
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ನ ಪ್ರಮುಖ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಆರಂಭಿಕ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ ಡಿ ಕಾಕ್ ಮುಂದಿನ ಪಂದ್ಯಕ್ಕೆ ಲಭ್ಯರಿರಲಿದ್ದಾರೆ ಎಂದು ಎಂಐ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ, ಭಾರತದ ಮಾಜಿ ವೇಗಿ ಝಹೀರ್ ಖಾನ್ ಹೇಳಿದ್ದಾರೆ.
ಏಪ್ರಿಲ್ 9ರಂದು ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಆಡಿರಲಿಲ್ಲ. ಆ ಪಂದ್ಯದಲ್ಲಿ ಮುಂಬೈ ಸೋತಿತ್ತು. ಉದ್ಘಾಟನಾ ಪಂದ್ಯದ ವೇಳೆ ಕ್ವಾರಂಟೈನ್‌ನಲ್ಲಿದ್ದ ಡಿ ಕಾಕ್, ಏಪ್ರಿಲ್ 13ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ.
ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟ
'ಕ್ವಿಂಟನ್ ಅವರ ಕ್ವಾರಂಟೈನ್ ಮುಕ್ತಾಯಗೊಂಡಿದೆ. ಅವರು ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಈ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಅವರು ಎದುರು ನೋಡುತ್ತಿದ್ದಾರೆ. ಹೌದು ಅವರು ನಾಳಿನ (ಏಪ್ರಿಲ್ 13) ಪಂದ್ಯಕ್ಕೆ ಲಭ್ಯರಿರಲಿದ್ದಾರೆ,' ಎಂದು ಖಾನ್ ಮಾಹಿತಿ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಕ್ವಿಂಟನ್ ಮತ್ತೆ ಮುಂಬೈ ಸೇರಿಕೊಂಡಿರುವುದು ರೋಹಿತ್ ಶರ್ಮಾ ಪಡೆಗೆ ಬಲ ತುಂಬಿದೆ. ಏಪ್ರಿಲ್ 13ರಂದು ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್ 5ನೇ ಪಂದ್ಯದಲ್ಲಿ ಮುಂಬೈ ಮತ್ತು ಕೋಲ್ಕತ್ತಾ ಮುಖಾಮುಖಿಯಾಗಲಿವೆ. ಎರಡೂ ತಂಡಗಳಿಗೂ ಇದು ಟೂರ್ನಿಯ ಎರಡನೇ ಪಂದ್ಯ. ಇದರಲ್ಲಿ ಕೆಕೆಆರ್ ಈಗಾಗಲೇ ಆರಂಭಿಕ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಗೆದ್ದಿದೆ.