
ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ದಿಗ್ಗಜ ಕ್ರಿಕೆಟಿಗರಿಂದಲೂ ಸೂರ್ಯಕುಮಾರ್ ಯಾದವ್ ಪ್ರಶಂಸೆಯನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಕೂಡ ಸೂರ್ಯಕುಮಾರ್ ಯಾದವ್ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಮೈಕಲ್ ವಾನ್ ಸೂರ್ಯಕುಮಾರ್ ಅವರನ್ನು ಸ್ಪಿನ್ ಬೌಲಿಂಗ್ ಎದುರು ವಿಶ್ವದಲ್ಲೇ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದಿದ್ದಾರೆ. ಪ್ರಸಕ್ತ ಆಟಗಾರರಲ್ಲಿ ವಿಶ್ವದಲ್ಲಿ ಅತ್ಯುತ್ತಮವಾಗಿ ಸ್ಪಿನ್ ಬೌಲರ್‌ಗಳನ್ನು ದಂಡಿಸಬಲ್ಲ ಆಟಗಾರ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಐಪಿಎಲ್‌ನ 12ನೇ ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ಮುಂಬೈ ಫೈನಲ್ ಹಂತಕ್ಕೇರಲು ಪ್ರಮುಖ ಕೊಡುಗೆಯನ್ನು ನೀಡಿದರು. ರೋಹಿತ್ ಶರ್ಮಾ ಶೀಘ್ರವಾಗಿ ವಿಕೆಟ್ ಕಳೆದುಕೊಂಡ ನಂತರ ಕ್ವಿಂಟನ್ ಡಿಕಾಕ್ ಜೊತೆಗೆ ಉತ್ತಮ ಜೊತೆಯಾಟವನ್ನು ನೀಡಿದರು.
ಸೂರ್ಯ ಕುಮಾರ್ ಬ್ಯಾಟಿಂಗ್ ಕೌಶಲ್ಯದ ಬಗ್ಗೆ ಮೈಕಲ್ ವಾನ್ ಟ್ವೀಟ್ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಟ್ವಿಟ್‌ನಲ್ಲಿ ಅವರು " ಪ್ರಸಕ್ತ ಕಾಲಮಾನದಲ್ಲಿ ಸ್ಪಿನ್ ಬೌಲಿಂಗ್ ವಿರುದ್ಧ ಉಳಿದ ಎಲ್ಲಾ ಆಟಗಾರರಿಗಿಂತ ಉತ್ತಮವಾಗಿ ಆಡಬಲ್ಲ ಆಟಗಾರನಾಗಿದ್ದಾರೆ" ಎಂದಿದ್ದಾರೆ.
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮುಂಬೈ 57 ರನ್‌ಗಳ ಜಯವನ್ನು ಸಾಧಿಸಿದೆ. ಈ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್‌ನಲ್ಲಿ ಫೈನಲ್ ಪ್ರವೇಶ ಪಡೆದುಕೊಂಡಿದೆ. ಜೊತೆಗೆ ಐದನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಲು ಮುಂಬೈ ಇಂಡಿಯನ್ಸ್ ಹಾತೊರೆಯುತ್ತಿದೆ.