ಐಪಿಎಲ್ 2021: ಸಿಎಸ್‌ಕೆಗೆ ಆನೆಬಲ ತಂದ ಜೋಶ್ ಹ್ಯಾಝಲ್ವುಡ್!

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಚಾಂಪಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್‌ನ ಬಲ ಹೆಚ್ಚಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದ್ದ 14ನೇ ಆವೃತ್ತಿಯ ಐಪಿಎಲ್‌ನ ದ್ವಿತೀಯ ಹಂತದ ಪಂದ್ಯದಲ್ಲಿ ಆಡೋದು ಅನುಮಾನವೆನಿಸಿದ್ದ ಆಸ್ಟ್ರೇಲಿಯಾದ ಅನುಭವಿ ಆಟಗಾರ ಜೋಶ್ ಹ್ಯಾಝಲ್ವುಡ್, ಯುಎಇಯಲ್ಲಿ ತಾನು ಸಿಎಸ್‌ಕೆ ಪರ ಆಡುವುದಾಗಿ ಖಾತರಿಪಡಿಸಿದ್ದಾರೆ. ಐಪಿಎಲ್ ಆರಂಭಿಕ ಹಂತದಲ್ಲಿ ಹ್ಯಾಝಲ್ವುಡ್ ಆಡಿರಲಿಲ್ಲ.
ಭಾರತದಲ್ಲಿ ಆರಂಭಗೊಂಡಿದ್ದ ಐಪಿಎಲ್ 14ರ ಆವೃತ್ತಿಯ ಆರಂಭಿಕ ಹಂತದಲ್ಲಿ ಆಸೀಸ್ ಮಧ್ಯಮ ವೇಗಿ ಜೋಶ್ ಹ್ಯಾಝಲ್ವುಡ್ ಆಡಿರಲಿಲ್ಲ. ಐಪಿಎಲ್ ಆರಂಭಿಕ ಹಂತದಲ್ಲಿ ಸಿಎಸ್‌ಕೆಯಿಂದ ದೂರ ಉಳಿಯಲು ಜೋಶ್ ವೈಯಕ್ತಿಕ ಕಾರಣ ನೀಡಿದ್ದರು. ಆದರೆ ದ್ವಿತೀಯ ಹಂತದ ಐಪಿಎಲ್‌ನಲ್ಲಿ ಜೋಶ್ ಆಡುವುದಾಗಿ ಹೇಳಿಕೊಂಡಿದ್ದಾರೆ.

ಜೋಶ್ ಬದಲು ತಂಡದಲ್ಲಿ ಬದಲಾವಣೆ ಮಾಡಿಕೊಂಡಿದ್ದ ಸಿಎಸ್‌ಕೆ
ಐಪಿಎಲ್ 2021ರ ಆರಂಭಿಕ ಹಂತದಲ್ಲಿ ಜೋಶ್ ಹ್ಯಾಝಲ್ವುಡ್ ಲಭ್ಯರಿಲ್ಲದ್ದರಿಂದ ಅವರ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಸ್ಟ್ರೇಲಿಯಾದ ಮತ್ತೊಬ್ಬ ಆಟಗಾರ ಜೇಸನ್ ಬೆಹ್ರೆಂಡೋರ್ಫ್ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಆದರೆ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ತಂಡದಲ್ಲಿ ಒಂದೂ ಪಂದ್ಯದಲ್ಲೂ ಬೆಹ್ರೆಂಡೋರ್ಫ್ ಕಣಕ್ಕಿಳಿದಿರಲಿಲ್ಲ. ಐಪಿಎಲ್ ಮುಂದಿನ ಭಾಗದಲ್ಲಿ ತಂಡದಲ್ಲಿ ಜೋಶ್ ಆಡುವುದಾಗಿ ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಹೇಳಿದ್ದಾರೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಕೂಡ ದ್ವಿತೀಯ ಹಂತದ ಐಪಿಎಲ್‌ಗೆ ಹ್ಯಾಝಲ್ವುಡ್ ಫಿಟ್ ಆಗಿದ್ದು ಆಡಲಿದ್ದಾರೆ ಎಂದು ಖಾತರಿಪಡಿಸಿದೆ. ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಪರ ಜೋಶ್ 55 ಟೆಸ್ಟ್ ಪಂದ್ಯಗಳಲ್ಲಿ 212 ವಿಕೆಟ್‌ಗಳು, 56 ಏಕದಿನ ಪಂದ್ಯಗಳಲ್ಲಿ 93 ವಿಕೆಟ್‌ಗಳು, 17 ಟಿ20ಐ ಪಂದ್ಯಗಳಲ್ಲಿ 21 ವಿಕೆಟ್‌ಗಳು ಮತ್ತು 3 ಐಪಿಎಲ್ ಪಂದ್ಯಗಳಲ್ಲಿ 1 ವಿಕೆಟ್ ಪಡೆದಿದ್ದಾರೆ.

ಉದ್ಘಾಟನಾ ಪಂದ್ಯದಲ್ಲೇ ಸಿಎಸ್‌ಕೆ-ಎಂಐ ಮುಖಾಮುಖಿ
"ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಆರಂಭಗೊಳ್ಳಲಿರುವ ಐಪಿಎಲ್ ದ್ವಿತೀಯ ಹಂತಕ್ಕೆ ಲಭ್ಯರಿರುವುದಾಗಿ ಜೋಶ್ ಹ್ಯಾಝಲ್ವುಡ್ ಖಾತರಿಪಡಿಸಿದ್ದಾರೆ. ಆರಂಭಿಕ ಹಂತದಲ್ಲಿ ಮಿಸ್ ಆಗಿದ್ದ ಜೋಶ್ ಎರಡನೇ ತಂಡದಲ್ಲಿ ಫಿಟ್ ಆಗಿ ಮತ್ತು ಲಭ್ಯರಿದ್ದರೆ ಸಿಎಸ್‌ಕೆಯ ಇನ್ನುಳಿದ ಆಟಗಾರರನ್ನು ಶೀಘ್ರ ಸೇರಿಕೊಳ್ಳಲಿದ್ದಾರೆ ಎಂದು ಖಾತರಿಪಡಿಸಿದೆ. ಜೋಶ್‌ನ ಫಾರ್ಮ್ ಗಮನಿಸಿದರೆ ಅವರು ನಮ್ಮ ತಂಡಕ್ಕೆ ಬಲ ತುಂಬಲಿದ್ದಾರೆ," ಎಂದು ಕಾಸಿ ವಿಶ್ವನಾಥನ್ ಮಾಹಿತಿ ನೀಡಿದ್ದಾರೆ. ಐಪಿಎಲ್ ಎರಡನೇ ಹಂತದಲ್ಲಿ ಆರಂಭಿಕ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಸಿಎಸ್‌ಕೆ ಒಟ್ಟು ಮೂರು ಬಾರಿ ಐಪಿಎಲ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ್ದರೆ, ಹಿಟ್‌ಮ್ಯಾನ್ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಒಟ್ಟು 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ಹೀಗಾಗಿ ದ್ವಿತೀಯ ಹಂತದಲ್ಲಿ ಆರಂಭಿಕ ಪಂದ್ಯವೇ ಕುತೂಹಲ ಮೂಡಿಸಿದೆ. ಸೆಪ್ಟೆಂಬರ್ 19ರಂದು ದ್ವಿತೀಯ ಹಂತದ ಐಪಿಎಲ್ ಆರಂಭಿಕ ಪಂದ್ಯ ನಡೆಯಲಿದೆ.

ಐಪಿಎಲ್ ದ್ವಿತೀಯ ಹಂತದಿಂದ ಪ್ರಮುಖ ಆಟಗಾರರು ಹೊರಕ್ಕೆ
ಯುಎಇಯಲ್ಲಿ ನಡೆಯಲಿರುವ ಐಪಿಎಲ್ ದ್ವಿತೀಯ ಹಂತದ ಸ್ಪರ್ಧೆಗಳಿಂದ ಪ್ರಮುಖ ವಿದೇಶಿ ಆಟಗಾರರು ಹೊರ ಬಿದ್ದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡುತ್ತಿದ್ದ ಆಸ್ಟ್ರೇಲಿಯಾದ ಪ್ರಮುಖ ಆಲ್ ರೌಂಡರ್ ಪ್ಯಾಟ್ ಕಮಿನ್ಸ್, ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಪರ ಆಡುವ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಜೋಸ್ ಬಟ್ಲರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರ ಆಡುತ್ತಿದ್ದ ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಂ ಜಂಪಾ, ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದ ಆಸ್ಟ್ರೇಲಿಯಾದ ಜಾಯೆ ರಿಚರ್ಡ್ಸನ್ ಇವರೆಲ್ಲ ಐಪಿಎಲ್ ಎರಡನೇ ಹಂತದ ಪಂದ್ಯಗಳಲ್ಲಿ ಆಡುತ್ತಿಲ್ಲ. 2020ರ ಸೀಸನ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸುವ ಮುನ್ನವೇ ಟೂರ್ನಿಯಿಂದ ಹೊರ ಬಿದ್ದು ಮುಖಭಂಗ ಅನುಭವಿಸಿದ್ದ ಸಿಎಸ್‌ಕೆ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದೆ. ಕಳೆದ ಬಾರಿ ಐಪಿಎಲ್‌ನಿಂದ ಹೊರಗುಳಿದಿದ್ದ ಸುರೇಶ್ ರೈನಾ ಮತ್ತೆ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. ಐಪಿಎಲ್ ಆರಂಭಿಕ ಹಂತದ ಐಪಿಎಲ್ ವೇಳೆ ಸಿಎಸ್‌ಕೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿತ್ತು. ಆಡಿದ್ದ ಏಳು ಪಂದ್ಯಗಳಲ್ಲಿ 5ರಲ್ಲಿ ಸಿಎಸ್‌ಕೆ ಗೆದ್ದಿತ್ತು. ಸದ್ಯದ ಅಂಪಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ), ತೃತೀಯ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿವೆ.

ಐಪಿಎಲ್ ದ್ವಿತೀಯ ಪಂದ್ಯಗಳು ಶುರು ಯಾವಾಗ?
ಐಪಿಎಲ್ ಆರಂಭಿಕ ಹಂತದಲ್ಲಿ ಭಾರತದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟು ಮುಂದೂಡಲಾಗಿತ್ತು. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸುಮಾರು 27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ನಡೆಯಲಿದೆ. ಅಂದ್ಹಾಗೆ ಐಪಿಎಲ್ ದ್ವಿತೀಯ ಹಂತದ ಉದ್ಘಾಟನಾ ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್ 19ಕ್ಕೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.ಭಾರತದಲ್ಲಿ ನಡೆದಿದ್ದ ಆರಂಭಿಕ ಹಂತದ ಐಪಿಎಲ್ ವೇಳೆ ಕೋವಿಡ್ ಭೀತಿ ಹೆಚ್ಚಿದ್ದರಿಂದ ಅಭಿಮಾನಿಗಳಿಗೆ ಸ್ಟೇಡಿಯಂ ಒಳಗೆ ಪ್ರವೇಶ ನೀಡಿರಲಿಲ್ಲ. ಆದರೆ ಯುಎಇ ಟೂರ್ನಿ ವೇಳೆ ಅಭಿಮಾನಿಗಳಿಗೆ ಸ್ಟೇಡಿಯಂ ಪ್ರವೇಶಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications