ಐಪಿಎಲ್ 2020ರಲ್ಲಿ ಸಿಎಸ್‌ಕೆ ಆಲ್ ರೌಂಡರ್ ಸುರೇಶ್ ರೈನಾ ಆಡಲ್ಲ!

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಸಾಲು ಸಾಲಾಗಿ ಹಿನ್ನಡೆಯ ಸಂಗತಿಗಳು ಕೇಳಿಬರುತ್ತಿವೆ. ಮುಖ್ಯವಾಗಿ ಕೊರೊನಾವೈರಸ್ ಭೀತಿ ಐಪಿಎಲ್ ಅನ್ನು ಕಾಡತೊಡಗಿದೆ. ಈ ಮಧ್ಯೆ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಆಘಾತಕಾರಿ ವಿಚಾರ ಕೇಳಿಬಂದಿದೆ. ಮಾಜಿ ಚಾಂಪಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್‌ನ ಆಲ್ ರೌಂಡರ್ ಸುರೇಶ್ ರೈನಾ ಈ ಬಾರಿ ಯಾವುದೇ ಐಪಿಎಲ್ ಪಂದ್ಯದಲ್ಲಿ ಆಡುತ್ತಿಲ್ಲ.
ಸಿಎಸ್‌ಕೆ ವೇಗಿ ದೀಪಕ್ ಚಹಾರ್‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿತ್ತು. ಸಿಎಸ್‌ಕೆ ತಂಡದಲ್ಲಿ ಓರ್ವ ಆಟಗಾರ ಸೇರಿ 12 ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ಬಂದಿರುವುದು ಈ ಹಿಂದೆ ವರದಿಯಾಗಿತ್ತು.
ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಕೊರೊನಾ ಭೀತಿ ಕಾಣಿಸಿಕೊಂಡ ಬೆನ್ನಲ್ಲೇ ರೈನಾ ಕೂಡ ತಂಡದಿಂದ ಹೊರ ಬಿದ್ದಿರುವುದು ಸಿಎಸ್‌ಕೆಗೆ ಆಘಾತ ನೀಡಿದೆ.

ರೈನಾ ಯುಎಇಯಿಂದ ಭಾರತಕ್ಕೆ
'ವೈಯಕ್ತಿಕ ಕಾರಣದಿಂದಾಗಿ ಸುರೇಶ್ ರೈನಾ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಭಾರತಕ್ಕೆ ಬಂದಿದ್ದಾರೆ. ಅವರು ಈ ಐಪಿಎಲ್ ಸೀಸನ್‌ಗೆ ಅಲಭ್ಯರಿರಲಿದ್ದಾರೆ. ಈ ಸಮಯದಲ್ಲಿ ಸುರೇಶ್ ರೈನಾ ಮತ್ತು ಕುಟುಂಬಕ್ಕೆ ಸಿಎಸ್‌ಕೆ ತನ್ನ ಸಂಪೂರ್ಣ ಬೆಂಬಲ ಸೂಚಿಸಿದೆ,' ಎಂದು ಸಿಎಸ್‌ಕೆ ಸಿಇಒ ಕೆಎಸ್ ವಿಶ್ವನಾಥನ್ ತಿಳಿಸಿದ್ದಾರೆ.

ಅಭಿಮಾನಿಗಳಿಗೆ ನಿರಾಸೆ
ಆಗಸ್ಟ್ 15ರಂದು ಭಾರತದ ಮಾಜಿ ನಾಯಕ, ಸಿಎಸ್‌ಕೆ ಕ್ಯಾಪ್ಟನ್ ಎಂಎಸ್ ಧೋನಿ ಜೊತೆಗೆ ರೈನಾ ಕೂಡ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರು. ಅಂತಾರಾಷ್ಟ್ರೀಯ ನಿವೃತ್ತಿ ನೀಡಿರುವ ಧೋನಿ-ರೈನಾರ ಆಟವನ್ನು ಐಪಿಎಲ್‌ನಲ್ಲಾದರೂ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಬಯಸಿದ್ದರು. ಆದರೆ ಅಭಿಮಾನಿಗಳ ಆಸೆ ನಿರಾಸೆಯಾಗಿದೆ.

ವೇಳಾಪಟ್ಟಿ ಘೋಷಣೆ ವಿಳಂಬ
ಐಪಿಎಲ್‌ನಲ್ಲಿ ಕೊರೊನಾ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದರಿಂದ ಘೋಷಣೆಯಾಗುವುದರಲ್ಲಿದ್ದ ಐಪಿಎಲ್ ಸಂಪೂರ್ಣ ವೇಳಾಪಟ್ಟಿ ವಿಳಂಬಗೊಂಡಿದೆ. 'ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಕ್ರಮಗಳು ಜಾರಿಯಲ್ಲಿವೆ ಮತ್ತು ಪಂದ್ಯಾವಳಿಗೆ ಕೊರೊನಾದಿಂದ ತಕ್ಷಣದ ಬೆದರಿಕೆ ಇಲ್ಲ. ಆದರೆ ಈ ಬೆಳವಣಿಗೆಯಿಂದಾಗಿ ಐಪಿಎಲ್ ವೇಳಾಪಟ್ಟಿ ಘೋಷಣೆ ವಿಳಂಬವಾಗಿದೆ,' ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಸೆಪ್ಟೆಂಬರ್‌ನಲ್ಲಿ ಐಪಿಎಲ್ ಆರಂಭ
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ಐಪಿಎಲ್ 13ನೇ ಆವೃತ್ತಿ ನಡೆಯಲಿದೆ. ಶಾರ್ಜಾ, ಅಬುಧಾಬಿ ಮತ್ತು ದುಬೈ ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ. ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಮುಂದಿನವಾರ ಘೋಷಣೆಯಾಗುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications