
ಭಾನುವಾರ ಐಪಿಎಲ್‌ನಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯ ಮುಕ್ತಾಯವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರೋಚಕವಾಗಿ ಗೆದ್ದು ಬೀಗಿದೆ. ಅದರಲ್ಲೂ ಈ ಪಂದ್ಯದಲ್ಲಿ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಅಂತಿಮ ಹಂತದಲ್ಲಿ ನೀಡಿದ ಸ್ಪೋಟಕ ಆಟ ಧೋನಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಕಳೆದ ಎರಡ್ಮೂರು ಆವೃತ್ತಿಗಳಿಂದ ಕಳೆಗುಂದಿದಂತೆ ಕಂಡುಬಂದಿದ್ದ ಧೋನಿ ಈ ಪಂದ್ಯದಲ್ಲಿ ನೀಡಿದ ಸ್ಪೋಟಕ ಆಟದ ಕಾರಣದಿಂದಾಗಿ ಪಂದ್ಯವನ್ನು ಸಿಎಸ್‌ಕೆ ಗೆದ್ದು ಬೀಗಿತ್ತು. ಧೋನಿ ನೀಡಿದ ಈ ಪ್ರದರ್ಶನ ಸಿಎಸ್‌ಕೆ ಹಾಗೂ ಧೋನಿ ಅಭಿಮಾನಿಗಳನ್ನು ಮಾತ್ರವಲ್ಲ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಕುಣಿದು ಸಂಭ್ರಮಿಸುವಂತೆ ಮಾಡಿದೆ.
ಅಂತಿಮ ಓವರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ ಗೆಲುವಿಗೆ 13 ರನ್‌ಗಳ ಅಗತ್ಯವಿತ್ತು. ಈ ಪಂದ್ಯದಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದ ಟಾನ್ ಕರನ್ ಅಂತಿಮ ಓವರ್ ಬೌಲಿಂಗ್ ಮಾಡಲು ಕಣಕ್ಕಿಳಿದಿದ್ದರು. ಈ ಓವರ್‌ನಲ್ಲಿ ಧೋನಿ ಮೂರು ಬೌಂಡರಿಗಳನ್ನು ಸಿಡಿಸುವ ಮೂಲಕ ಪಂದ್ಯದಲ್ಲಿ ಇನ್ನೂ ಎರಡು ಎಸೆತಗಳು ಬಾಕಿಯಿರುವಂತೆಯೇ ಗೆಲ್ಲಿಸಿ ಬೀಗಿದ್ದರು. ಈ ಮೂಲಕ ಚೆನ್ನೈ ಫೈನಲ್‌ಗೆ ಪ್ರವೇಶಿಸಿತ್ತು, ಇದಕ್ಕೂ ಹೊಂದಿನ ಓವರ್‌ನಲ್ಲಿ ಆವೇಶ್ ಖಾನ್ ಎಸೆತವನ್ನು ಭರ್ಜರಿಯಾಗಿ ಸಿಕ್ಸರ್‌ಗೆ ಅಟ್ಟುವ ಮೂಲಕ ಡೆಲ್ಲಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು ಅನುಭವಿ ಧೋನಿ. ಈ ಪಂದ್ಯದಲ್ಲಿ ಕೇವಲ 6 ಎಸೆತಗಳನ್ನು ಎದುರಿಸಿದ ಧೋನಿ ಒಂದು ಸಿಕ್ಸರ್ ಹಾಗೂ ಮೂರು ಬೌಂಡರಿಗಳ ಸಹಿತ 18 ರನ್ ಸಿಡಿಸಿದ್ದಾರೆ.
ಧೋನಿಯ ಭರ್ಜರಿ ಆಟಕ್ಕೆ ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮ ಹರ್ಷವನ್ನು ಟ್ವಿಟ್ಟರ್‌ನಲ್ಲಿ ವ್ಯಕ್ತಪಡಿಸಿದ್ದಾರೆ. 'ಆಂಡ್ ದಿ ಕಿಂಗ್ ಈಸ್ ಬ್ಯಾಕ್' ಎಂದು ಟ್ವಿಟ್ಟರ್‌ನಲ್ಲಿ ಉದ್ಘರಿಸಿರುವ ವಿರಾಟ್ ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿವರಿದು "ಕ್ರಿಕೆಟ್ ಕಂಡ ಅತ್ಯಂತ ಶ್ರೇಷ್ಠ ಫಿನಿಷರ್. ಇಂದು ರಾತ್ರಿ ಕುಳಿತ ಕುರ್ಚಿ ಬಿಟ್ಟು ಕುಣಿದು ಕುಪ್ಪಳಿಸುವಂತೆ ಮಾಡಿದ್ದಾರೆ" ಎಂದು ತಮ್ಮ ಭಾವನೆಯನ್ನು ಕೊಹ್ಲಿ ಹೊರಹಾಕಿದ್ದಾರೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 172 ರನ್‌ಗಳನ್ನು ಗಳಿಸಿತ್ತು. ಆರಂಭಿಕ ಆಟಗಾರ ಪೃಥ್ವಿ ಶಾ ಹಾಗೂ ರಿಷಬ್ ಪಂತ್ ಸಿಡಿಸಿದ ಭರ್ಜರಿ ಅರ್ಧ ಶತಕದ ನೆರವಿನಿಂದ ಡಿಸಿ ಈ ಸವಾಲಿನ ಮೊತ್ತವನ್ನು ಪೇರಿಸಲು ಸಾಧ್ಯವಾಗಿತ್ತು.
ಈ ಮೊತ್ತವನ್ನು ಬೆನ್ನಟ್ಟಿದ ಧೋನಿ ನೇತೃತ್ವದ ಸಿಎಸ್‌ಕೆಗೆ ಆರಂಭದಲ್ಲಿ ಆಘಾತ ಉಂಟಾಯಿತು. ಫಾಪ್ ಡು ಪ್ಲೆಸಿಸ್ ಕೇವಲ ಎರಡು ರನ್‌ಗಳಿಸಿ ವಿಕೆಟ್ ಕಳೆದುಕೊಂಡಿದ್ದರು. ಆದರೆ ಎರಡನೇ ವಿಕೆಟ್‌ಗೆ ಜೊತೆಯಾದ ಋತುರಾಜ್ ಗಾಯಕ್ವಾಡ್ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ ಅಮೋಘ ಪ್ರದರ್ಶನ ನೀಡಿದರು. 110 ರನ್‌ಗಳ ಜೊತೆಯಾಟ ಈ ಜೋಡಿಯಿಂದ ಬಂದಿತ್ತು. ನಂತರ ಸಣ್ಣ ಕುಸಿತ ಕಂಡ ಚೆನ್ನೈ ಸೂಒರ್ ಕಿಂಗ್ಸ್ ವಿರುದ್ಧ ಡಿಸಿ ಬೌಲರ್‌ಗಳು ಮೇಲುಗೈ ಸಾಧಿಸುವ ಪ್ರಯತ್ನ ಮಾಡಿದ್ದರು. ಆದರೆ ಅಂತಿಮ ಓವರ್‌ನ್ಲಲಿ ಅನುಭವಿ ಧೋನಿ ಆಟದ ಮುಂದೆ ಡೆಲ್ಲಿ ಲೆಕ್ಕಾಚಾರ ತಲೆಕೆಳಗಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ 9ನೇ ಬಾರಿಗೆ ಐಪಿಎಲ್‌ನ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ.