
14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಾಲ್ಗೊಳ್ಳಲು ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಸಜ್ಜಾಗಿದೆ. ಕಳೆದ ಬಾರಿ ಪ್ಲೇ ಆಫ್ ಹಂತಕ್ಕೇರಿ ಹೊರ ಬಿದ್ದ ಕೊಹ್ಲಿ ಪಡೆ ಈ ಬಾರಿಯ ಟೂರ್ನಿಯಲ್ಲಿ ಮತ್ತೆರಡು ಹೆಜ್ಜೆ ಮುಂದಿಟ್ಟು ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ. ಆದರೆ ಐಪಿಎಲ್ ಇತಿಹಾಸವನ್ನು ನೋಡಿದರೆ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡದ ಪ್ರದರ್ಶನ ಮಾತ್ರ ಕಳವಳಕಾರಿಯಾಗಿದೆ.
ಕಳೆದ 13 ಆವೃತ್ತಿಗಳಲ್ಲಿ ಆರ್‌ಸಿಬಿ 3 ಬಾರಿ ಉದ್ಘಾಟನಾ ಪಂದ್ಯದಲ್ಲಿ ಪಾಲ್ಗೊಂಡಿದೆ. ಆದರೆ ಈ ಮೂರು ಬಾರಿಯೂ ಆರ್‌ಸಿಬಿ ತಂಡಕ್ಕೆ ಗೆಲುವು ಸಾಧ್ಯವಾಗಿಯೇ ಇಲ್ಲ. ಈಗ 4ನೇ ಬಾರಿ ಆರ್‌ಸಿಬಿ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಈ ಬಾರಿ ಈ ಸೋಲಿನ ಸರಪಳಿಯನ್ನು ಮುರಿಯುತ್ತಾ ಎಂಬುದು ಪ್ರಶ್ನೆಯಾಗಿದೆ.
2008ರಲ್ಲಿ ಐಪಿಎಲ್ ಉದ್ಘಾಟನಾ ಟೂರ್ನಿಯ ಆರಂಭಿಕ ಪಂದ್ಯದಲ್ಲಿಯೇ ಆರ್‌ಸಿಬಿ ತಂಡ ಆಡುವ ಅದೃಷ್ಟವನ್ನು ಗಳಿಸಿಕೊಂಡಿತ್ತು. ಆದರೆ ಆ ಪಂದ್ಯ ಆರ್‌ಸಿಬಿ ಪಾಲಿಗೆ ಸ್ಮರಣೀಯವಾಗಿರಲಿಲ್ಲ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಅತ್ಯಂತ ಹೀನಾಯವಾಗಿ ಸೋಲು ಕಂಡಿತ್ತು. ಮೆಕಲಮ್ ಬಾರಿಸಿದ ಬಿರುಗಾಳಿಯಂಥ ಶತಕದ ನೆರವಿನಿಂದ ಕೆಕೆಆರ್ ತಂಡ 3 ವಿಕೆಟ್ ಕಳೆದುಕೊಂಡು 222 ರನ್‌ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಆರ್‌ಸಿಬಿ ಕೇವಲ 82 ರನ್‌ಗಳಿಗೆ ಆಲೌಟ್ ಆಗಿತ್ತು.
ಬಳಿಕ ಬರೊಬ್ಬರಿ 9 ವರ್ಷದ ನಂತರ ಆರ್‌ಸಿಬಿ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿತ್ತು. ಈ ಬಾರಿ ಆರ್‌ಸಿಬಿಗೆ ಎದುರಾಳಿಯಾಗಿದ್ದ ತಂಡ ಸನ್‌ರೈರರ್ಸ್ ಹೈದರಾಬಾದ್. ಈ ಪಂದ್ಯವನ್ನೂ ಆರ್‌ಸಿಬಿ ದೊಡ್ಡ ಅಂತರದಿಂದಲೇ ಕಳೆದುಕೊಂಡಿತ್ತು. ಮೊದಲಿಗೆ ಬ್ಯಾಟಿಂಗ್ ಮಾಡಿದ ಎಸ್‌ಆರ್‌ಹೆಚ್ ತಂಡ 207 ರನ್‌ಗಳನ್ನು ಗಳಿಸಿತ್ತು. ಇದನ್ನು ಬೆನ್ನಟ್ಟಿದ ಆರ್‌ಸಿಬಿ 172 ರನ್‌ಗಳಿಗೆ ಆಲೌಟ್ ಆಗಿ ಶರಣಾಗಿತ್ತು.
ಆರ್‌ಸಿಬಿ ಮೂರನೇ ಬಾರಿಗೆ 2019ರ ಐಪಿಎಲ್ ಆವೃತ್ತಿಯಲ್ಲಿ ಉದ್ಘಾಟನಾ ಪಂದ್ಯದಲ್ಲಿ ಆಡಿತ್ತು. ಈ ಬಾರಿ ಆರ್‌ಸಿಬಿಗೆ ಎದುರಾಳಿಗಿದ್ದ ತಂಡ ಚೆನ್ನೈ ಸೂಪರ್ ಕಿಂಗ್ಸ್. ಈ ಪಂದ್ಯದಲ್ಲಿ ಆರ್‌ಸಿಬಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿ ಎದುರಾಳಿ ಸಿಎಸ್‌ಕೆಗೆ ಕೇವಲ 71 ರನ್‌ಗಳ ಗುರಿಯನ್ನು ನೀಡಿತ್ತು. ಇದನ್ನು 14 ಎಸೆತಗಳು ಉಳಿದಿರುವಂತೆಯೇ ಕೇವಲ 3 ವಿಕೆಟ್ ಕಳೆದುಕೊಂಡು ಸಿಎಸ್‌ಕೆ ಗೆದ್ದು ಬೀಗಿತ್ತು. ಈ ಮೂಲಕ ಮೂರನೇ ಬಾರಿಗೆ ಆರ್‌ಸಿಬಿ ಉದ್ಘಾಟನಾ ಪಂದ್ಯದಲ್ಲಿ ಸೋಲು ಕಂಡಿತು.