
ಆರ್‌ಸಿಬಿ ಪಾಲಿಗೆ ವಿಲನ್ ಆದ ಸುನಿಲ್ ನರೈನ್
ಸುನಿಲ್ ನರೈನ್ ಆಲ್ ರೌಂಡರ್ ಪ್ರದರ್ಶನದಿಂದ ಕೆಕೆಆರ್ ವಿರುದ್ಧ ಆರ್‌ಸಿಬಿ ಸೋಲನುಭವಿಸಿದೆ. ವೆಸ್ಟ್ ಇಂಡೀಸ್‌ನ ಅನುಭವಿ ಆಲ್ ರೌಂಡರ್ ನರೈನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್‌ನಲ್ಲಿ 4 ಓವರ್ ಎಸೆದು 21 ರನ್ ನೀಡಿ 4 ವಿಕೆಟ್ ಪಡೆದರು. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ಶ್ರೀಕರ್ ಭರತ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಎಬಿ ಡಿ ವಿಲಿಯರ್ಸ್ ವಿಕೆಟ್‌ಗಳು ನರೈನ್‌ಗೆ ಲಭಿಸಿತು. ಇದೇ ಆರ್‌ಸಿಬಿ ಹಿನ್ನಡೆಗೆ ಕಾರಣವಾಗಿದ್ದು. ಅಷ್ಟೇ ಅಲ್ಲ, ಕೆಕೆಆರ್ ಇನ್ನಿಂಗ್ಸ್ ವೇಳೆ ಡೇನಿಯಲ್ ಕ್ರಿಸ್ಚಿಯನ್ ಅವರ 12ನೇ ಓವರ್‌ನಲ್ಲಿ ನರೈನ್ ಮೂರು ಸಿಕ್ಸರ್‌ಗಳನ್ನು ಕೂಡ ಬಾರಿಸಿದರು. ಆರ್‌ಸಿಬಿ ಬಹುತೇಕ ಪಂದ್ಯ ಕಳೆದುಕೊಂಡ ಸಂದರ್ಭಗಳಿವು. ಕೇವಲ 15 ಎಸೆತಗಳಲ್ಲಿ ನರೈನ್ 26 ರನ್ ನೀಡಿದ್ದರು. ಇದರಲ್ಲಿ ಮೂರು ಸಿಕ್ಸರ್ ಸೇರಿತ್ತು. ಆರ್‌ಸಿಬಿ ಪಂದ್ಯ ಗೆಲ್ಲುವ ಆಸೆ ನೆಲಕ್ಕುರುಳಿದ್ದು ಇಲ್ಲೆ. ನರೈನ್ ಕೆಕೆಆರ್ ಪಾಲಿಗೆ ಹೀರೋ ಅನ್ನಿಸಿದರೆ, ಆರ್‌ಸಿಬಿ ಪಾಲಿಗೆ ವಿಲನ್ ಎನ್ನಿಸಿದರು.

ಆರ್‌ಸಿಬಿ vs ಕೆಕೆಆರ್ ಸ್ಕೋರ್ ಮಾಹಿತಿ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿರಾಟ್ ಕೊಹ್ಲಿ 39, ದೇವದತ್ ಪಡಿಕ್ಕಲ್ 21, ಶ್ರೀಕರ್ ಭಾರತ್ 9, ಗ್ಲೆನ್ ಮ್ಯಾಕ್ಸ್‌ವೆಲ್ 15, ಎಬಿ ಡಿವಿಲಿಯರ್ಸ್ 11, ಡೇನಿಯಲ್ ಕ್ರಿಶ್ಚಿಯನ್ 9, ಶಹಬಾಜ್ ಅಹ್ಮದ್ 13, ಹರ್ಷಲ್ ಪಟೇಲ್ 8 ರನ್‌ನೊಂದಿಗೆ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದು 138 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್, ಶುಬ್ಮನ್ ಗಿಲ್ 29, ವೆಂಕಟೇಶ್ ಅಯ್ಯರ್ 26, ನಿತೀಶ್ ರಾಣಾ 23, ರಾಹುಲ್ ತ್ರಿಪಾಠಿ 6, ಇಯೋನ್ ಮಾರ್ಗನ್ 5, ದಿನೇಶ್ ಕಾರ್ತಿಕ್ 10, ಶಕೀಬ್ ಅಲ್ ಹಸನ್ 9, ಸುನಿಲ್ ನರೈನ್ 26 ರನ್‌ನೊಂದಿಗೆ 19.4 ಓವರ್‌ಗೆ 6 ವಿಕೆಟ್ ಕಳೆದು 139 ರನ್ ಗಳಿಸಿ ಗೆಲುವು ಸಂಭ್ರಮಾಚರಿಸಿತು. ಇದು ವಿರಾಟ್ ಕೊಹ್ಲಿ ನಾಯಕರಾಗಿ ಆಡಿದ ಕೊನೇ ಪಂದ್ಯವಾಗಿದ್ದರಿಂದ ಆರ್‌ಸಿಬಿ ಅಭಿಮಾನಿಗಳು ನಿರಾಸೆ ಅನುಭವಿಸುವಂತಾಗಿದೆ.

ಆರ್‌ಸಿಬಿ ನಾಯಕರಾಗಿ ವಿರಾಟ್ ಕೊಹ್ಲಿ ಅಂಕಿ-ಅಂಶಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕರಾಗಿ ವಿರಾಟ್ ಕೊಹ್ಲಿ ಉತ್ತಮ ಅಂಕಿ-ಅಂಶಗಳನ್ನು ಹೊಂದಿಲ್ಲ. ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಆಡಿದ ಪಂದ್ಯಗಳಲ್ಲಿ ಹೆಚ್ಚಿನ ಪಂದ್ಯಗಳನ್ನು ಸೋತಿದೆ. ಹಾಗಂತ ಆರ್‌ಸಿಬಿ ಸೋಲಿಗೆ ಬರೀ ಕೊಹ್ಲಿಯನ್ನು ಗುರಿ ಮಾಡುವುದು ಸರಿಯಲ್ಲ. ಯಾಕೆಂದರೆ ಕ್ರಿಕೆಟ್ ಒಂದು ತಂಡ ಗೇಮ್ ಆಗಿರುವುದರಿಂದ ತಂಡವೊಂದರ ಸೋಲು-ಗೆಲುವಿಗೆ ತಂಡದ ಎಲ್ಲಾ ಆಟಗಾರರೂ ಕಾರಣವೇ ಹೊರತು, ತಂಡದ ಸೋಲು-ಗೆಲುವಿಗೆ ಒಬ್ಬನೇ ಆಟಗಾರ ಕಾರಣ ಎನ್ನಲಾಗೋಲ್ಲ. ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿಯ ಕುತೂಹಲಕಾರಿ ಅಂಕಿ-ಅಂಶಗಳು ಕೆಳಗಿವೆ.
* ಐಪಿಎಲ್‌ನಲ್ಲಿ ಆರ್‌ಸಿಬಿಗೆ ಕೊಹ್ಲಿ ನಾಯಕತ್ವ ವಹಿಸಿದ ಪಂದ್ಯಗಳು 140
* ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಗೆದ್ದಿರುವ ಪಂದ್ಯಗಳು 66
* ವಿರಾಟ್ ನಾಯಕತ್ವದಲ್ಲಿ ಆರ್‌ಸಿಬಿ ಸೋತಿರುವ ಪಂದ್ಯಗಳು 70
* ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿಗೆ ಫಲಿತಾಂಶವಿಲ್ಲ ಎಂದು ಘೋಷಿಸಲ್ಪಟ್ಟ ಪಂದ್ಯಗಳು 4
* ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಒಮ್ಮೆ ಫೈನಲ್‌ಗೆ ಪ್ರವೇಶಿಸಿತ್ತು (2016ರಲ್ಲಿ)
* ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಕೆಳ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದು 2 ಬಾರಿ (2017 & 2019)


Click it and Unblock the Notifications
