
ಮಂಗಳವಾರದಂದು ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿತ್ತು. ಈ ಕಾದಾಟದ ರೋಚಕ ಘಟ್ಟದಲ್ಲಿ ಅಭಿಮಾನಿಗಳು ವಿಚಿತ್ರ ಘಟನೆಯೊಂದಕ್ಕೆ ಸಾಕ್ಷಿಯಾದರು. ಧೋನಿ ಹಾಗೂ ಬೌಲರ್ ಶಾರ್ದೂಲ್ ಠಾಕೂರ್ ಪ್ರತಿಕ್ರಿಯೆ ಕಂಡು ಅಂಪಾಯರ್ ತಮ್ಮ ನಿರ್ಧಾರವನ್ನೇ ಬದಲಿಸಿದ್ದರು!
ಇದು ನಡೆದಿದ್ದು ಸನ್‌ರೈಸರ್ಸ್ ಹೈದರಾಬಾದ್ ತಂಡದ 19ನೇ ಓವರ್‌ನಲ್ಲಿ. ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 168 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಎಸ್‌ಆರ್‌ಹೆಚ್ 11 ಎಸೆತಗಳಲ್ಲಿ 25 ರನ್‌ಗಳಿಸಬೇಕಾದ ಸ್ಥಿತಿಯಿತ್ತು. ಸ್ಟ್ರೈಕ್‌ನಲ್ಲಿ ಸ್ಪೋಟಕ ಪ್ರದರ್ಶನವನ್ನು ನೀಡುತ್ತಾ ಹೈದರಾಬಾದ್‌ಗೆ ಗೆಲುವಿನ ಭರವಸೆಯನ್ನು ನೀಡಿದ್ದ ರಶೀದ್ ಬ್ಯಾಟಿಂಗ್ ನಡೆಸುತ್ತಿದ್ದರೆ ಶಾರ್ದೂಲ್ ಠಾಕೂರ್ ಬೌಲಿಂಗ್‌ಗೆ ಇಳಿದಿದ್ದರು.
ಶಾರ್ದೂಲ್ ಆಫ್‌ಸ್ಟಂಪ್‌ನ ಲೈನ್‌ಆಚೆಗಎ ಬೌಲಿಂಗ್ ಮಾಡುವ ಮೂಲಕ ಬ್ಯಾಟ್ಸ್‌ಮನ್‌ಗೆ ಒತ್ತಡವನ್ನು ಹಾಕುವ ಪ್ರಯತ್ನವನ್ನು ಮಾಡಿದರು. ಆದರೆ ಇದು ವೈಡ್‌ಲೈನ್ ಗೆರೆಯ ಆಚೆಗೆ ಬಿದ್ದು ರಶೀಗ್ ಖಾನ್ ಬ್ಯಾಟನ್ನು ವಂಚಿಸಿ ಕೀಪರ್ ಧೋನಿ ಕೈ ಸೇರಿತು. ಈ ಚೆಂಡನ್ನು ಅಂಪಾಯರ್ ವೈಡ್ ಎಂದು ನಿರ್ಧರಿಸಿ ಘೋಷಣೆ ಮಾಡಲು ಎಡಕ್ಕೆ ತಿರುಗಿ ಅರ್ಧ ಪ್ರಮಾಣಕ್ಕೆ ಕೈಯನ್ನೂ ಎತ್ತಿದ್ದರು.
ಆದರೆ ಈ ಸಂದರ್ಭದಲ್ಲಿ ನಡೆದ ನಾಟಕೀಯ ಬೆಳವಣಿಗೆಯಿಂದ ಸ್ವತಃ ಅಂಪಾಯರ್ ಗಲಿಬಿಲಿಗೆ ಒಳಗಾದರು. ವಿಕೆಟ್ ಹಿಂದೆಯಿದ್ದ ಧೋನಿ ಹಾಗೂ ಬೌಲರ್ ಶಾರ್ದೂಕ್ ಠಾಕೂರ್ ಅಂಪಾಯರ್ ನಿರ್ಧಾರಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿ ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ಅಂಪಾಯರ್ ಪೌಲ್ ರೈಫೆಲ್ ಕೊನೆಯ ಕ್ಷಣದಲ್ಲಿ ತಮ್ಮ ನಿರ್ಧಾರವನ್ನು ಬದಲಿಸಿ ಬಿಟ್ಟರು.
ತೀರ್ಮಾನ ಬದಲಿಸಿದ ಅಂಪಾಯರ್ ನಿರ್ಧಾರಕ್ಕೆ ಆಘಾತಗೊಳ್ಳುವ ಸರದಿ ಎದುರಾಳಿ ನಾಯಕ ಡೇವಿಡ್ ವಾರ್ನರ್ ಅವರದ್ದಾಗಿತ್ತು. ಬಳಿಕ ಟಿವಿ ರಿಪ್ಲೇ ನಲ್ಲಿ ಈ ಎಸೆತವನ್ನು ನೀಡಿದಾಗ ಅದು ಸ್ಪಷ್ಟವಾಗಿ ವೈಡ್ ಬಾಲ್ ಆಗಿತ್ತು ಎಂದು ಗೋಚರವಾಗಿತ್ತು. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್‌ಗೆ ಒಳಗಾಗಿದೆ.