ಆರ್‌ಸಿಬಿಗೆ ಇನ್ನೂ ಇದೆ ದ್ವಿತೀಯ ಸ್ಥಾನ ಪಡೆಯುವ ಅವಕಾಶ!; ಹೀಗಾದರೆ ಮಾತ್ರ

ಪ್ರಸ್ತುತ ನಡೆಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ಮುಕ್ತಾಯದ ಘಟ್ಟವನ್ನು ತಲುಪಿದೆ. ಟೂರ್ನಿಯ ಲೀಗ್ ಪಂದ್ಯಗಳ ಅಂತಿಮ ದಿನವಾದ ಇಂದು ( ಅಕ್ಟೋಬರ್ 8 ) ಐಪಿಎಲ್ ಇತಿಹಾಸದಲ್ಲಿಯೇ ನಡೆಯದ ರೀತಿ ಒಂದೇ ದಿನ ಎರಡೆರಡು ಲೀಗ್ ಪಂದ್ಯಗಳು ಏಕಕಾಲಕ್ಕೆ ನಡೆಯುತ್ತಿವೆ. ಹೌದು ಸಂಜೆ 7.30ಕ್ಕೆ ಅಬುಧಾಬಿಯ ಶೈಖ್ ಜಾಯೆದ್ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ ಮತ್ತು ಅದೇ ಸಮಯಕ್ಕೆ ದುಬೈ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಹೀಗೆ ಇಂದು (ಅಕ್ಟೋಬರ್ 8) ನಡೆಯಲಿರುವ ಈ ಎರಡೂ ಪಂದ್ಯಗಳು ಮುಗಿದ ನಂತರ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್ ಹಂತವನ್ನು ಪ್ರವೇಶಿಸಲಿರುವ ನಾಲ್ಕನೇ ತಂಡ ಯಾವುದು ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಅಧಿಕೃತವಾಗಿ ಪ್ಲೇ ಆಫ್ ಹಂತವನ್ನು ಪ್ರವೇಶಿಸಿದೆ, ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಟ್ಟಿದೆ ಮತ್ತು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಈಗಾಗಲೇ ಪ್ಲೇ ಆಫ್ ಹಂತವನ್ನು ಅಧಿಕೃತವಾಗಿ ಪ್ರವೇಶಿಸಿದೆ. ಪ್ಲೇ ಆಫ್ ಸುತ್ತಿಗೆ ನಾಲ್ಕನೇ ತಂಡವಾಗಿ ಯಾರು ಪ್ರವೇಶ ಪಡೆದುಕೊಳ್ಳಲಿದ್ದಾರೆ ಎಂಬ ಕುತೂಹಲವಿತ್ತು. ಮತ್ತು ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಲು ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವೆ ದೊಡ್ಡ ಮಟ್ಟದ ಪೈಪೋಟಿ ಉಂಟಾಗಿತ್ತು.
ಆದರೆ, ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಜಯ ಸಾಧಿಸಿರುವ ಹಿನ್ನಲೆಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ಕನಸು ಬಹುತೇಕ ಅಳಿಸಿಹೋಗಿದೆ. ಇನ್ನು ಅಂಕಪಟ್ಟಿಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 16 ಅಂಕಗಳ ಜತೆ -0.159 ರನ್ ರೇಟ್ ಪಡೆದುಕೊಂಡಿದ್ದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ನಡೆಯಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ದೊಡ್ಡ ಮಟ್ಟದ ಜಯ ಸಾಧಿಸಿದರೆ 18 ಅಂಕಗಳ ಜತೆ +0.455 ನೆಟ್ ರನ್ ರೇಟ್ ಹೊಂದಿ ದ್ವಿತೀಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ದ್ವಿತೀಯ ಸ್ಥಾನ ಪಡೆದುಕೊಳ್ಳಬಹುದಾಗಿದೆ.
ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿಂತ ಹೆಚ್ಚಿನ ರನ್ ರೇಟ್ ಪಡೆದುಕೊಳ್ಳಬೇಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯಾವ ಅಂತರದಲ್ಲಿ ಜಯಗಳಿಸಬೇಕು ಎಂಬ ಲೆಕ್ಕಾಚಾರಗಳು ಈ ಕೆಳಕಂಡಂತಿವೆ..

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಈ ಬೃಹತ್ ಅಂತರದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲೇಬೇಕು!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿಂತ ಹೆಚ್ಚಿನ ನೆಟ್ ರನ್ ರೇಟ್ ಪಡೆದುಕೊಳ್ಳಬೇಕೆಂದರೆ ಇಂದು ( ಅಕ್ಟೋಬರ್ 8 ) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡು 163 ರನ್‌ಗಳ ಅಂತರದಿಂದ ಗೆಲ್ಲಲೇಬೇಕಾಗಿದೆ. ಹೌದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 163 ರನ್‌ಗಳ ಅಂತರದಿಂದ ಗೆದ್ದರೆ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿಂತ ಹೆಚ್ಚಿನ ನೆಟ್ ರನ್ ರೇಟ್ ಪಡೆದುಕೊಂಡು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಲಿದೆ. ಆದರೆ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 163 ರನ್‌ಗಳಿಂದ ಗೆಲ್ಲುವುದು ಸುಲಭದ ಮಾತಲ್ಲ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತೃತೀಯ ಸ್ಥಾನದಲ್ಲಿ ಲೀಗ್ ಹಂತವನ್ನು ಮುಗಿಸುವುದು ಬಹುತೇಕ ಖಚಿತವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತೃತೀಯ ಸ್ಥಾನ ಫಿಕ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟಿಂಗ್ ಆಯ್ದುಕೊಂಡು 163 ರನ್‌ಗಳ ಅಂತರದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದರೆ ಮಾತ್ರ ದ್ವಿತೀಯ ಸ್ಥಾನ ಸಿಗಲಿದೆ. ಒಂದುವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದ್ವಿತೀಯ ಸ್ಥಾನ ಪಡೆದುಕೊಳ್ಳುವ ಕನಸು ಭಗ್ನವಾಗಲಿದೆ. ಮತ್ತು ಟೂರ್ನಿಯಲ್ಲಿ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ.

ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಕತೆಯೇನು?
ಈ ಹಿಂದೆಯೇ ಹೇಳಿದಂತೆ ಇಂದು ( ಅಕ್ಟೋಬರ್ 8 ) ಏಕಕಾಲಕ್ಕೆ 2 ಪಂದ್ಯಗಳು ನಡೆಯುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಪಂದ್ಯ ನಡೆಯುವ ಸಮಯಕ್ಕೆ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಕೂಡ ಸೆಣಸಾಡಲಿವೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 171 ರನ್‌ಗಳ ಅಂತರದಿಂದ ಗೆದ್ದರೆ ಮಾತ್ರ ಪ್ಲೇ ಆಫ್ ಸುತ್ತಿಗೆ ಅರ್ಹತೆಯನ್ನು ಪಡೆದುಕೊಳ್ಳಲಿದೆ ಇಲ್ಲದೇ ಇದ್ದರೆ ಪ್ಲೇ ಆಫ್ ಸುತ್ತಿನ ರೇಸ್‌ನಿಂದ ಹೊರಬೀಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications