ಐಪಿಎಲ್ 2023ಕ್ಕೂ ಮುನ್ನ ಚಾಂಪಿಯನ್ಸ್ ಗುಜರಾತ್ ಈ ಮೂವರನ್ನು ತಂಡದಿಂದ ಹೊರಹಾಕಲಿದೆ!

ಗುಜರಾತ್ ಟೈಟನ್ಸ್, ತಾನಾಡಿದ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಇತಿಹಾಸ ಬರೆದ ತಂಡ. ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಜತೆಗೆ ಪದಾರ್ಪಣೆ ಮಾಡಿದ ಗುಜರಾತ್ ಟೈಟನ್ಸ್ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಗೆಲುವಿನ ಸರದಾರನಾಗಿ ಮೆರೆದು ಚಾಂಪಿಯನ್ ಆಗಿ ಹೊರಹೊಮ್ಮಿತು.
ಇನ್ನು ಗುಜರಾತ್ ಟೈಟನ್ಸ್ ನೂತನ ತಂಡವೆಂದು ಘೋಷಣೆಯಾದಾಗ, ಅದರಲ್ಲಿಯೂ ಹಾರ್ದಿಕ್ ಪಾಂಡ್ಯ ಈ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಎಂಬ ವಿಷಯ ಹೊರಬಿದ್ದಾಗ ಬಹುತೇಕ ಮಂದಿ ಈ ತಂಡ ಟೂರ್ನಿಯಲ್ಲಿ ಹೀನಾಯ ಸೋಲು ಕಂಡು ಹೊರಬೀಳಲಿದೆ, ಬೌಲಿಂಗ್ ಮಾಡಲು ಸಮರ್ಥನಲ್ಲದ ಆಲ್ ರೌಂಡರ್ ಮುನ್ನಡೆಸಲಿರುವ ಈ ತಂಡ ಯಾವ ರೀತಿಯ ಪ್ರದರ್ಶನ ನೀಡುತ್ತದೆಯೋ ಏನೋ ಎಂದು ಹಲವಾರು ಟೀಕಾಕಾರರು ಕಟು ಟೀಕೆ ಮಾಡಿದ್ದರು.
ಆದರೆ ಈ ಟೀಕೆಗಳಿಗೆಲ್ಲಾ ಉತ್ತರ ನೀಡಿದ ಗುಜರಾತ್ ಟೈಟನ್ಸ್ ತಂಡದ ಪರಿಪೂರ್ಣ ಪ್ರದರ್ಶನದ ನೆರವಿನಿಂದ ಇಂದು ಚಾಂಪಿಯನ್ಸ್ ಆಗಿ ನಿಂತಿದೆ. ಹಾರ್ದಿಕ್ ಪಾಂಡ್ಯ ಗುಣಮಟ್ಟದ ನಾಯಕತ್ವ, ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದ ಅಮೋಘ ಪ್ರದರ್ಶನ ತಂಡದ ಯಶಸ್ಸಿಗೆ ಪ್ರಮುಖ ಕಾರಣವಾಗಿವೆ. ಆದರೆ, ಈ ತಂಡದಲ್ಲಿಯೂ ಕಳಪೆ ಪ್ರದರ್ಶನ ನೀಡಿದ ಮತ್ತು ಅವಕಾಶ ಪಡೆಯದೇ ಉಳಿದ ಆಟಗಾರರು ಸಹ ಇದ್ದಾರೆ. ಇಂತಹ ಆಟಗಾರರು ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ತಂಡದ ಪರ ಕಣಕ್ಕಿಳಿಯುವ ಸಾಧ್ಯತೆಗಳು ತೀರಾ ಕಡಿಮೆ ಇದ್ದು, ಮುಂಬರುವ ಮಿನಿ ಹರಾಜಿಗೂ ಮುನ್ನ ತಂಡದಿಂದ ಸ್ಥಾನ ಕಳೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅಂತಹ ಮೂವರು ಆಟಗಾರರ ಪಟ್ಟಿ ಕೆಳಕಂಡಂತಿದೆ.

1. ವಿಜಯ್ ಶಂಕರ್
ಟೀಮ್ ಇಂಡಿಯಾದಿಂದ ಹೊರ ಬಿದ್ದ ನಂತರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಲಯ ಕಳೆದುಕೊಂಡಿರುವ ಆಲ್ ರೌಂಡರ್ ವಿಜಯ್ ಶಂಕರ್ 2020ರ ಐಪಿಎಲ್ ಆವೃತ್ತಿಯಲ್ಲಿ ಮಕಾಡೆ ಮಲಗಿದ್ದರು. ಆದರೆ ನಂತರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಮಿಳು ನಾಡಿನ ಪರ ಈತ ನೀಡಿದ ಉತ್ತಮ ಪ್ರದರ್ಶನ ಗುಜರಾತ್ ಟೈಟನ್ಸ್ ತಂಡದಲ್ಲಿ ಈ ಬಾರಿ ಅವಕಾಶವನ್ನು ಗಿಟ್ಟಿಸಿಕೊಟ್ಟಿತ್ತು. ಆದರೆ ಟೂರ್ನಿಯಲ್ಲಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಯುವ ಅವಕಾಶ ಪಡೆದ ಶಂಕರ್ 19 ರನ್ ಗಳಿಸಿ ವಿಫಲರಾಗಿದ್ದಾರೆ. ಹೀಗಾಗಿ ವಿಜಯ್ ಶಂಕರ್ ಮುಂದಿನ ಮಿನಿ ಹರಾಜಿಗೂ ಮುನ್ನ ತಂಡದಿಂದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

2. ಜಯಂತ್ ಯಾದವ್
2015ರಿಂದ ಐಪಿಎಲ್ ಆಡುತ್ತಿರುವ ಜಯಂತ್ ಯಾದವ್ ಕೇವಲ 19 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು ಸಿಕ್ಕ ಅವಕಾಶಗಳಿಗೆ ತಕ್ಕಂಥ ವಿಕೆಟ್ ಕಬಳಿಸಿದ್ದಾರೆ ಹಾಗೂ 8ಕ್ಕಿಂತ ಕಡಿಮೆ ಎಕಾನಮಿ ದರವನ್ನು ಹೊಂದಿದ್ದಾರೆ. ಹೀಗೆ ಸಿಕ್ಕ ಕಡಿಮೆ ಅವಕಾಶದಲ್ಲಿಯೂ ಚೆನ್ನಾಗಿಯೇ ಪ್ರದರ್ಶನ ನೀಡಿರುವ ಜಯಂತ್ ಯಾದವ್ ಅವರನ್ನು ಈ ಬಾರಿ ಗುಜರಾತ್ ಟೈಟನ್ಸ್ 1.70 ಕೋಟಿಗೆ ಖರೀದಿಸಿತಾದರೂ ತಂಡದಲ್ಲಿ ಪ್ರಮುಖ ಸ್ಪಿನ್ನರ್ ರಶೀದ್ ಖಾನ್ ಇದ್ದ ಕಾರಣ ಇವರಿಗೆ ಕಣಕ್ಕಿಳಿಯುವ ಅವಕಾಶವೇ ಸಿಗಲಿಲ್ಲ. ಆದರೆ ಟೂರ್ನಿಯ ಅಂತ್ಯದಲ್ಲಿ ಎಡಗೈ ಸ್ಪಿನ್ನರ್ ಸಾಯಿ ಕಿಶೋರ್ ಅವಕಾಶ ಗಿಟ್ಟಿಸಿಕೊಂಡು ಉತ್ತಮ ಪ್ರದರ್ಶನ ನೀಡಿದ ಕಾರಣ ಜಯಂತ್ ಯಾದವ್ ಮುಂಬರುವ ಐಪಿಎಲ್ ಆವೃತ್ತಿಗೂ ಮುನ್ನ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ತಂಡದಿಂದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳು ದೊಡ್ಡ ಮಟ್ಟದಲ್ಲಿವೆ.

3. ಡೊಮಿನಿಕ್ ಡ್ರೇಕ್ಸ್
ವೆಸ್ಟ್ ಇಂಡೀಸ್ ತಂಡದ ಪ್ರತಿಭಾನ್ವಿತ ಆಲ್ ರೌಂಡರ್ ಡೊಮಿನಿಕ್ ಡ್ರೇಕ್ಸ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಪಡೆಯಲಿಲ್ಲ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಈತನಿಗೆ ಗುಜರಾತ್ ಟೈಟಾನ್ಸ್ ತಂಡದ ಆಡುವ ಬಳಗದಲ್ಲಿ ಅವಕಾಶ ಸಿಗದೇ ಇರಲು ಪ್ರಮುಖ ಕಾರಣ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಆಲ್ ರೌಂಡರ್ ಜವಾಬ್ದಾರಿಯನ್ನು ಪರಿಪೂರ್ಣವಾಗಿ ನಿರ್ವಹಿಸಿದ್ದು. ಹೀಗಾಗಿ ಡೊಮಿನಿಕ್ ಡ್ರೇಕ್ಸ್ ಅಗತ್ಯತೆ ತಂಡಕ್ಕೆ ತೀರಾ ಕಡಿಮೆಯಿದ್ದು, ಮುಂಬರುವ ಮಿನಿ ಹರಾಜಿನಲ್ಲಿ ತಂಡದಿಂದ ಹೊರ ಬೀಳುವ ಸಾಧ್ಯತೆ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications