಇನ್ನೂ ಮುಖ್ಯ'' ಎಂದು ಚಹಾಲ್ ಹೇಳಿದ್ದಾರೆ.
ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಸೋಮವಾರ(ಅ.12)ದಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಶಾರ್ಜಾ ಮೈದಾನದಲ್ಲಿ ಆರ್ ಸಿಬಿ ಮುಂದಿನ ಪಂದ್ಯವನ್ನಾಡಲಿದೆ.
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ