CSK vs RCB: ಆರ್‌ಸಿಬಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಸಿಎಸ್‌ಕೆ; ನಡೆಯದ ಪ್ರಮುಖರ ಆಟ!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 22ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 23 ರನ್‌ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಗೆಲುವಿನ ಖಾತೆಯನ್ನು ತೆರೆದಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಫಾಫ್ ಡು ಪ್ಲೆಸಿಸ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕ ಆಟಗಾರರಾಗಿ ರಾಬಿನ್ ಉತ್ತಪ್ಪ ಮತ್ತು ರುತುರಾಜ್ ಗಾಯಕ್ವಾಡ್ ಕಣಕ್ಕಿಳಿದರು. ರುತುರಾಜ್ ಗಾಯಕ್ವಾಡ್ 17 ಎಸೆತಗಳಿಗೆ ಔಟ್ ಆದರೆ, ನಂತರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಯಿನ್ ಅಲಿ 3 ರನ್ ಗಳಿಸಿ ರನ್ ಔಟ್ ಆದರು. ಹೀಗೆ ಆಘಾತಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿವಮ್ ದುಬೆ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಜೊತೆ ಸೇರಿ 165 ರನ್‌ಗಳ ಅದ್ಭುತ ಜತೆಯಾಟವನ್ನು ಆಡಿ ಆಸರೆಯಾದರು. ರಾಬಿನ್ ಉತ್ತಪ್ಪ 50 ಎಸೆತಗಳಲ್ಲಿ 88 ರನ್ ಬಾರಿಸಿ ಶತಕ ವಂಚಿತರಾದರು. ನಾಯಕ ರವೀಂದ್ರ ಜಡೇಜಾ 0 ರನ್ ಗಳಿಸಿ ಹಾದಿ ಆದರೆ, ಎಸ್ ಧೋನಿ ಯಾವುದೇ ಎಸೆತ ಎದುರಿಸದೇ ಅಜೇಯರಾಗಿ ಉಳಿದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಅಬ್ಬರಿಸಿದ ಶಿವಮ್ ದುಬೆ 46 ಎಸೆತಗಳಲ್ಲಿ ಅಜೇಯ 95 ರನ್ ಗಳಿಸಿದರು. ಹೀಗೆ ಶಿವಂ ದುಬೆ ಮತ್ತು ರಾಬಿನ್ ಉತ್ತಪ್ಪ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 216 ರನ್ ದಾಖಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 217 ರನ್‌ಗಳ ಗುರಿಯನ್ನು ನೀಡಿತ್ತು.
ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಬೃಹತ್ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6.5 ಓವರ್‌ಗಳಲ್ಲಿ 50 ರನ್‌ಗಳಿಗೆ ತನ್ನ ಮೊದಲ 4 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ನಾಯಕ ಫಾಫ್ ಡು ಪ್ಲೆಸಿಸ್ 8 ರನ್, ಅನುಜ್ ರಾವತ್ 12 ರನ್, ವಿರಾಟ್ ಕೊಹ್ಲಿ 1 ರನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 26 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಈ ಸಂದರ್ಭದಲ್ಲಿ ಜತೆಯಾದ ಶಹಬಾಜ್ ಅಹ್ಮದ್ ಮತ್ತು ಸುಯಶ್ ಪ್ರಭು ದೇಸಾಯಿ 60 ರನ್‌ಗಳ ಅಮೂಲ್ಯ ಜತೆಯಾಟವಾಡಿದರು. ಶಹಬಾಜ್ ಅಹ್ಮದ್ 27 ಎಸೆತಗಳಲ್ಲಿ 41 ರನ್ ಬಾರಿಸಿದರೆ, ಸುಯಶ್ ಪ್ರಭುದೇಸಾಯಿ 18 ಎಸೆತಗಳಲ್ಲಿ 34 ರನ್ ಕಲೆ ಹಾಕಿದರು. ಇನ್ನು ಅಂತಿಮ ಹಂತದಲ್ಲಿ ಬೌಂಡರಿಗಳನ್ನು ಬಾರಿಸಿದ ದಿನೇಶ್ ಕಾರ್ತಿಕ್ ಅಬ್ಬರಿಸಿ ಗೆಲ್ಲುವ ಭರವಸೆಯನ್ನು ಹುಟ್ಟುಹಾಕಿದ್ದರು. ಆದರೆ ದಿನೇಶ್ ಕಾರ್ತಿಕ್ 14 ಎಸೆತಗಳಲ್ಲಿ 34 ರನ್ ಕಲೆಹಾಕಿ ಔಟ್ ಆಗಿ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದರು. ಇನ್ನುಳಿದಂತೆ ವನಿಂದು ಹಸರಂಗ 7 ರನ್, ಆಕಾಶ್ ದೀಪ್ 0, ಮೊಹಮ್ಮದ್ ಸಿರಾಜ್ ಅಜೇಯ 14 ರನ್ ಮತ್ತು ಜೋಶ್ ಹೇಜಲ್ ವುಡ್ ಅಜೇಯ 7 ರನ್ ಕಲೆ ಹಾಕಿದರು. ಈ ಮೂಲಕ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 23 ರನ್‌ಗಳ ಹೀನಾಯ ಸೋಲನ್ನು ಕಂಡಿದೆ. ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications