ಐಪಿಎಲ್ 2021 ಪ್ಲೇಆಫ್: ಎಲ್ಲಾ ಪಂದ್ಯಗಳ ವಿವರ, ಸ್ಥಳ, ದಿನಾಂಕ ಮತ್ತು ಸಮಯದ ಸಂಪೂರ್ಣ ಮಾಹಿತಿ

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಅಕ್ಟೋಬರ್ 8ರ ಶುಕ್ರವಾರಕ್ಕೆ ಸಂಪೂರ್ಣವಾಗಿ ಮುಕ್ತಾಯಗೊಂಡಿವೆ. ಈ ಮೂಲಕ ಪ್ಲೇ ಆಫ್ ಪ್ರವೇಶಿಸಿರುವ ನಾಲ್ಕನೇ ತಂಡ ಯಾವುದು ಎಂಬ ಸ್ಪಷ್ಟ ಚಿತ್ರಣವೂ ಕೂಡ ಸಿಕ್ಕಿದೆ. ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಜತೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಟ್ಟಿದೆ.
ಮೊದಲಿಗೆ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇ ಆಫ್ ಹಂತವನ್ನು ಅಧಿಕೃತವಾಗಿ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದವು. ಆದರೆ ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆಯಲಿರುವ ನಾಲ್ಕನೇ ತಂಡ ಯಾವುದು ಎಂಬ ಕುತೂಹಲ ಲೀಗ್ ಹಂತದ ಕೊನೆಯಲ್ಲಿ ಹೆಚ್ಚಾಗಿತ್ತು. ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವೆ ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆಯುವ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಅಧಿಕ ರನ್ ರೇಟ್ ಹೊಂದಿರುವ ಕಾರಣದಿಂದಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ಲೇ ಆಫ್ ಪ್ರವೇಶವನ್ನು ಪಡೆದುಕೊಂಡಿದೆ.
ಹೀಗೆ ಲೀಗ್ ಹಂತ ಮುಕ್ತಾಯಗೊಂಡ ನಂತರ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇ ಆಫ್ ಹಂತಕ್ಕೆ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಪ್ರವೇಶವನ್ನು ಪಡೆದುಕೊಂಡಿದ್ದು, ಟೂರ್ನಿಯಲ್ಲಿ ಮುಂಬರುವ ಕ್ವಾಲಿಫೈಯರ್ 1, ಎಲಿಮಿನೇಟರ್, ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯಗಳ ಕುರಿತಾದ ಮಾಹಿತಿ ಮುಂದೆ ಇದೆ ಓದಿ..

ಕ್ವಾಲಿಫೈಯರ್ 1 ಪಂದ್ಯ:
ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕ್ವಾಲಿಫೈಯರ್ 1 ಪಂದ್ಯವನ್ನಾಡಲು ಅರ್ಹತೆ ಪಡೆದುಕೊಂಡಿವೆ. ಈ ಪಂದ್ಯ ಅಕ್ಟೋಬರ್ 10ರ ಭಾನುವಾರದಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಆರಂಭವಾಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ ಮತ್ತು ಸೋತ ತಂಡ ಕ್ವಾಲಿಫೈಯರ್ 2 ಪಂದ್ಯದಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದು ಬರುವ ತಂಡದ ಜೊತೆ ಸೆಣಸಾಟ ನಡೆಸಲಿದೆ.

ಎಲಿಮಿನೇಟರ್ ಪಂದ್ಯ:
ಅಂಕಪಟ್ಟಿಯಲ್ಲಿ ತೃತೀಯ ಸ್ಥಾನ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಾಡಲಿವೆ. ಈ ಪಂದ್ಯ ಅಕ್ಟೋಬರ್ 11ರ ಸೋಮವಾರದಂದು ಶಾರ್ಜಾ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಆರಂಭಗೊಳ್ಳಲಿದೆ. ಇನ್ನು ಈ ಪಂದ್ಯದಲ್ಲಿ ಗೆದ್ದ ತಂಡ ಕ್ವಾಲಿಫೈಯರ್ 2ಗೆ ಪ್ರವೇಶಿಸಲಿದ್ದು ಕ್ವಾಲಿಫೈಯರ್ 1 ಪಂದ್ಯದಲ್ಲಿ ಸೋತ ತಂಡದ ಜೊತೆ ಸೆಣಸಾಟ ನಡೆಸಲಿದೆ. ಹಾಗೂ ಈ ಎಲಿಮಿನೇಟರ್ ಪಂದ್ಯದಲ್ಲಿ ಸೋತ ತಂಡ ಅಧಿಕೃತವಾಗಿ ಟೂರ್ನಿಯಿಂದ ಹೊರ ಬೀಳಲಿದೆ.

ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯದ ಮಾಹಿತಿ
ಕ್ವಾಲಿಫೈಯರ್ 2:
ಕ್ವಾಲಿಫೈಯರ್ 1 ಪಂದ್ಯದಲ್ಲಿ ಸೋತ ತಂಡ ಮತ್ತು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡಗಳು ಈ ಕ್ವಾಲಿಫೈಯರ್ 2 ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ ಹಾಗೂ ಈ ಸುತ್ತಿನಲ್ಲಿ ಗೆದ್ದ ತಂಡ ಫೈನಲ್ ಪ್ರವೇಶವನ್ನು ಪಡೆದುಕೊಳ್ಳಲಿದೆ. ಈ ಮಹತ್ವದ ಕ್ವಾಲಿಫೈಯರ್ 2 ಪಂದ್ಯ ಅಕ್ಟೋಬರ್ 13ರ ಬುಧವಾರದಂದು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಆರಂಭವಾಗಲಿದೆ. ಈ ಪಂದ್ಯದಲ್ಲಿ ಸೋತ ತಂಡವು ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
ಫೈನಲ್ ಪಂದ್ಯ:
ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಹತ್ವದ ಫೈನಲ್ ಪಂದ್ಯ ಅಕ್ಟೋಬರ್ 15ರ ಶುಕ್ರವಾರದಂದು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications