RCB vs CSK: ಸಿಎಸ್‌ಕೆ ವಿರುದ್ಧ ಸೋಲು: ಈ 4 ಅಂಶಗಳೇ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣ!

ಐಪಿಎಲ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಸೋಲು ಅನುಭವಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಆರ್‌ಸಿಬಿಗಿಂತ ಮೇಲುಗೈ ಸಾಧಿಸಿದ್ದು ಪಂದ್ಯದಲ್ಲಿ ಅರ್ಹ ಗೆಲುವು ಸಂಪಾದಿಸಿದೆ. ಈ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಮೊದಲ ಗೆಲುವು ಕಂಡಿದೆ ರವೀಂದ್ರ ಜಡೇಜಾ ಬಳಗ.
ಫಾಫ್ ಡು ಪ್ಲೆಸಿಸ್ ಪಡೆ ಈ ಪಂದ್ಯದಲ್ಲಿ ಆರಂಭದಲ್ಲಿ ಉತ್ತಮ ಯಶಸ್ಸು ಸಾಧಿಸಿತಾದರೂ ಬಳಿಕ ಪಂದ್ಯದಲ್ಲಿ ಹಿಡಿತವನ್ನು ಕಳೆದುಕೊಳ್ಳಲು ಆರಂಭಿಸಿತು. ಅದರಲ್ಲೂ ರಾಬಿನ್ ಉತ್ತಪ್ಪ ಹಾಗೂ ಶಿವಂ ದುಬೆ ಜೋಡಿ ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗವನ್ನು ಪುಡಿಗಟ್ಟುತ್ತಾ ಸಾಗಿದರು. ಹೀಗಾಗಿ ಆರ್‌ಸಿಬಿ ತಂಡಕ್ಕೆ ಬೃಹತ್ ಮೊತ್ತದ ಗುರಿಯನ್ನು ನಿಗದಿಪಡಿಸಿದರು. ಒಂದು ಹಂತದಲ್ಲಿ ಹಿನ್ನಡೆ ಅನುಭವಿಸಿದರೂ ನಂತರ ಅದ್ಭುತ ಪ್ರತಿರೋಧ ಆರ್‌ಸಿಬಿ ಪಾಳಯದಿಂದ ಬಂತು. ಆದರೆ ಅಂತಿಮವಾಗಿ 23 ರನ್‌ಗಳ ಅಂತರದ ಸೋಲು ಅನುಭವಿಸಿತು ಆರ್‌ಸಿಬಿ.
ಹಾಗಾದರೆ ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಸೋಲಿಗೆ ಕಾರಣಗಳು ಏನು? ಮುಂದೆ ಓದಿ..

ಮತ್ತೆ ವಿಫಲವಾದ ಬೌಲಿಂಗ್ ವಿಭಾಗ
ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಹಿನ್ನಡೆಗೆ ಕಾರಣವಾಗಿದ್ದು ಆರ್‌ಸಿಬಿ ತಂಡದ ಬೌಲಿಂಗ್ ಪ್ರದರ್ಶನ. ಸಿಎಸ್‌ಕೆ ತಂಡದ ಮೊದಲ ಎರಡು ವಿಕೆಟ್‌ಗಳನ್ನು ಶೀಘ್ರವಾಗಿ ಕಬಳಿಸಿತ್ತು ಆರ್‌ಸಿಬಿ. ಆರ್‌ಸಿಬಿ ಪರವಾಗಿ ಮೊದಲ ಬಾರಿಗೆ ಕಣಕ್ಕಿಳಿದ ಹೇಜಲ್‌ವುಡ್ ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರ್ದರ್ಶನ ನೀಡಿ ಮಿಂಚಿದ್ದು ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ವಿಕೆಟ್ ಕಬಳಿಸುವಲ್ಲಿಯೂ ಯಶಸ್ವಿಯಾದರು. ಉಳಿದ ಬೌಲರ್‌ಗಳು ಪರಿಣಾಮಕಾರಿಯಾಗಲು ವಿಫಲವಾದರು. ಸಿರಾಜ್ ವಿಕೆಟ್ ಪಡೆಯುವಲ್ಲಿ ವಿಫಲವಾಗಿದ್ದು 9.20 ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟರು. ಇನ್ನು ಮತ್ತೋರ್ವ ಬೌಲರ್ ಆಕಾಶ್ ದೀಪ್ 4 ಓವರ್‌ಗಳಲ್ಲಿ 14.50 ಎಕಾನಮಿಯಲ್ಲಿ 58 ರನ್ ಬಿಟ್ಟುಕೊಟ್ಟು ಹಿನ್ನಡೆಗೆ ಕಾರಣವಾದರು. ಈ ಹಿಂದಿನ ಪಂದ್ಯಗಳಲ್ಲಿಯೂ ಆಕಾಶ್ ದೀಪ್ ಸಾಕಷ್ಟು ರನ್ ಬಿಟ್ಟುಕೊಟ್ಟಿದ್ದಾರೆ. ಹಸರಂಗ ಎರಡು ವಿಕೆಟ್ ಪಡೆದುಕೊಂಡರಾದರೂ ಅವರಿಂದಲೂ ರನ್ ನಿಯಂತ್ರಣ ಸಾಧ್ಯವಾಗಲಿಲ್ಲ. ಬೌಲಿಂಗ್ ವಿಭಾಗದ ಈ ವೈಫಲ್ಯ ತಂಡದ ಹಿನ್ನಡೆಗೆ ಕಾರಣವಾಯಿತು.

ಅಗ್ರ ಕ್ರಮಾಂಕದ ಕಳಪೆ ಬ್ಯಾಟಿಂಗ್
ಇನ್ನು ಆರ್‌ಸಿಬಿ ತಂಡದ ಪ್ರಮುಖ ಆಟಗಾರರೇ ಈ ಪಂದ್ಯದಲ್ಲಿ ಕೈಕೊಟ್ಟಿರುವುದು ತಂಡಕ್ಕೆ ದೊಡ್ಡ ಆಘಾತ ನೀಡಿತು. ಬೃಹತ್ ಗುರಿ ಬೆನ್ನಟ್ಟುವ ಸವಾಲು ಪಡೆದುಕೊಂಡಿದ್ದ ಸಂದರ್ಭದಲ್ಲಿ ಅಭಿಮಾನಿಗಳು ನಿರೀಕ್ಷೆಯಿಟ್ಟುಕೊಂಡಿದ್ದ ನಾಯಕ ಫಾಫ್ ಡು ಪ್ಲೆಸಿಸ್, ಮಾಜಿ ನಾಯಕ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಾ ಪ್ರಮುಖ ಆಟಗಾರರು ವೈಫಲ್ಯತೆಯನ್ನು ಅನುಭವಿಸಿದರು. ನಾಯಕ ಫಾಫ್ ಡು ಪ್ಲೆಸಿಸ್ 8 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ವಿರಾಟ್ ಕೊಹ್ಲಿ 1 ರನ್‌ಗಳಿಸಿ ತಮ್ಮ ವಿಕೆಟ್ ಕಳೆದುಕೊಂಡರು. ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಂದ 11 ಎಸೆತಗಳಲ್ಲಿ 26 ರನ್ ಹರಿದು ಬಂತಾದರೂ ಬೃಹತ್ ಮೊತ್ತದ ಚೇಸಿಂಗ್ ಸಮಯದಲ್ಲಿ ಇದು ಸಾಕಾಗಲಿಲ್ಲ. ಈ ಆಟಗಾರರಿಂದ ದೊಡ್ಡ ಮೊತ್ತ ಬಾರದೆ ಇರುವುದು ಕೂಡ ತಂಡದ ಹಿನ್ನಡೆಗೆ ಕಾರಣವಾಯಿತು.

ಕಾಡಿದ ಹರ್ಷಲ್ ಪಟೇಲ್ ಅಲಭ್ಯತೆ
ಆರ್‌ಸಿಬಿ ತಂಡದ ಹರ್ಷಲ್ ಪಟೇಲ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ. ಸೋದರಿಯ ಅಗಲಿಕೆಯ ಹಿನ್ನೆಲೆಯಲ್ಲಿ ಹರ್ಷಲ್ ಪಟೇಲ್ ತಂಡದ ಬಯೋಬಬಲ್ ತೊರೆದಿದ್ದು ಕುಟುಂಬವನ್ನು ಸೇರಿಕೊಂಡಿದ್ದಾರೆ. ಪ್ರಮುಖ ಆಟಗಾರನ ಅಲಭ್ಯತೆ ತಂಡಕ್ಕೆ ಹಿನ್ನಡೆಯುಂಟಾಯಿತು. ಡೆತ್ ಓವರ್‌ಗಳಲ್ಲಿ ಪರಿಣಾಮಕಾರಿಯಾಗಿ ರನ್ ನಿಯಂತ್ರಣ ಮಾಡುವ ಕಲೆ ಹೊಂದಿರುವ ಹರ್ಷಲ್ ಪಟೇಲ್ ಎದುರಾಳಿಗೆ ಕೆಲ ಹಿನ್ನಡೆಯುಂಟು ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇದು ಕೂಡ ಆರ್‌ಸಿಬಿ ತಂಡ ಸೋಲು ಅನುಭವಿಸಲು ಪ್ರಮುಖ ಕಾರಣವಾಯಿತು.

ಶಿವಂ ದುಬೆ, ರಾಬಿನ್ ಉತ್ತಪ್ಪ ಜೋಡಿಯ ಅರ್ಭಟ
ಆರ್‌ಸಿಬಿ ತಂಡದ ಸೋಲಿಗೆ ಮತ್ತೊಂದು ಪ್ರಮುಖ ಕಾರಣವೆಂದರೆ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಜೋಡಿಯ ಅಮೋಘ ಪ್ರದರ್ಶನ. ಇಬ್ಬರು ದಾಂಡುಗರು ಕೂಡ ಆರ್‌ಸಿಬಿ ಬೌಲಿಂಗ್ ದಾಳಿಯನ್ನು ಅಕ್ಷರಶಃ ಅಟ್ಟಾಡಿಸುವಲ್ಲಿ ಯಶಸ್ವಿಯಾಗಿದ್ದರು. ಡಿವೈ ಪಾಟೀಲ್ ಕ್ರೀಡಾಂಗಣದ ಪಿಚ್ ಲಾಭವನ್ನು ಅದ್ಭುತವಾಗಿ ಬಳಸಿಕೊಂಡ ಈ ಇಬ್ಬರು ಕೂಡ ಅದ್ಭುತ ಪ್ರದರ್ಶನ ನೀಡಿದರು. ರಾಬಿನ್ ಉತ್ತಪ್ಪ 50 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 9 ಸಿಕ್ಸರ್ ನೆರವಿನಿಂದ 88 ರನ್ ಬಾರಿಸಿದ್ದಾರೆ. ಇನ್ನು ಶಿವಂ ದುಬೆ 46 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ 95 ರನ್ ಸಿಡಿಸಿ ಅಜೇಯವಾಗುಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications