ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ: ಮತ್ತೆ ಟೀಮ್ ಇಂಡಿಯಾ ಸೇರುವ ಅವಕಾಶ ಕೈತಪ್ಪಿಸಿಕೊಂಡ 4 ಆಟಗಾರರು!

ಟಿ ಟ್ವೆಂಟಿ ವಿಶ್ವಕಪ್ ಮೊದಲ ಆವೃತ್ತಿಯಲ್ಲಿಯೇ ಭಾರತ ಟ್ರೋಫಿ ಎತ್ತಿಹಿಡಿದ ಕಾರಣ ಭಾರತದಲ್ಲಿ ಟಿ ಟ್ವೆಂಟಿ ಕ್ರಿಕೆಟ್ ಮೇಲೆ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಕೊಂಡಿತು. ಹೀಗೆ ಭಾರತ ಟಿ ಟ್ವೆಂಟಿ ತಂಡವನ್ನು ಆಟಗಾರನಾಗಿ ಪ್ರತಿನಿಧಿಸಲು ಆಟಗಾರರ ನಡುವೆ ಪೈಪೋಟಿಯೂ ಹೆಚ್ಚಾಯಿತು. ಹೀಗೆ ಟೀಮ್ ಇಂಡಿಯಾ ಟಿ ಟ್ವೆಂಟಿ ತಂಡದಲ್ಲಿ ಸ್ಥಾನ ಪಡೆದುಕೊಳ್ಳಬೇಕು ಎಂಬ ಆಸೆಯನ್ನು ಹೊಂದಿದ್ದಂತಹ ಯುವ ಕ್ರಿಕೆಟಿಗರಿಗೆ ಆ ಸಂದರ್ಭದಲ್ಲಿ ಸಿಕ್ಕ ವೇದಿಕೆಯೇ ಇಂಡಿಯನ್ ಪ್ರೀಮಿಯರ್ ಲೀಗ್. ಹೌದು, ಭಾರತ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದ ನಂತರದ ವರ್ಷದಿಂದ ಆರಂಭವಾದ ಈ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಮಿಂಚಿ ಬೆಳಕಿಗೆ ಬಂದ ಹಲವಾರು ಯುವ ಕ್ರಿಕೆಟಿಗರು ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ.
ಅದರಲ್ಲಿಯೂ ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ರೀತಿಯ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿದ ನಂತರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡವನ್ನು ಆಟಗಾರರಾಗಿ ಪ್ರತಿನಿಧಿಸುವ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿ ಉಳಿದ ಆಟಗಾರರಿಗಗೂ ಸ್ಪೂರ್ತಿಯಾಗಿದ್ದಾರೆ. ಇನ್ನು ಈ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಕೇವಲ ಯುವ ಕ್ರಿಕೆಟಿಗರಿಗೆ ಮಾತ್ರವಲ್ಲ, ಈ ಹಿಂದೆಯೇ ತಂಡದಲ್ಲಿ ಸ್ಥಾನ ಪಡೆದುಕೊಂಡು ಫಿಟ್‌ನೆಸ್ ಸಮಸ್ಯೆ ಹಾಗೂ ಕಳಪೆ ಪ್ರದರ್ಶನದಿಂದ ಹೊರಬಿದ್ದ ಆಟಗಾರರಿಗೂ ಸಹ ಮತ್ತೆ ತಂಡ ಸೇರಲು ಅವಕಾಶ ಕಲ್ಪಿಸಿದ ವೇದಿಕೆಯಾಗಿದೆ.
ಹಾಗಾಗಿಯೇ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಸಹ ಮಿಂಚಿ ಭಾರತ ಟಿ ಟ್ವೆಂಟಿ ತಂಡದಲ್ಲಿ ಮತ್ತೆ ಸ್ಥಾನ ಗಿಟ್ಟಿಸಿಕೊಳ್ಳುವತ್ತ ಹಲವು ಕ್ರಿಕೆಟಿಗರು ಯತ್ನಿಸುತ್ತಿದ್ದು, ಈ ವರ್ಷ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯೂ ಇರುವುದರಿಂದ ಪೈಪೋಟಿ ತುಸು ದೊಡ್ಡಮಟ್ಟದಲ್ಲೇ ಇದೆ. ಇನ್ನು ತಂಡದಿಂದ ಹೊರಬಿದ್ದಿರುವ ಹಲವು ಆಟಗಾರರು ಉತ್ತುಮ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆದಿದ್ದರೆ, ಇನ್ನೂ ಕೆಲ ಆಟಗಾರರು ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಅವಕಾಶವನ್ನು ಬಹುತೇಕ ಕೈತಪ್ಪಿಸಿಕೊಂಡಿದ್ದಾರೆ. ಹೀಗೆ ಈ ಬಾರಿಯ ಐಪಿಎಲ್‌ನಲ್ಲಿ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಾಗದೇ ಭಾರತ ಟಿ ಟ್ವೆಂಟಿ ತಂಡಕ್ಕೆ ಮರಳುವ ಅವಕಾಶವನ್ನು ಕೈತಪ್ಪಿಸಿಕೊಂಡ ನಾಲ್ವರು ಭಾರತೀಯ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ಓದಿ..

1. ಮನೀಶ್ ಪಾಂಡೆ
2009ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಶತಕ ಬಾರಿಸಿ ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಭಾರತೀಯ ಕ್ರಿಕೆಟಿಗ ಎಂಬ ದಾಖಲೆಯನ್ನು ನಿರ್ಮಿಸಿದ್ದ ಮನೀಶ್ ಪಾಂಡೆ ಟೀಮ್ ಇಂಡಿಯಾದ ಮುಂದಿನ ದೊಡ್ಡ ಆಟಗಾರನಾಗಲಿದ್ದಾರೆ ಎಂಬ ಭರವಸೆಯನ್ನು ಹುಟ್ಟುಹಾಕಿದ್ದರು. ಆದರೆ, ಈ ಶತಕ ಬಾರಿಸಿದ ಆರು ವರ್ಷಗಳ ಬಳಿಕ ಭಾರತ ತಂಡದ ಕ್ಯಾಪ್ ತೊಡುವ ಅವಕಾಶ ಪಡೆದ ಮನೀಶ್ ಪಾಂಡೆ ಈಗಾಗಲೇ ಹಲವು ಅವಕಾಶ ಪಡೆದಿದ್ದರೂ ಸಹ ಪ್ರದರ್ಶನದಲ್ಲಿ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಮನೀಶ್ ಪಾಂಡೆ ತಂಡದಿಂದ ಹೊರಬಿದ್ದಿದ್ದು, ಸದ್ಯ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಮಿಂಚಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳುವಲ್ಲಿಯೂ ವಿಫಲರಾಗಿ ಮತ್ತೆ ತಂಡ ಸೇರಲು ಇದ್ದ ಉತ್ತಮ ಅವಕಾಶವನ್ನು ಕೈತಪ್ಪಿಸಿಕೊಂಡಿದ್ದಾರೆ. ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದಿರುವ ಮನೀಶ್ ಪಾಂಡೆ 13.2ರ ಸರಾಸರಿಯಲ್ಲಿ 5 ಪಂದ್ಯಕ್ಕೆ 66 ರನ್ ಕಲೆಹಾಕಿದ್ದಾರೆ.

2. ವರುಣ್ ಚಕ್ರವರ್ತಿ
ತನ್ನ ಮೂವತ್ತನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಪಡೆದ ವರುಣ್ ಚಕ್ರವರ್ತಿ ಆರಂಭದಲ್ಲಿಯೇ ಗಾಯದ ಸಮಸ್ಯೆಗೆ ಒಳಗಾಗಿ ಕೆಲವೊಂದು ಬಾರಿ ಫಿಟ್‌ನೆಸ್ ಪರೀಕ್ಷೆ ತೇರ್ಗಡೆಯಾಗುವುದರಲ್ಲಿಯೂ ವಿಫಲರಾಗಿದ್ದರು. ಟೀಮ್ ಇಂಡಿಯಾ ಪರ 6 ಪಂದ್ಯಗಳನ್ನಾಡಿ 2 ವಿಕೆಟ್ ಪಡೆದಿರುವ ವರುಣ್ ಚಕ್ರವರ್ತಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿ ಕೇವಲ 4 ವಿಕೆಟ್ ಪಡೆದು ಹೆಚ್ಚಿನ ರನ್‌ಗಳನ್ನೂ ಸಹ ಬಿಟ್ಟುಕೊಟ್ಟಿದ್ದಾರೆ. ಹೀಗೆ ಕಳಪೆ ಪ್ರದರ್ಶನ ನೀಡಿ ಮಂಕಾಗಿರುವ ವರುಣ್ ಚಕ್ರವರ್ತಿಗೆ ಮತ್ತೊಮ್ಮೆ ಟೀಮ್ ಇಂಡಿಯಾ ಪ್ರವೇಶ ಈಗ ಸಿಗುವುದು ಅನುಮಾನ ಮೂಡಿಸಿದೆ.

3. ಖಲೀಲ್ ಅಹ್ಮದ್
ಖಲೀಲ್ ಅಹ್ಮದ್ ಟೀಮ್ ಇಂಡಿಯಾ ಪರ ಕೊನೆಯದಾಗಿ ಕಣಕ್ಕಿಳಿದದ್ದು 2019ರಲ್ಲಿ. 2018ರಿಂದ 2019ರವರೆಗೆ ಟೀಮ್ ಇಂಡಿಯಾವನ್ನು 14 ಟಿ ಟ್ವೆಂಟಿ ಹಾಗೂ 9 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿರುವ ಖಲೀಲ್ ಅಹ್ಮದ್ 13 ಟಿ ಟ್ವೆಂಟಿ ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದು 6 ಪಂದ್ಯಗಳನ್ನಾಡಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ, ಹಲವಾರು ವೇಗಿಗಳು ಖಲೀಲ್ ಅಹ್ಮದ್ ಅವರಿಗಿಂತ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದು ಖಲೀಲ್ ಮತ್ತೆ ಟೀಮ್ ಇಂಡಿಯಾ ಪ್ರವೇಶಿಸುವುದಕ್ಕೆ ಅಡ್ಡಿಯನ್ನುಂಟುಮಾಡುವ ಅಂಶವಾಗಿದೆ ಎನ್ನಬಹುದು. ಪೈಪೋಟಿ ನೀಡುತ್ತಿರುವ ಇತರೆ ವೇಗಿಗಳಿಗಿಂತ ಉತ್ತಮ ಪ್ರದರ್ಶನ ನೀಡುವಲ್ಲಿ ಖಲೀಲ್ ಯಶಸ್ವಿಯಾಗದೇ ಇದ್ದು ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುವುದು ಅನುಮಾನವಾಗಿದೆ.

4. ಕೃನಾಲ್ ಪಾಂಡ್ಯ
ಟೀಮ್ ಇಂಡಿಯಾದಲ್ಲಿ ರವೀಂದ್ರ ಜಡೇಜಾಗೆ ಮೊದಲ ಆದ್ಯತೆ ಹಾಗೂ ಸ್ಪಿನ್ ಆಲ್‌ರೌಂಡರ್‌ಗಳಾದ ಅಕ್ಷರ್ ಪಟೇಲ್, ಅಭಿಷೇಕ್ ಶರ್ಮಾ, ರಾಹುಲ್ ತೆವಾಟಿಯಾ, ಶಹಬಾಜ್ ಅಹ್ಮದ್ ಮತ್ತು ವಾಷಿಂಗ್ಟನ್ ಸುಂದರ್ ಟೀಮ್ ಇಂಡಿಯಾ ಪ್ರತಿನಿಧಿಸುವ ರೇಸ್‌ನಲ್ಲಿರುವ ಕಾರಣ ಕೃನಾಲ್ ಪಾಂಡ್ಯಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುವುದನ್ನು ಬಹುತೇಕ ಕೈತಪ್ಪಿಸಬಹುದು. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದಿರುವ ಕೃನಾಲ್ ಪಾಂಡ್ಯ 8 ಪಂದ್ಯಗಳನ್ನಾಡಿ 7 ವಿಕೆಟ್ ಪಡೆದು 124 ರನ್ ಗಳಿಸಿದ್ದಾರೆ. ಹೀಗೆ ಪೈಪೋಟಿ ಇರುವ ಆಟಗಾರರನ್ನು ಮೀರಿಸಿ ಆಯ್ಕೆಗಾರರ ಗಮನ ಸೆಳೆಯುವಂತಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಕೃನಾಲ್ ಪಾಂಡ್ಯ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಅನುಮಾನವೇ ಸರಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications