
ಕಳೆದ ಬಾರಿಯ ಐಪಿಎಲ್‌ನಲ್ಲಿ ಹೀನಾಯ ಪ್ರದರ್ಶನ ನೀಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್‌ನಲ್ಲಿ ನಿರೀಕ್ಷೆಗೂ ಮೀರಿ ಅದ್ಭುತ ಆಟವನ್ನು ನೀಡುತ್ತಿದೆ. ಮತ್ತೊಂದೆಡೆ ಹಾಲಿ ಚಾಂಪಿಯನ್ ಹಣೆಪಟ್ಟಿಯನ್ನು ಹೊಂದಿರುವ ಮುಂಬೈ ಇಂಡಿಯನ್ಸ್‌ಗೆ ಈ ಆವೃತ್ತಿಯಲ್ಲಿ ನಿರೀಕ್ಷಿತ ಯಶಸ್ಸು ಸಾಧ್ಯವಾಗಿಲ್ಲ. ಈ ಎರಡು ತಂಡಗಳ ಮುಖಾಮುಖಿ ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಮುಂಬೈ ಇಂಡಿಯನ್ಸ್ ಮೇಲುಗೈ ಸಾಧಿಸಿದ್ದು 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಗೆದ್ದಿರುವುದು 13 ಪಂದ್ಯಗಳನ್ನು ಮಾತ್ರ.
ಕಳೆದ ಐದು ಪಂದ್ಯಗಳ ಲೆಕ್ಕಾಚಾರದಲ್ಲೂ ಮುಂಬೈ ಇಂಡಿಯನ್ಸ್ ತಂಡ ಭಾರೀ ಅಂತರವನ್ನು ಕಾಯ್ದುಕೊಂಡಿದೆ. ಈ ಹಿಂದಿನ ಯದು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ 4 ಪಂದ್ಯಗಳನ್ನು ಗೆದ್ದಿದ್ದರೆ ಚೆನ್ನೈ ಗೆಲುವು ಸಾಧಿಸಿದ್ದು ಕೇವಲ 1 ಪಂದ್ಯವನ್ನು ಮಾತ್ರ.
ಈ ಎರಡು ತಂಡಗಳ ಮುಖಾಮುಖಿಯಲ್ಲಿ ಬ್ಯಾಟಿಂಗ್‌ನಲ್ಲಿ ಹೆಚ್ಚು ಯಶಸ್ಸು ಸಾಧಿಸಿದ ಆಟಗಾರ ಸುರೇಶ್ ರೈನಾ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ಆಟಗಾರ ಮುಂಬೈ ವಿರುದ್ಧ 730 ರನ್‌ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ 658 ರನ್‌ಗಳಿಸಿದ್ದಾರೆ.
ಬೌಲಿಂಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಲಸಿತ್ ಮಲಿಂಗ ಮುಂಚೂಣಿಯಲ್ಲಿದ್ದು 37 ವಿಕೆಟ್ ಕಬಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ಡ್ವೇಯ್ನ್ ಬ್ರಾವೋ ಇದ್ದಾರೆ. ಬ್ರಾವೋ 27 ವಿಕೆಟ್‌ಗಳನ್ನು ಈ ಎರಡು ತಣಡಗಳ ಮುಖಾಮುಖಿಯ ವೇಳೆಯಲ್ಲಿ ಪಡೆದುಕೊಂಡಿದ್ದಾರೆ.