
ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್‌ನಲ್ಲಿ ಭಾರೀ ಬದಲಾವಣೆಗಳು ಆಗಿದೆ. ಅದರಲ್ಲಿ ಒಂದು ಬಯೋ ಬಬಲ್. ಆಟಗಾರರ ಸುರಕ್ಷಿತೆಯ ದೃಷ್ಠಿಯಿಂದ ಜೈವಿಕ ಸುರಕ್ಷಿತ ವಲಯವನ್ನು ನಿರ್ಮಿಸಿಕೊಂಡು ಅದನ್ನು ಬೇಧಿಸದಂತೆ ಆಟಗಾರರು ಹಾಗೂ ತಂಡಗಳ ಎಲ್ಲಾ ಸಿಬ್ಬಂದಿಗಳು ಇರಬೇಕಾಗುತ್ತದೆ. ಕಷ್ಟವಾದರೂ ಈ ಸ್ಥಿತಿಯಲ್ಲಿ ಇದು ಅನಿವಾರ್ಯವಾಗಿರುವುದುರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ಈ ಜೈವಿಕ ಸುರಕ್ಷಿತ ವಲಯ ಅಥವಾ ಬಯೋ ಬಬಲ್ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಆಟಗಾರ ಶಿಖರ್ ಧವನ್ ಬೇರೆಯದ್ದೇ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಇದು ನಮ್ಮ ಮನೋಬಲದ ಅತ್ಯುತ್ತಮ ಪರೀಕ್ಷೆಯಾಗಿದ್ದು ಬಿಗ್‌ಬಾಸ್ ಮನೆಯ ರೀತಿಯಲ್ಲೇ ಭಾಸವಾಗುತ್ತದೆ ಎಂದು ವಿವರಿಸಿದ್ದಾರೆ.
ಇದು (ಬಯೋ ಬಬಲ್) ಪ್ರತಿಯೊಬ್ಬರಿಯೂ ಹೊಸ ಅನುಭವವಾಗಿದೆ. ಇದೊಂದು ಸವಾಲು ಎನ್ನುವುದಕ್ಕಿಂತ ನಮಗೆ ಪ್ರತಿ ವಿಭಾಗದಲ್ಲೂ ಬಲಿಷ್ಠರಾಗಲು ಸಿಕ್ಕ ಅವಕಾಶದಂತೆ ನಾನು ಭಾವಿಸಿಕೊಳ್ಳುತ್ತೇನೆ. ನನ್ನನ್ನು ನಾನು ಖುಷಿಯಿಂದ ಇರುವಮತೆ ನೋಡಿಕೊಳ್ಳುತ್ತಿದ್ದು ಇದನ್ನು ಧನಾತ್ಮಕವಾಗಿ ತೆಗೆದುಕೊಂಡಿದ್ದೇನೆ ಎಂದು ಶಿಖರ್ ಧವನ್ ಹೇಳಿದ್ದಾರೆ.
ಈ ಆವೃತ್ತಿಯ ಐಪಿಎಲ್ ಟೂರ್ನಿಯ ಯಶಸ್ಸು ಆಟಗಾರರು ಈ ಹೊಸ ನೈಜ ಸ್ಥಿತಿಯಲ್ಲಿ ಹೇಗೆ ಮುನ್ನುಗ್ಗುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ವ್ಯಕ್ತಿ ತನ್ನೊಂದಿಗೆ ತಾನು ಹೇಗೆ ಸಂವೇದಿಸುತ್ತಾನೆ ಎಂಬುದು ಮುಖ್ಯವಾಗುತ್ತದೆ. ನೀವು ನಿಮ್ಮ ಅತ್ಯುತ್ತಮ ಗೆಳೆಯನಾಗಬಹುದು ಇಲ್ಲವೇ ನಿಮ್ಮನ್ನು ನೀವು ಬಲಿಪಶು ಮಾಡಿಕೊಳ್ಳಬೇಕಾಗಬಹುದು ಎಂದು ಶಿಖರ್ ಧವನ್ ಪ್ರತಿಕ್ರಿಯಿಸಿದ್ದಾರೆ
ಹಿಂದುಸ್ತಾನ್ ಟೈಮ್ಸ್ ಜೊತೆಗೆ ಯುಎಇ ಹೊಟೆಲ್‌ನಿಂದ ಮಾತನಾಡಿದ ಅವರು ಐಪಿಎಲ್ ಸಿದ್ಧತೆಯ ಜೊತೆಗೆ ಬಯೋಬಬಲ್ ಅನುಭವವನ್ನು ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 19 ರಿಂದ ಐಪಿಎಲ್ ಆರಂಭವಾಗಲಿದ್ದು ಸುಮಾರು 80 ದಿನಗಳ ಕಾಲ ಆಟಗಾರರು ಹೋಟೆಲ್, ತರಬೇತಿ ಸ್ಥಳ ಹಾಗೂ ಪಂದ್ಯದ ಸ್ಥಳದಲ್ಲಿ ಮಾತ್ರವೇ ಇರಲಿದ್ದಾರೆ. ಆದರೆ ಎಲ್ಲಾ ಫ್ರಾಂಚೈಸಿಗಳು ಈ ಸಂದರ್ಭದಲ್ಲಿ ಆಟಗಾರರಿಗೆ ಅನುಕೂಲವಾಗುವಂತೆ ಮನೋರಂಜನೆ ಸಹಿತ ಎಲ್ಲಾ ವ್ಯವಸ್ಥೆಗಳನ್ನು ಸುಸಜ್ಜಿತವಾಗಿ ಮಾಡಿಕೊಂಡಿದೆ.