ಐಪಿಎಲ್ ಟ್ರೋಫಿ ಗೆದ್ದ ಸಿಎಸ್‌ಕೆಗೆ 20 ಕೋಟಿ; ಸೋತ ಕೆಕೆಆರ್ ಮತ್ತು ಆರ್‌ಸಿಬಿಗೆ ಸಿಕ್ಕ ಹಣವೆಷ್ಟು ಗೊತ್ತಾ?

ಜಗತ್ತಿನ ಅತ್ಯಂತ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನಾಲ್ಕನೇ ಆವೃತ್ತಿಗೆ ಅಕ್ಟೋಬರ್ 15ರಂದು ತೆರೆ ಬಿದ್ದಿದೆ. ಭಾರತ ನೆಲದಲ್ಲಿ ಆರಂಭವಾಗಿದ್ದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೋನಾ ವೈರಸ್ ಕಾರಣದಿಂದಾಗಿ ಟೂರ್ನಿ ಮಧ್ಯದಲ್ಲಿಯೇ ತಾತ್ಕಾಲಿಕವಾಗಿ ಸ್ಥಗಿತಗೊಂಡು ಯುಎಇಗೆ ಸ್ಥಳಾಂತರಿಸಲ್ಪಟ್ಟಿತ್ತು. ಹೀಗೆ ಟೂರ್ನಿ ಮಧ್ಯದಲ್ಲಿ ಅಡೆತಡೆಗಳನ್ನು ಎದುರಿಸಿದ್ದ ಈ ಬಾರಿಯ ಐಪಿಎಲ್ ಆವೃತ್ತಿ ಯುಎಇ ನೆಲದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಅಕ್ಟೋಬರ್ 15ರ ಶುಕ್ರವಾರದಂದು ದುಬೈ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 27 ರನ್‌ಗಳ ಗೆಲುವು ಸಾಧಿಸುವುದರ ಮೂಲಕ ನಾಲ್ಕನೇ ಬಾರಿ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ ಮತ್ತು ಮೊಯಿನ್ ಅಲಿ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿತು.
ಇನ್ನು ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇ ಆಫ್ ಹಂತಕ್ಕೆ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಲಗ್ಗೆ ಇಟ್ಟಿದ್ದವು. ಪ್ಲೇ ಆಫ್ ಸುತ್ತಿನ ಕ್ವಾಲಿಫೈಯರ್ 1 ಪಂದ್ಯದಲ್ಲಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನೇರವಾಗಿ ಫೈನಲ್ ಪ್ರವೇಶಿಸಿತು. ಅತ್ತ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನ ನೀಡಿ, ನಂತರ ದ್ವಿತೀಯಾರ್ಧದಲ್ಲಿ ಪುಟಿದೇಳುವ ಮೂಲಕ ಸಾಲು ಸಾಲು ಪಂದ್ಯಗಳನ್ನು ಗೆದ್ದು ಉತ್ತಮ ನೆಟ್ ರನ್ ರೇಟ್ ಹೊಂದಿದ್ದ ಕಾರಣ ಪ್ಲೇ ಆಫ್ ಹಂತ ಪ್ರವೇಶಿಸಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ ಪ್ಲೇ ಆಫ್ ಸುತ್ತಿನ ಪಂದ್ಯಗಳಲ್ಲಿ ಸೋಲುಣಿಸಿ ಫೈನಲ್ ಪಂದ್ಯಕ್ಕೆ ಪ್ರವೇಶವನ್ನು ಮಾಡಿತ್ತು. ಹೀಗೆ ಸಾಲು ಸಾಲು ಪಂದ್ಯಗಳನ್ನು ಗೆಲ್ಲುತ್ತಾ ಫೈನಲ್ ಪ್ರವೇಶಿಸಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲಿನ ರುಚಿ ತೋರಿಸಿದೆ.
ಹೀಗೆ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ಮುಕ್ತಾಯವಾಗಿದ್ದು ವಿವಿಧ ತಂಡಗಳ ಕೆಲ ಆಟಗಾರರು ನಾನಾ ರೀತಿಯ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಅದರ ಜೊತೆಗೆ ಪ್ಲೇ ಆಫ್ ಸುತ್ತಿನಲ್ಲಿ ಹೊರಬಿದ್ದ ತಂಡಗಳು, ಫೈನಲ್ ಪಂದ್ಯದಲ್ಲಿ ಸೋತ ತಂಡ ಮತ್ತು ಟ್ರೋಫಿಯನ್ನು ಗೆದ್ದ ತಂಡಕ್ಕೆ ವಿವಿಧ ರೀತಿಯ ನಗದು ಬಹುಮಾನಗಳು ಸಿಕ್ಕಿದ್ದು, ಆ ನಗದು ಬಹುಮಾನಗಳು ಯಾರಿಗೆ ಎಷ್ಟು ಸಿಕ್ಕಿದೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ.

ಟ್ರೋಫಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 20 ಕೋಟಿ
ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಟ್ರೋಫಿ ಎತ್ತಿ ಹಿಡಿಯುವ ಮೂಲಕ ದೊಡ್ಡ ಮಟ್ಟದ ಕಮ್ ಬ್ಯಾಕ್ ಮಾಡಿದೆ. ಐಪಿಎಲ್ ಇತಿಹಾಸದಲ್ಲಿ ತನ್ನ ನಾಲ್ಕನೇ ಟ್ರೋಫಿಯನ್ನು ತನ್ನದಾಗಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 20 ಕೋಟಿ ರೂಪಾಯಿ ಬಹುಮಾನ ಹಣ ಸಿಕ್ಕಿದೆ.

ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸಿಕ್ಕ ಬಹುಮಾನ ಧನ
ಐಪಿಎಲ್ ದ್ವಿತೀಯಾರ್ಧದಲ್ಲಿ ಮತ್ತು ಪ್ಲೇ ಆಫ್ ಸುತ್ತಿನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಫೈನಲ್ ಪಂದ್ಯಕ್ಕೆ ಪ್ರವೇಶವನ್ನು ಪಡೆದುಕೊಂಡು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲಿಗೆ ಶರಣಾದ ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದೆ. ಹೀಗೆ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೋತ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 12.5 ಕೋಟಿ ರೂಪಾಯಿ ಬಹುಮಾನ ಲಭಿಸಿದೆ.

ಪ್ಲೇ ಆಫ್ ಸುತ್ತಿನಲ್ಲಿ ಟೂರ್ನಿಯಿಂದ ಹೊರಬಿದ್ದವರಿಗೆ ಸಿಕ್ಕ ಹಣವಿಷ್ಟು
ಇನ್ನು ಪ್ಲೇ ಆಫ್ ಹಂತದ ಪಂದ್ಯಗಳಲ್ಲಿ ಟೂರ್ನಿಯಿಂದ ಹೊರಬಿದ್ದ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಎರಡೂ ತಂಡಗಳಿಗೂ ಸಹ ಒಂದೇ ಮೊತ್ತದ ಬಹುಮಾನ ಲಭಿಸಿವೆ. ಈ ಎರಡೂ ತಂಡಗಳಿಗೂ ತಲಾ 8.5 ಕೋಟಿ ರೂಪಾಯಿ ಬಹುಮಾನ ಹಣ ಸಿಕ್ಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications