
ಭಾರತೀಯದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಬುಧವಾರ ಕ್ರಿಕೆಟ್ ಕುರಿತು ಟ್ವೀಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಟ್ವೀಟ್ ಮೂಲಕ ಭಾರತೀಯ ಕ್ರಿಕೆಟ್ ಆಟಗಾರ ವಾಷಿಂಗ್ಟನ್ ಸುಂದರ್ ಅವರನ್ನು ಸೈನಾ ನೆಹ್ವಾಲ್ ಹೊಗಳಿದ್ದಾರೆ. ನಾನು ಬ್ಯಾಡ್ಮಿಂಟನ್ ಜತೆಗೆ ಕ್ರಿಕೆಟ್ ಅಭಿಮಾನಿ ಎಂಬುದು ತುಂಬ ಜನರಿಗೆ ತಿಳಿದಿಲ್ಲ, ಅದರಲ್ಲೂ ಟೀಮ್ ಇಂಡಿಯಾ ಆಟವನ್ನು ಮಿಸ್ ಮಾಡಿಕೊಳ್ಳುವುದಿಲ್ಲ, ಇತ್ತೀಚಿಗೆ ನಡೆದ ಸರಣಿಗಳಲ್ಲಿ ವಾಷಿಂಗ್ಟನ್ ಸುಂದರ್ ಅವರ ಅದ್ಭುತ ಆಟ ನೋಡಿದೆ, ಆತನ ಆಟ ನೋಡುವುದು ತುಂಬಾ ಖುಷಿ ಕೊಡುತ್ತದೆ ಎಂದು ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಾಷಿಂಗ್ಟನ್ ಸುಂದರ್ ತಮ್ಮ ಚೊಚ್ಚಲ ಟೆಸ್ಟ್ ಇನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ ಸುಂದರ್ 62 ರನ್ ಗಳಿಸಿ ಮಿಂಚಿದರು. ಶಾರ್ದೂಲ್ ಠಾಕೂರ್ ಜೊತೆ ಸೇರಿ 123 ರನ್ ಗಳ ಜತೆಯಾಟವಾಡಿದ ಸುಂದರ್ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಷ್ಟೇ ಅಲ್ಲದೆ ಸ್ಟೀವ್ ಸ್ಮಿತ್ ವಿಕೆಟ್ ಪಡೆಯುವ ಮೂಲಕ ಬೌಲಿಂಗ್‌ನಲ್ಲಿಯೂ ಸುಂದರ್ ಮಿಂಚಿದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಾಷಿಂಗ್ಟನ್ ಸುಂದರ್ 4 ಇನ್ನಿಂಗ್ಸ್‌ನಲ್ಲಿ 181 ರನ್ ಗಳಿಸಿದರು. ಅಜೇಯ 96 ರನ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಾಷಿಂಗ್ಟನ್ ಸುಂದರ್ ಗಳಿಸಿದ ಅತ್ಯಧಿಕ ರನ್.
ಹೀಗೆ ಇತ್ತೀಚಿನ ಸರಣಿಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿರುವ ಸುಂದರ್ ಸೈನಾ ನೆಹ್ವಾಲ್‌ರಿಂದ ಮೆಚ್ಚುಗೆಯ ಟ್ವೀಟ್ ಬಂದ ಬಳಿಕ ರಿಪ್ಲೈ ಮಾಡಿದ್ದಾರೆ. ನಿಮ್ಮಿಂದ ಇಂತಹ ಸ್ಫೂರ್ತಿದಾಯಕ ಮಾತುಗಳನ್ನು ಕೇಳುವುದು ಖುಷಿಯ ವಿಷಯ ಎಂದು ಸುಂದರ್ ಸೈನಾಗೆ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಸುಂದರ್ ಧನ್ಯವಾದ ತಿಳಿಸಿದ ಟ್ವೀಟ್ ಗೆ ಪುನಃ ರಿಪ್ಲೈ ಮಾಡಿದ ಸೈನಾ ಮೈದಾನದಲ್ಲಿ ನಿಮ್ಮನ್ನು ಯಾವ ಹಾಡು ಉತ್ತೇಜಿಸುತ್ತದೆ ಎಂದು ಪ್ರಶ್ನೆ ಹಾಕಿದ್ದಾರೆ.
ಸೈನಾ ಕೇಳಿದ ಈ ಪ್ರಶ್ನೆಗೆ ಉತ್ತರಿಸಿದ ಸುಂದರ್ ಕ್ರಿಕೆಟ್‍ನಲ್ಲಿ ಗಮನ ಮತ್ತು ಏಕಾಗ್ರತೆ ಅತಿ ಮುಖ್ಯವಾದವು, ಹೀಗಾಗಿ ಸಂಗೀತ ಕೇಳಿದರೆ ಆಟದ ಮೇಲೆ ಗಮನ ಮತ್ತು ಏಕಾಗ್ರತೆ ನನಗೆ ಹೆಚ್ಚಾಗುತ್ತದೆ, ಸದ್ಯ ಅಮೆರಿಕನ್ ರ‍್ಯಾಪರ್ ಪೋಸ್ಟ್ ಮ್ಯಾಲೋನ್ ಹಾಡುಗಳು & ರಜನಿಕಾಂತ್ ಅವರ ಒರುವನ್ ಒರುವನ್ ಮುದಲಾಲಿ ಹಾಡನ್ನು ಪದೇ ಪದೇ ಕೇಳುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.