
ಐಪಿಎಲ್ 15ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಚಿತ್ತ ಕೂಡ ಈಗ ಈ ಟೂರ್ನಿ ಮೇಲೆ ನೆಟ್ಟಿದೆ. ಎಲ್ಲಾ ತಂಡಗಳ ಬಹುತೇಕ ಆಟಗಾರರು ಕ್ವಾರಂಟೈನ್ ಮುಗಿಸಿ ಬಯೋಬಬಲ್ ಸೇರಿಕೊಂಡಿದ್ದು ಅಭ್ಯಾಸವನ್ನು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಆರ್‌ಸಿಬಿ ತಂಡದ ಅನುಭವಿ ಆಟಗಾರ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಬಲ್ಲ ಇಬ್ಬರು ಆಟಗಾರರನ್ನು ಹೆಸರಿಸಿದ್ದಾರೆ. ಕುತೂಹಲಕಾರಿ ಅಂಶವೆಂದರೆ ದಿನೇಶ್ ಕಾರ್ತಿಕ್ ಹೆಸರಿಸಿದ ಈ ಇಬ್ಬರು ಯುವ ಆಟಗಾರರು ಕೂಡ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ.
ಈ ಬಾರಿ ಆರ್‌ಸಿಬಿ ತಂಡದ ಪರವಾಗಿ ದಿನೇಶ್ ಕಾರ್ತಿಕ್ ಕಣಕ್ಕಿಳಿಯಲಿದ್ದು ಟೂರ್ನಿಗಾಗಿ ಭರ್ಜರಿ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕ್ರಿಕ್ ಬಜ್ ಜೊತೆಗೆ ಚರ್ಚೆಯಲ್ಲಿ ಭಾಗಿಯಾದ ದಿನೇಶ್ ಕಾರ್ತಿಕ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಈ ಬಾರಿಯ ಟೂರ್ನಿಯಲ್ಲಿ ಕಣ್ಣಿಡಬಹುದಾದ ಇಬ್ಬರು ಯುವ ಆಟಗಾರರನ್ನು ಹೆಸರಿಸಿದ್ದಾರೆ.
ದಿನೇಶ್ ಕಾರ್ತಿಕ್ ಹೆಸರಿಸಿದ ಆಟಗಾರರು ಯಾರು?: ದಿನೇಶ್ ಕಾರ್ತಿಕ್ ಹೆಸರಿಸಿದ ಮೊದಲ ಆಟಗಾರ ಯಶಸ್ ಧುಲ್. ಈ ಬಾರಿಯ ಅಂಡರ್ 19 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ ಯಶ್ ಧುಲ್ ಐಪಿಎಲ್ ಹರಾಜಿನಲ್ಲಿಯೂ ಗಮನಸೆಳೆದರು. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಯಶ್ ಧುಲ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಮುಂಬೈ ವಿರುದ್ಧ ನಡೆಯಲಿರುವ ಮೊದಲ ಪಂದ್ಯದಲ್ಲಿ ಯಶ್ ಧುಲ್ ಐಪಿಎಲ್‌ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ. ಅಂಡರ್ 19 ವಿಶ್ವಕಪ್ ಹಾಗೂ ಹಾಗೂ ರಣಜಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಧುಲ್ ಐಪಿಎಲ್‌ನಲ್ಲಿಯೂ ಅಮೋಘ ಪ್ರದರ್ಶನವನ್ನು ನೀಡಲಿದ್ದಾರೆ ಎಂದು ಡಿಕೆ ಅಭಿಪ್ರಾಯಪಟ್ಟಿದ್ದಾರೆ.
ಉಶ್ ಧುಲ್ ಬಗ್ಗೆ ಡಿಕೆ ಹೇಳಿದ್ದಿಷ್ಟು: "ಯಶ್ ಧುಲ್. ಇತ್ತೀಚೆಗೆ ಅಂತ್ಯವಾದ ಅಂಡರ್19 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನಿಡಿದ ಆಟಗಾರ ಯಶ್ ಧುಲ್. ರಣಜಿ ಟ್ರೋಫಿಯಲ್ಲಿಯೂ ಆವರು ಅಮೋಘ ಆಟವಾಡಿದ್ದಾರೆ. ಆತನ ಆರಂಭ ಅತ್ಯಂತ ಅದ್ಭುತವಾಗಿದೆ. ಆತ ಈ ಬಾರಿ ಅತ್ಯುತ್ತಮ ಐಪಿಎಲ್ ಆವೃತ್ತಿಯನ್ನು ಹೊಂದಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ" ಎಂದಿದ್ದಾರೆ ದಿನೇಶ್ ಕಾರ್ತಿಕ್.
ತಮಿಳುನಾಡು ಮೂಲದ ಆಟಗಾರನ ಮೇಲೆ ದಿನೇಶ್ ಕಾರ್ತಿಕ್ ಭರವಸೆ: ಯಶ್ ಧುಲ್ ಬಳಿಕ ಈ ಬಾರಿಯ ಟೂರ್ನಿಯಲ್ಲಿ ಮಿಂಚಬಲ್ಲ ಮತ್ತೋರ್ವ ಆಟಗಾರನಾಗಿ ತಮಿಳುನಾಡು ಮೂಲದ ಯುವ ಆಟಗಾರನನ್ನು ದಿನೇಶ್ ಕಾರ್ತಿಕ್ ಹೆಸರಿಸಿದ್ದಾರೆ. ತಮಿಳುನಾಡಿನ ಸಾಯಿ ಕಿಶೋರ್ ಈ ಬಾರಿ ಐಪಿಎಲ್‌ನಲ್ಲಿ ಮಿಂಚುಹರಿಸಲಿರುವ ಮತ್ತೋರ್ವ ಯುವ ಆಟಗಾರ ಎಂದು ದಿನೇಶ್ ಕಾರ್ತಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ತಂಡದ ಯಶಸ್ಸಿಗೆ ಸಾಯಿ ಕಿಶೋರ್ ಕೊಡುಗೆ ಅಪಾರ: ಸಾಯಿ ಕಿಶೋರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ದಿನೇಶ್ ಕಾರ್ತಿಕ್. "ನಾನು ಆಯ್ಕೆ ಮಾಡಿರುವ ಮತ್ತೋರ್ವ ಆಟಗಾರ ಸಾಯಿ ಕಿಶೋರ್. ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಸಾಯಿ ಕಿಶೋರ್ ಅತ್ಯುತ್ತಮ ತಂಡ ಎನಿಸಿದೆ ಎಂದರೆ ಅದರಲ್ಲಿ ಹೆಚ್ಚಿನ ಶ್ರೇಯಸ್ಸು ಸಾಯಿ ಕಿಶೋರ್‌ಗೆ ಸಲ್ಲಬೇಕಿದೆ" ಎಂದಿದ್ದಾರೆ ದಿನೇಶ್ ಕಾರ್ತಿಕ್. ಸಾಯಿ ಕಿಶೋರ್ ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಇದ್ದರೂ ಆಡುವ ಅವಕಾಶವನ್ನು ಪಡೆದುಕೊಂಡಿರಲಿಲ್ಲ. ಈ ಬಾರಿಯ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ಪಾಲಾಗಿದ್ದು ಉತ್ತಮ ಟೂರ್ನಿಯನ್ನು ನಿರೀಕ್ಷಿಸುತ್ತಿದ್ದಾರೆ.