
ಐಪಿಎಲ್‌ನ 14ನೇ ಆವೃತ್ತಿಗೆ ದಿನಗಣನೆ ಈಗ ಆರಂಭವಾಗಿದೆ. ಈ ಸಂದರ್ಭದಲ್ಲಿ ಟೂರ್ನಿಯ ಪ್ರಚಾರಕ್ಕಾಗಿ ಅಧಿಕೃತ ಪ್ರಸಾರಕರಾದ ಸ್ಟಾರ್‌ಸ್ಪೋರ್ಟ್ಸ್ ವಾಹಿನಿ ಎಂದಿನಂತೆ ವಿಭಿನ್ನ ಶೈಲಿಯ ಜಾಹೀರಾತಿನ ಮೊರೆ ಹೋಗಿದೆ. ಈ ಬಾರಿ ಧೋನಿಯನ್ನು ವಿಶೇಷ ಅವತಾರದಲ್ಲಿ ತೋರಿಸಿ ಮಾಡಿದ ಜಾಹೀರಾತು ಈಗ ಸಾಕಷ್ಟು ವೈರಲ್ ಆಗಿದೆ.
ಬೌದ್ಧ ಬಿಕ್ಷುವಿನ ಅವತಾರದಲ್ಲಿ ಧೋನಿ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಬೋಳು ತಲೆಯಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕನ ಬಗ್ಗೆ ವಿವಿಧ ರೀತಿಯ ತಮಾಷೆಯ ಪೋಸ್ಟ್‌ಗಳನ್ನು ಅಭಿಮಾನಿಗಳು ಹರಿಯಬಿಡುತ್ತಿದ್ದಾರೆ.
ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಅತ್ಯಂತ ಹೆಚ್ಚು ಅನುಭವ ಹೊಂದಿದ ಆಟಗಾರನಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿದ ಪ್ರತಿ ಆವೃತ್ತಿಯಲ್ಲೂ ಧೋನಿ ತಂಡವನ್ನು ಮುನ್ನಡೆಸಿದ್ದಾರೆ. 14ನೇ ಆವೃತ್ತಿಗೂ ಧೋನಿ ಸಿಎಸ್‌ಕೆ ತಂಡದ ನೇತೃತ್ವ ವಹಿಸಲಿದ್ದಾರೆ.
ಕಳೆದ ಬಾರಿಯ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲೀಗ್‌ಹಂತದಲ್ಲಿ 6ನೇ ಸ್ಥಾನವನ್ನು ಪಡೆಯುವ ಮೂಲಕ ಹೊರಬಿದ್ದಿತ್ತು. ಐಪಿಎಲ್‌ನಲ್ಲಿ ಪಾಲ್ಗೊಂಡ ಟೂರ್ನಿಗಳಲ್ಲಿ ಸಿಎಸ್‌ಕೆ ಅದೇ ಮೊದಲ ಬಾರಿಗೆ ಕನಿಷ್ಟ ಪ್ಲೇ ಆಫ್ ಹಂತಕ್ಕೇರುವ ಮುನ್ನವೇ ಟೂರ್ನಿಯಿಂದ ಹೊರಬಿದ್ದಿತ್ತು. ಕಳೆದ ಬಾರಿ ಧೋನಿ ತಂಡ ಆಡಿದ 14 ಪಂದ್ಯಗಳ ಪೈಕಿ ಕೇವಲ 6 ಪಂದ್ಯಗಳನ್ನು ಮಾತ್ರವೇ ಗೆದ್ದುಕೊಂಡಿತ್ತು.
ಈ ಬಾರಿ ಕೆಲ ಬದಲಾವಣೆಗಳೊಂದಿಗೆ ತಂಡ ಮತ್ತೆ ಮಹತ್ವದ ಟೂರ್ನಿಗೆ ಸಜ್ಜಾಗುತ್ತಿದ್ದು ನಾಯಕ ಧೋನಿ ಈಗಾಗಲೇ ತಮ್ಮ ತಂಡದ ಜೊತೆಗೆ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.