
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 13ನೇ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ ( ಏಪ್ರಿಲ್ 20 ) ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್‌ಗಳ ಸಾಧಾರಣ ಮೊತ್ತವನ್ನು ಕಲೆ ಹಾಕಿತು. 138 ರನ್‌ಗಳ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಓವರ್‌ನಲ್ಲಿ ಗೆಲುವಿನ ನಗೆ ಬೀರಿತು.
ಈ ಮೂಲಕ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಎರಡನೇ ಸೋಲನ್ನು ಮುಂಬೈ ಇಂಡಿಯನ್ಸ್ ತಂಡ ಅನುಭವಿಸಿತು. ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಒಂದು ವಿಕೆಟ್ ಪಡೆದುಕೊಂಡರು ಸಹ ಹೇಳಿಕೊಳ್ಳುವಂತಹ ಉತ್ತಮ ಬೌಲಿಂಗ್ ಪ್ರದರ್ಶನವನ್ನು ನೀಡಲಿಲ್ಲ. ಅಷ್ಟೇ ಅಲ್ಲದೆ ಐಪಿಎಲ್ ಇತಿಹಾಸದಲ್ಲಿಯೇ ಅತೀ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಇದೇ ಪಂದ್ಯದಲ್ಲಿ ಬುಮ್ರಾ ಬರೆದುಕೊಂಡಿದ್ದಾರೆ.
ಹೌದು ಜಸ್ಪ್ರೀತ್ ಬುಮ್ರಾ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ನೋಬಾಲ್ ಹಾಕಿದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಲ್ಲಿ 19ನೇ ಓವರ್ ಮಾಡಿದ ಬುಮ್ರಾ ಒಂದೇ ಓವರ್‌ನಲ್ಲಿ 2 ನೋ ಬಾಲ್ ಎಸೆಯುವುದರ ಮೂಲಕ ಈ ಕೆಟ್ಟ ದಾಖಲೆಯನ್ನು ಮಾಡಿದರು. ಐಪಿಎಲ್ ಇತಿಹಾಸದಲ್ಲಿ ಒಟ್ಟು 25 ನೋಬಾಲ್ ಮಾಡಿರುವ ಬುಮ್ರಾ ಅತಿ ಹೆಚ್ಚು ನೋಬಾಲ್ ಹಾಕಿದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಬುಮ್ರಾ ಹೊರತುಪಡಿಸಿ ಶ್ರೀಶಾಂತ್ 23 ಹಾಗೂ ಇಶಾಂತ್ ಶರ್ಮಾ 21 ನೋ ಬಾಲ್ ಎಸೆದಿದ್ದಾರೆ.