DC vs KKR: ಮಿಂಚಿದ ಕುಲದೀಪ್; ಕೆಕೆಆರ್ ವಿರುದ್ಧ ಡೆಲ್ಲಿಗೆ 4 ವಿಕೆಟ್‍ಗಳ ಜಯ

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 41ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್‍ಗಳ ಜಯ ಸಾಧಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಕಲೆಹಾಕಿ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 147 ರನ್‌ಗಳ ಗುರಿಯನ್ನು ನೀಡಿತು.
ಈ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾಗಿರುವ ಡೆಲ್ಲಿ ಕ್ಯಾಪಿಟಲ್ಸ್ 19 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಕಲೆಹಾಕಿ 4 ವಿಕೆಟ್‍ಗಳ ಜಯವನ್ನು ಸಾಧಿಸಿದೆ. ಈ ಗೆಲುವಿನ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಏರಿಕೆ ಕಂಡಿದ್ದು, ಪಂದ್ಯದಲ್ಲಿ ಸೋತ ಕೋಲ್ಕತಾ ನೈಟ್ ರೈಡರ್ಸ್ ಎಂಟನೇ ಸ್ಥಾನದಲ್ಲೇ ಉಳಿದುಕೊಂಡಿದ್ದರೆ, ಪಂಜಾಬ್ ಕಿಂಗ್ಸ್ ಆರನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಇನ್ನಿಂಗ್ಸ್:
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ 7.3 ಓವರ್‌ಗಳಲ್ಲಿ 35 ರನ್‌ಗಳಿಗೆ ತನ್ನ ಮೊದಲ 4 ವಿಕೆಟ್‍ಗಳನ್ನು ಕಳೆದುಕೊಂಡು ಆರಂಭಿಕ ಆಘಾತವನ್ನು ಅನುಭವಿಸಿತು. ಆರನ್ ಫಿಂಚ್ 3 ರನ್, ವೆಂಕಟೇಶ್ ಐಯ್ಯರ್ 6 ರನ್, ಸುನಿಲ್ ನರೈನ್ ಗೋಲ್ಡನ್ ಡಕ್ ಔಟ್ ಮತ್ತು ಬಾಬಾ ಇಂದ್ರಜಿತ್ 6 ರನ್ ಗಳಿಸಿ ಔಟ್ ಆದರು. ಹೀಗೆ ಒಂದೆಡೆ ವಿಕೆಟ್‍ಗಳು ಉರುಳುತ್ತಿದ್ದರೆ, ಮತ್ತೊಂದೆಡೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಂಡದ ನಾಯಕ ಶ್ರೇಯಸ್ ಐಯ್ಯರ್ 37 ಎಸೆತಗಳಲ್ಲಿ 42 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಇನ್ನುಳಿದಂತೆ ಆ್ಯಂಡ್ರೆ ರಸೆಲ್ ಡಕ್ ಔಟ್ ಆದರೆ, ರಿಂಕು ಸಿಂಗ್ 16 ಎಸೆತಗಳಲ್ಲಿ 23 ರನ್ ಕಲೆ ಹಾಕಿ ಗಮನ ಸೆಳೆದರು ಮತ್ತು ಟಿಮ್ ಸೌಥಿ ಹಾಗೂ ಹರ್ಷಿತ್ ರಾಣಾ ಇಬ್ಬರೂ ಸಹ ಗೋಲ್ಡನ್ ಡಕ್ ಔಟ್ ಆದರು. ಇನ್ನು ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ ರಾಣಾ 34 ಎಸೆತಗಳಲ್ಲಿ 57 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ನಿತೀಶ್ ರಾಣಾರ ಈ ಉತ್ತಮ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಕೂಡ ಇದ್ದವು. ಈ ಮೂಲಕ ಕೋಲ್ಕತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಕಲೆಹಾಕಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ 3 ಓವರ್ ಬೌಲಿಂಗ್ ಮಾಡಿ ಕೇವಲ 14 ರನ್ ನೀಡಿದ ಕುಲದೀಪ್ ಯಾದವ್ 4 ವಿಕೆಟ್ ಪಡೆದು ಮಿಂಚಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ನೆಲಕಚ್ಚಿ ನಿಂತಿದ್ದ ಎದುರಾಳಿ ತಂಡದ ನಾಯಕನ ವಿಕೆಟ್ ಪಡೆದ ಕುಲದೀಪ್ ಯಾದವ್ ಇನ್ನುಳಿದ ಪ್ರಮುಖ ಆಟಗಾರರಾದ ಸುನಿಲ್ ನರೇನ್, ಆ್ಯಂಡ್ರೆ ರಸೆಲ್ ಹಾಗೂ ಬಾಬಾ ಇಂದ್ರಜಿತ್ ಅವರ ವಿಕೆಟ್‍ಗಳನ್ನು ಪಡೆದು ಕೋಲ್ಕತಾ ನೈಟ್ ರೈಡರ್ಸ್ ತಂಡ ಒತ್ತಡಕ್ಕೆ ಒಳಗಾಗುವಂತೆ ಮಾಡಿದರು. ಇನ್ನುಳಿದಂತೆ ಮುಸ್ತಫಿಜರ್ ರಹಮಾನ್ 3 ವಿಕೆಟ್ ಪಡೆದರೆ, ಚೇತನ್ ಸಕಾರಿಯಾ ಹಾಗೂ ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್:
ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲಿಯೇ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು, ಪಂದ್ಯದ ಮೊದಲ ಎಸೆತದಲ್ಲಿಯೇ ಪೃಥ್ವಿ ಶಾ ಗೋಲ್ಡನ್ ಡಕ್ ಔಟ್ ಆದರು. ಮತ್ತೋರ್ವ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 26 ಎಸೆತಗಳಲ್ಲಿ 42 ರನ್ ಬಾರಿಸಿದರೆ, ಮಿಚೆಲ್ ಮಾರ್ಷ್ 13, ಲಲಿತ್ ಯಾದವ್ 22, ನಾಯಕ ರಿಷಭ್ ಪಂತ್ 2, ಅಕ್ಷರ್ ಪಟೇಲ್ 24 ರನ್ ಕಲೆ ಹಾಕಿದರು. ಅಂತಿಮ ಹಂತದಲ್ಲಿ ಅಬ್ಬರಿಸಿದ ರೋವ್ಮನ್ ಪೊವೆಲ್ 16 ಎಸೆತಗಳಲ್ಲಿ ಅಜೇಯ 33 ರನ್ ಚಚ್ಚಿದರು ಹಾಗೂ ಶಾರ್ದೂಲ್ ಠಾಕೂರ್ ಕೂಡ 8 ರನ್ ಕಲೆಹಾಕಿ ಅಜೇಯರಾಗಿ ಉಳಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು ಕೊನೆಯ 12 ಎಸೆತಗಳಲ್ಲಿ 4 ರನ್ ಬೇಕಿದ್ದಾಗ 19ನೇ ಓವರ್ ಬೌಲಿಂಗ್ ಮಾಡಲು ಸ್ವತಃ ನಾಯಕ ಶ್ರೇಯಸ್ ಅಯ್ಯರ್ ಅವರೇ ಮುಂದಾದರು. ಈ ಓವರ್‌ನ ಮೊದಲ 4 ಎಸೆತಗಳನ್ನು ಎದುರಿಸಿ ಯಾವುದೇ ರನ್ ಬಾರಿಸಲಾಗದೇ ಉಳಿದ ಶಾರ್ದೂಲ್ ಠಾಕೂರ್ ಐದನೇ ಎಸೆತಕ್ಕೆ ಸಿಂಗಲ್ ತೆಗೆದುಕೊಂಡರು ಹಾಗೂ ಅಂತಿಮ ಎಸೆತಕ್ಕೆ ರೋವ್ಮನ್ ಪೊವೆಲ್ ಸಿಕ್ಸರ್ ಚಚ್ಚಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಉಮೇಶ್ ಯಾದವ್ 3 ವಿಕೆಟ್ ಪಡೆದರೆ, ಹರ್ಷಿತ್ ರಾಣಾ ಹಾಗೂ ಸುನಿಲ್ ನರೈನ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications