
ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಸೆಣಸಾಟ ನಡೆಸಲಿದ್ದು, ಪಂದ್ಯ ಮುಂಬೈನ ಬ್ರಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಟೂರ್ನಿಯಲ್ಲಿ ಯಶಸ್ವಿ ಪ್ರದರ್ಶನ ನೀಡಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಈಗಾಗಲೇ ತನ್ನ ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಂಡಿದ್ದರೆ, ಐದು ಬಾರಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಸಾಲು ಸಾಲು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿ ಪ್ಲೇಆಫ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲವಾದ ಪ್ರಥಮ ತಂಡ ಎನಿಸಿಕೊಂಡಿದೆ.
ಇನ್ನು ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂಬ ಲೆಕ್ಕಾಚಾರಗಳಲ್ಲಿ ಕೆಲ ಕ್ರಿಕೆಟ್ ಪ್ರೇಮಿಗಳು ತೊಡಗಿಕೊಂಡಿದ್ದರೆ, ಇನ್ನೂ ಕೆಲ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿದ್ದು, ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬಹುದಾದ ಆಟಗಾರರನ್ನು ಆಯ್ಕೆ ಮಾಡುವಲ್ಲಿ ನಿರತರಾಗಿದ್ದಾರೆ. ಹೀಗೆ ಡ್ರೀಂ ಟೀಮ್ ರಚಿಸುತ್ತಿರುವ ಕ್ರಿಕೆಟ್ ಪ್ರೇಮಿಗಳು ಪಂದ್ಯದಲ್ಲಿ ಹೆಚ್ಚಿನ ಫ್ಯಾಂಟಸಿ ಅಂಕಗಳನ್ನು ಗಳಿಸುವಲ್ಲಿ ವಿಫಲರಾಗಬಹುದಾದ ಈ ಕೆಳಕಂಡ ಮೂವರು ಆಟಗಾರರನ್ನು ಆಯ್ಕೆ ಮಾಡದೇ ಇರುವುದು ಉತ್ತಮ ಆಯ್ಕೆ ಎನ್ನಬಹುದು.
1. ಕೀರನ್ ಪೊಲಾರ್ಡ್
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೂ ಮುಂಬೈ ಇಂಡಿಯನ್ಸ್ ತಂಡದ ಬೆನ್ನೆಲುಬಾಗಿದ್ದ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಕೀರನ್ ಪೊಲಾರ್ಡ್ ಈ ಬಾರಿ ಅಕ್ಷರಶಃ ನೆಲಕಚ್ಚಿದ್ದಾರೆ. ಟೂರ್ನಿಯಲ್ಲಿ ಇಲ್ಲಿಯವರೆಗೂ 30 ರನ್‌ಗಳ ಗಡಿ ದಾಟುವಲ್ಲಿ ವಿಫಲರಾಗಿರುವ ಕೀರನ್ ಪೊಲಾರ್ಡ್ ಒಟ್ಟು 3 ವಿಕೆಟ್ ಪಡೆದು ಬೌಲಿಂಗ್‌ನಲ್ಲಿಯೂ ಸಹ ವಿಫಲರಾಗಿದ್ದಾರೆ. ಹೀಗಾಗಿ ಕೀರನ್ ಪೊಲಾರ್ಡ್ ಅವರನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಉತ್ತಮ ಎನ್ನಬಹುದು.
2. ಟಿಮ್ ಡೇವಿಡ್
ಸಿಂಗಾಪುರದ ಕ್ರಿಕೆಟಿಗ ಟಿಮ್ ಡೇವಿಡ್ ಅವರನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಇತರೆ ಐದು ಫ್ರಾಂಚೈಸಿಗಳ ಜೊತೆ ಜಿದ್ದಾಜಿದ್ದಿ ನಡೆಸಿ ಬರೋಬ್ಬರಿ 8.25 ಕೋಟಿಗೆ ಖರೀದಿಸಿದ್ದ ಮುಂಬೈ ಇಂಡಿಯನ್ಸ್ ಈ ಸ್ಪೋಟಕ ಆಟಗಾರನನ್ನು ಸರಿಯಾದ ರೀತಿ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ. ಇನ್ನು ಟೂರ್ನಿಯಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿರುವ ಟಿಮ್ ಡೇವಿಡ್ 33 ರನ್ ಗಳಿಸುವಲ್ಲಿ ಮಾತ್ರ ಶಕ್ತರಾಗಿದ್ದಾರೆ. ಹೀಗಾಗಿ ಟಿಮ್ ಡೇವಿಡ್ ಅವರನ್ನು ಡ್ರೀಮ್ ತಂಡದಿಂದ ಹೊರಗಿಡುವುದು ಉತ್ತಮ ಎನ್ನಬಹುದು.
3. ಪ್ರದೀಪ್ ಸಾಂಗ್ವಾನ್
ನಾಲ್ಕು ವರ್ಷಗಳ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸಿರುವ ಪ್ರದೀಪ್ ಸಾಂಗ್ವಾನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ಮೂಲಕ ಗುಜರಾತ್ ಟೈಟನ್ಸ್ ತಂಡಕ್ಕೆ ಪದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ಕೇವಲ 19 ರನ್ ನೀಡಿ 2 ವಿಕೆಟ್ ಪಡೆದಿದ್ದ ಪ್ರದೀಪ್ ಸಾಂಗ್ವಾನ್ ಇದೇ ಪ್ರದರ್ಶನವನ್ನು ನಂತರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ ಮುಂದುವರೆಸುವಲ್ಲಿ ವಿಫಲರಾದರು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 2 ಓವರ್ ಬೌಲಿಂಗ್ ಮಾಡುವ ಅವಕಾಶವನ್ನು ಮಾತ್ರ ಪಡೆದ ಸಾಂಗ್ವಾನ್ 23 ರನ್ ನೀಡಿ ಯಾವುದೇ ವಿಕೆಟ್ ಪಡೆಯದೇ ದುಬಾರಿಯಾದರು. ಹೀಗೆ ಟೂರ್ನಿಯಲ್ಲಿ ಹೆಚ್ಚು ಅವಕಾಶ ಪಡೆಯದ ಪ್ರದೀಪ್ ಸಾಂಗ್ವಾನ್ ಅವರನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಸೂಕ್ತ.