
ಐಪಿಎಲ್ ಟೂರ್ನಿಯ ಆರಂಭಕ್ಕೆ ಕೆಲವೇ ದಿನಗಳಿರುವಾಗ ಲಕ್ನೋ ಸೂಪರ್‌ಜೈಂಟ್ಸ್ ತಂಡದ ಪ್ರಮುಖ ವೇಗದ ಬೌಲರ್ ಮಾರ್ಕ್ ವುಡ್ ಗಾಯದ ಕಾರಣದಿಂದ ಸಂಪೂರ್ಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಮಾರ್ಕ್ ವುಡ್‌ಗೆ ಬದಲಿ ಆಟಗಾರನ ಹುಡುಕಾಟದಲ್ಲಿದೆ. ಈ ಸಂದರ್ಭದಲ್ಲಿ ಎಲ್‌ಎಸ್‌ಜಿ ಫ್ರಾಂಚೈಸಿ ಬಾಂಗ್ಲಾದೇಶದ ವೇಗದ ಬೌಲರ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶ ಮೂಲದ ವೆಬ್‌ಸೈಟ್ ಕಲೇರ್ ಕಂಥೋ ಈ ಬಗ್ಗೆ ವರದಿ ಮಾಡಿದೆ.
ಬಾಂಗ್ಲಾದೇಶದ ಆಟಗಾರ ತಸ್ಕಿನ್ ಅಹ್ಮದ್ ಲಕ್ನೋ ತಂಡದ ಪಾಲಾಗಲಿರುವ ಆಟಗಾರ ಎಂದು ತಿಳಿದುಬಂದಿದೆ. ಈ ವರದಿಯ ಪ್ರಕಾರ ಎಲ್‌ಎಸ್‌ಜಿ ಫ್ರಾಂಚೈಸಿಯ ಮೆಂಟರ್ ಗೌತಮ್ ಗಂಭೀರ್ ತಸ್ಕಿನ್ ಅಹ್ಮದ್ ಅವರನ್ನು ಸಂಪರ್ಕಿಸಿದ್ದು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮೊಣಕೈ ಗಾಯದ ಕಾರಣದಿಂದಾಗಿ ಮಾರ್ಕ್ ವುಡ್ ಐಪಿಎಲ್ ಟೂರ್ನಿಯಿಂದ ಸಂಪೂರ್ಣ ಹೊರಗುಳಿಯುವುದು ಅನಿವಾರ್ಯವಾಗಿದೆ. ಹೀಗಾಗಿ ಬಾಂಗ್ಲಾದೇಶದ ಬೌಲರ್ ತಸ್ಕಿನ್ ಅಹ್ಮದ್ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಪದಾರ್ಪಣೆ ಮಾಡಲು ಸಿದ್ಧವಾಗಿದ್ದಾರೆ.
ಇಂಗ್ಲೆಂಡ್ ತಮಡದ ವೇಗದ ಬೌಲರ್ ಮಾರ್ಕ್ ವುಡ್ ಕಳೆದ ಫೆಬ್ರವರಿ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಹೊಂದಿದ್ದರು. ಅಂತಿಮವಾಗಿ ಮಾರ್ಕ್ ವುಡ್ ಅವರನ್ನು ಲಕ್ನೋ ಸೂಪರ್‌ಜೈಂಟ್ಸ್ ತಂಡ 7.5 ಕೋಟಿ ನೀಡಿ ಖರೀದಿಸಿತ್ತು. ಆದರೆ ಇಂಗ್ಲೆಂಡ್ ತಂಡದ ಪರವಾಗಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಮಾರ್ಕ್ ವುಡ್ ಮೊಣಕ್ಐ ಗಾಯಕ್ಕೆ ತುತ್ತಾಗಿದ್ದಾರೆ.
ಇನ್ನು ತಸ್ಕಿನ್ ಕೂಡ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾಗಿಯಾಗಿದ್ದು ರಾಷ್ಟ್ರೀಯ ತಂಡದ ಕರ್ತವ್ಯದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಬಾಂಗ್ಲಾದೇಶ 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳಲ್ಲಿ ಭಾಗಿಯಾಗಲಿದೆ. ತಸ್ಕಿನ್ ಈ ಅವಕಾಶವನ್ನು ಒಪ್ಪಿಕೊಂಡರೆ ಐಪಿಎಲ್‌ಗೆ ಭಾಗಿಯಾಗುವ ಹಿನ್ನೆಲೆಯಲ್ಲಿ ಶೀಘ್ರವಾಗಿ ದಕ್ಷಿಣ ಆಫ್ರಿಕಾವನ್ನು ತೊರೆಯಬೇಕಿದೆ. ಅಂದರೆ ಮಾರ್ಚ್ 31ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯಿಂದ ತಸ್ಕಿನ್ ಹೊರಗುಳಿಯುವ ಸಾಧ್ಯತೆಯಿದೆ.
ಲಕ್ನೋ ಸೂಪರ್ ಜೈಂಟ್ಸ್ ಸಂಪೂರ್ಣ ಸ್ಕ್ವಾಡ್: ಕೆಎಲ್ ರಾಹುಲ್, ಮಾರ್ಕಸ್ ಸ್ಟೊಯಿನಿಸ್, ರವಿ ಬಿಷ್ಣೋಯ್, ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಮನೀಶ್ ಪಾಂಡೆ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಅವೇಶ್ ಖಾನ್, ಅಂಕಿತ್ ರಜಪೂತ್, ಕೆ ಗೌತಮ್, ದುಷ್ಮಂತ ಚಮೀರಾ, ಶಹಬಾಜ್ ನದೀಮ್, ಮನನ್ ವೋಹ್ರಾ, ಮೊಹ್ಸಿನ್ ಖಾನ್, ಆಯುಷ್ ಬಡೋನಿ, ಆಯುಷ್ ಬಡೋನಿ, ಶರ್ಮಾ, ಎವಿನ್ ಲೂಯಿಸ್, ಮಯಾಂಕ್ ಯಾದವ್, ಕೈಲ್ ಮೇಯರ್ಸ್.