
ಈ ಬಾರಿಯ ಐಪಿಎಲ್‌ನಲ್ಲಿ ಶ್ರೀಲಂಕಾದ ಇಬ್ಬರು ಆಟಗಾರರು ಆರ್‌ಸಿಬಿ ಪರವಾಗಿ ಕಣಕ್ಕಿಳಿಯಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶ್ರೀಲಂಕಾ ಕ್ರಿಕೆಟ್ ತಂಡದ ವನಿಂದು ಹಸರಂಗ ಹಾಗೂ ದುಶ್ಮಂತಾ ಚಮೀರಾ ಅವರೊಂದಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು. ಐಪಿಎಲ್ 2021ರ ಆವೃತ್ತಿಯಲ್ಲಿ ಉಳಿದ ಪಂದ್ಯಗಳಲ್ಲಿ ಆಡಲು ಈ ಆಟಗಾರರು ಆರ್‌ಸಿಬಿ ಜೊತೆಗೆ ಸಹಿ ಹಾಕಿದ್ದಾರೆ. ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರು ಐಪಿಎಲ್‌ನಲ್ಲಿ ಭಾಗಿಯಾಗಲು ಈಗ ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಅನುಮತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಇಂದು ಅಧಿಕೃತ ಮಾಹಿತಿ ಹೊರಬಿದ್ದಿದೆ.
ನಿರಾಕ್ಷೇಪಣಾ ಪತ್ರ ನೀಡಿದ ಶ್ರೀಲಂಕಾ ಕ್ರಿಕೆಟ್: ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಯ ಉಳಿದ ಪಂದ್ಯಗಳಲ್ಲಿ ಭಾಗವಹಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ವನಿಂದು ಹಸರಂಗ ಹಾಗೂ ದುಶ್ಮಂತಾ ಚಮೀರಾ ಇಬ್ಬರಿಗೂ ನಿರಾಕ್ಷೇಪಣಾ ಪತ್ರವನ್ನು ನೀಡಿದೆ. ಈ ಮೂಲಕ ಆರ್‌ಸಿಬಿ ಪರವಾಗಿ ಆಡಲು ಲಂಕಾ ಮಂಡಳಿಯಿಂದ ಈ ಆಟಗಾರರು ಅಧಿಕೃತ ಒಪ್ಪಿಗೆಯನ್ನು ಪಡೆದುಕೊಂಡಂತಾಗಿದೆ.
ಒಪ್ಪಿಗೆಯ ಜೊತೆಗೆ ಟ್ವಿಸ್ಟ್ ಕೊಟ್ಟ ಲಂಕಾ ಮಂಡಳಿ: ಈ ಬಾರಿಯ ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ಶ್ರೀಲಂಕಾ ತಂಡದ ಈ ಇಬ್ಬರು ಆಟಗಾರರು ಭಾಗಿಯಾಗಲು ಒಪ್ಪಿಗೆಯನ್ನು ನೀಡುತ್ತಲೇ ಲಂಕಾ ಕ್ರಿಕೆಟ್ ಮಂಡಳಿ ಇದಕ್ಕೆ ಒಂದು ಟ್ವಿಸ್ಟ್ ಕೂಡ ನೀಡಿದೆ. ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ಆಡಲು ಅನುಮತಿ ನೀಡಿದ್ದರೂ ಈ ಆಟಗಾರರು ಉಳಿದ ಅರ್ಧ ಐಪಿಎಲ್‌ನ ಸಂಪೂರ್ಣ ಪಂದ್ಯವನ್ನು ಆಡಲು ಅವಕಾಶ ನೀಡಿಲ್ಲ. ಲೀಗ್ ಹಂತ ಸಂಪೂರ್ಣವಾಗುತ್ತಲೇ ಆಟಗಾರರು ಐಪಿಎಲ್‌ಅನ್ನು ತೊರೆಯಬೇಕಿದೆ.
ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಬೇಕಿದೆ ಲಂಕಾ ಜೋಡಿ: ಆರ್‌ಸಿಬಿ ತಂಡಕ್ಕೆ ಬದಲಿ ಆಟಗಾರರಾಗಿ ಸೇರ್ಪಡೆಯಾಗಿರುವ ವನಿಂದು ಹಸರಂಗ ಹಾಗೂ ದುಶ್ಮಂತಾ ಚಮೀರಾ ಇಬ್ಬರು ಕೂಡ ಅಕ್ಟೋಬರ್ 10ರಂದು ಶ್ರೀಲಂಕಾ ತಂಡವನ್ನು ಸೇರಿಕೊಳ್ಳಬೇಕಿದೆ. ಟಿ20 ವಿಶ್ವಕಪ್‌ಗೂ ಮುನ್ನ ಲಂಕಾ ಮಂಡಳಿ ಈಗಾಗಲೇ ಅಭ್ಯಾಸ ಪಂದ್ಯವನ್ನು ಆಯೋಜನೆ ಮಾಡಿದೆ. ಇದರಲ್ಲಿ ಭಾಗಿಯಾಗುವಂತೆ ಸೂಚನೆಯನ್ನು ನೀಡಲಾಗಿದೆ. ಹೀಗಾಗಿ ಲೀಗ್ ಹಂತದ ಪಂದ್ಯಗಳಲ್ಲಿ ಭಾಗಿಯಾಗಲಿರುವ ಶ್ರೀಲಂಕಾದ ಈ ಇಬ್ಬರು ಆಟಗಾರರು ಬಳಿಕ ನಡೆಯಲಿರುವ ಪ್ಲೇಆಫ್ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ. "ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮುಕ್ತಾಯವಾಗುತ್ತಿದ್ದಂತೆಯೇ ಸೆಪ್ಟೆಂಬರ್ 15ರಿಂದ ಆರಂಭವಾಗಲಿರುವ ಐಪಿಎಲ್‌ನಲ್ಲಿ ಭಾಗಿಯಾಗಲು ಶ್ರೀಲಂಕಾದ ಇಬ್ಬರು ಆಟಗಾರರಿಗೆ ನಿರಾಕ್ಷೇಪಣಾ ಪತ್ರವನ್ನು ನೀಡಲಾಗಿದೆ. ಈ ಇಬ್ಬರು ಆಟಗಾರರು ಅಕ್ಟೋಬರ್ 10 ರಂದು ಐಸಿಸಿ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ನಡೆಯುವ ಅಭ್ಯಾಸ ಪಮದ್ಯದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡವನ್ನು ಕೂಡಿಕೊಳ್ಳಲಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಮೊಹಮ್ಮದ್ ಸಿರಾಜ್, ಯಜುರ್ವೇದ ಚಾಹಲ್, ಕೈಲ್ ಜೆಮಿಸನ್, ಕ್ರಿಶ್ಚಿಯನ್, ವನಿಂದು ಹಸರಂಗ, ದೇವದತ್ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಜಾರ್ಜ್ ಗಾರ್ಟನ್, ದುಷ್ಮಂತ ಚಮೀರಾ, ಕೆಎಸ್ ಭಾರತ್, ಸುಯಾಶ್, ಅಜರುದ್ದೀನ್, ರಜತ್ ಪಾಟಿದಾರ್, ನವದೀಪ್ ಸೈನಿ, ಹರ್ಷಲ್ ಪಟೇಲ್, ವಾಷಿಂಗ್ಟನ್ ಸುಂದರ್, ಸಚಿನ್ ಬೇಬಿ, ಪವನ್ ದೇಶಪಾಂಡೆ, ಎಸ್ ಅಹ್ಮದ್.
ಆರ್‌ಸಿಬಿ ತಂಡದಲ್ಲಿ ಭಾರೀ ಬದಲಾವಣೆ: ಐಪಿಎಲ್ ಎರಡನೇ ಹಂತಕ್ಕೆ ಆರ್‌ಸಿಬಿಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನಡೆಯಲಿರುವ ಐಪಿಎಲ್ 2021ರ ಎರಡನೇ ಚರಣದ ಪಂದ್ಯಗಳ ವೇಳೆ ಆರ್‌ಸಿಬಿ ತಂಡದಲ್ಲಿ ಪ್ರಮುಖ ಬದಲಾವಣೆಗಳು ಆಗಿದೆ. ತಂಡದ ಮುಖ್ಯ ಕೋಚ್ ಆಗಿ ಸೈಮನ್ ಕ್ಯಾಟಿಚ್ ಬದಲು ಮೈಕ್ ಹೆಸನ್ ಜವಾಬ್ಧಾರಿ ವಹಿಸಿಕೊಳ್ಳಲಿದ್ದಾರೆ. ಅಲ್ಲದೆ ಒಂದಿಷ್ಟು ಪ್ರಮುಖ ಆಟಗಾರರೂ ಕೂಡ ಬದಲಾಗಿದ್ದಾರೆ. ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಆರ್‌ಸಿಬಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಂ ಜಂಪಾ ಬದಲು ಶ್ರೀಲಂಕಾದ ಸ್ಪಿನ್ನರ್, ಆಲ್ ರೌಂಡರ್ ವನಿಂದು ಹಸರಂಗ ಆರ್‌ಸಿಬಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಸೀಸ್ ಮತ್ತೊಬ್ಬ ಬೌಲರ್ ಕೇನ್ ರಿಚರ್ಡ್ಸನ್ ಬದಲು ಶ್ರೀಲಂಕಾದ ದುಶ್ಮಂತ ಚಮೀರ ಕಣಕ್ಕಿಳಿಯಲಿದ್ದಾರೆ. ಇನ್ನು ನ್ಯೂಜಿಲೆಂಡ್‌ನ ವಿಕೆಟ್ ಕೀಪರ್ ಫಿನ್ ಅಲೆನ್ ಬದಲಿಗೆ ಸಿಂಗಾಪುರದ ಆಟಗಾರ ಟಿಮ್ ಡೇವಿಡ್ ತಂಡಕ್ಕೆ ಸೇರಿಕೊಂಡಿದ್ದಾರೆ. ಆರ್‌ಸಿಬಿ ಈ ವರ್ಷ ಉತ್ತಮ ಫಾರ್ಮ್‌ನಲ್ಲಿದ್ದು, ಬದಲಾವಣೆಗೆ ತಕ್ಕಂತೆ ಉತ್ತಮ ಪ್ರದರ್ಶನವೂ ನೀಡಿದರೆ ಚೊಚ್ಚಲ ಬಾರಿಗೆ ಟ್ರೋಫಿ ಗೆಲ್ಲಲು ಅವಕಾಶಗಳಿವೆ. ಐಪಿಎಲ್ ದ್ವಿತೀಯ ಹಂತದ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಆರ್‌ಸಿಬಿ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲನ್ನು ಎದುರಿಸಲಿದೆ.
ಶ್ರೀಲಂಕಾ ತಂಡದಿಂದ ಒಬ್ಬ ಆಟಗಾರನೂ ಆಡಿರಲಿಲ್ಲ: ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಯ ಮೊದಲ ಚರಣದ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ ತಮಡದಿಮದ ಯಾವಿಬ್ಬ ಆಟಗಾರನು ಕೂಡ ಕಣಕ್ಕಿಳಿದಿರಲಿಲ್ಲ. 2020ರ ಆವೃತ್ತಿಯಲ್ಲಿ ಆರ್‌ಸಿಬಿ ಪರವಾಗಿ ಆಡಿದ್ದ ಇಸುರು ಉದಾನ 2021ರ ಆವೃತ್ತಿಗೂ ಮುನ್ನ ತಂಡದಿಂದ ಬಿಡುಗಡೆಯಾಗಿದ್ದರು. ಬಳಿಕ ಹರಾಜಿನಲ್ಲಿಯೂ ಅವರನ್ನು ಯಾವುದೇ ತಂಡ ಕೊಂಡುಕೊಳ್ಳುವ ಮನಸ್ಸು ಮಾಡಿರಲಿಲ್ಲ. ಹೀಗಾಗಿ ಇದೇ ಮೊದಲ ಬಾರಿಗೆ ಎಂಬಂತೆ ಶ್ರೀಲಂಕಾ ಕ್ರಿಕೆಟಿಗರಿಲ್ಲದೆ ಐಪಿಎಲ್ ನಡೆಯುತ್ತಿತ್ತು. ಆದರೆ ಎರಡನೇ ಚರಣದ ಟೂರ್ನಿಯ್ಲಲಿ ಲಂಕಾ ತಂಡದ ಇಬ್ಬರಿಗೆ ಆಡುವ ಅವಕಾಶ ದೊರೆತಿದೆ. ಈ ಬಾರಿಯೂ ಆರ್‌ಸಿಬಿ ತಂಡವೇ ಲಂಕಾ ಆಟಗಾರರನ್ನು ಸೆಳೆದುಕೊಂಡಿದೆ.
ಈ ಬಾರಿಯ ಐಪಿಎಲ್‌ನ ಎರಡನೇ ಹಂತದ ಪಂದ್ಯಗಳು ಯುನೈಟೆಡ್ ಎಮಿರೇಟ್ಸ್ ಆಫ್ ಅರಬ್(ಯುಎಇ)ನಲ್ಲಿ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 15ರ ವರೆಗೆ ನಡೆಯಲಿದೆ. ಅದಾದ ಬಳಿಕ ಯುಎಇ ಹಾಗೂ ಒಮಾನ್‌ನಲ್ಲಿ ಅಕ್ಟೋಬರ್ 17 ರಿಂದ ನವೆಂಬರ್ 14ರ ವರೆಗೆ ಟಿ20 ವಿಶ್ವಕಪ್ ನಡೆಯಲಿದೆ. ಬಿಸಿಸಿಐ ಆಯೋಜಿಸುತ್ತಿರುವ ಈ ಬಾರಿಯ ಟಿ20 ವಿಶ್ವಕಪ್ ಭಾರತದಲ್ಲಿ ಆಯೋಜನೆಯಾಗಬೇಕಿತ್ತು. ಆದರೆ ಭಾರತದಲ್ಲಿ ಕೊರೊನಾವೈರಸ್‌ನ ಹಾವಳಿಯಿಂದಾಗಿ ಯುಎಇ ಹಾಗೂ ಒಮಾನ್‌ಗೆ ಸ್ಥಳಾಂತರಿಸಲಾಗಿದೆ.