
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದೇ ಮಾರ್ಚ್ 26ರಂದು ನಡೆಯಲಿರುವ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಳೆದ ಆವೃತ್ತಿಯ ರನ್ನರ್ ಅಪ್ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯಲ್ಲಿನ ತನ್ನ ಮೊದಲನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮಾರ್ಚ್ 27ರಂದು ನಡೆಯಲಿರುವ ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ. ಇನ್ನು ಕಳೆದ ಬಾರಿಯ ಐಪಿಎಲ್ ನಂತರ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ತ್ಯಜಿಸಿದ್ದು, ಈ ಬಾರಿಯ ಮೆಗಾ ಹರಾಜಿನಲ್ಲಿ 7 ಕೋಟಿಗೆ ತಂಡದ ಪಾಲಾದ ಫಾಫ್ ಡು ಪ್ಲೆಸಿಸ್ ತಂಡದ ನೂತನ ನಾಯಕನಾಗಿ ನೇಮಿಸಲ್ಪಟ್ಟಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಮೆಗಾ ಹರಾಜಿನ ನಂತರ ಹಲವಾರು ಯುವ ಕ್ರಿಕೆಟಿಗರಿಂದ ಕೂಡಿದ್ದು, ಈಗಾಗಲೇ ಕೆಲ ಆಟಗಾರರು ತಮ್ಮ ನಾಯಕ ಫಾಫ್ ಡು ಪ್ಲೆಸಿಸ್ ಜತೆಗೆ ಮೊದಲ ಅಭ್ಯಾಸ ಶಿಬಿರದಲ್ಲಿ ಭಾಗವಹಿಸಿದ್ದಾರೆ.
ಹೌದು, ನಾಯಕ ಫಾಫ್ ಡು ಪ್ಲೆಸಿಸ್ ಸೇರಿದಂತೆ ಸುಮಾರು 6-7 ಆಟಗಾರರು ನಿನ್ನೆ ( ಮಾರ್ಚ್ 17 ) ಸಂಜೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೈನಿಂಗ್ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದು, ಈ ಚಿತ್ರಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಅಭ್ಯಾಸ ಶಿಬಿರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಸಂಜಯ್ ಬಂಗಾರ್ ಮತ್ತು ನಿರ್ದೇಶಕ ಮೈಕ್ ಹೆಸನ್ ನೇತೃತ್ವದಲ್ಲಿ ಆಟಗಾರರು ತರಬೇತಿ ಪಡೆದು ಬೆವರಿಳಿಸಿದ್ದಾರೆ. ಇನ್ನು ಈ ಆಟಗಾರರು ಮೂರು ದಿನಗಳ ಕಾಲದ ಕ್ವಾರಂಟೈನ್ ಮುಗಿದ ನಂತರ ಈ ಶಿಬಿರದಲ್ಲಿ ಭಾಗವಹಿಸಿದ್ದು, ಎಲ್ಲಾ ಆಟಗಾರರು ಇದಕ್ಕೂ ಮುನ್ನ ಸತತವಾಗಿ ಕ್ರಿಕೆಟ್ ಆಡಿ ಆಯಾಸಕ್ಕೊಳಗಾಗಿದ್ದರು ಹಾಗೂ ಅವರಿಗೆ ಸಿಕ್ಕ ಈ ಮೂರು ದಿನಗಳ ವಿಶ್ರಾಂತಿ ಅವರಲ್ಲಿ ಹೊಸ ಹುರುಪನ್ನು ಮೂಡಿಸಿದೆ ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕ ಫಾಫ್ ಡು ಪ್ಲೆಸಿಸ್ ಈ ಪುಟ್ಟ ಅಭ್ಯಾಸ ಶಿಬಿರದಲ್ಲಿ ಬ್ಯಾಟ್ ಬೀಸಿ ಬೆವರು ಹರಿಸಿದ್ದು, ಫಾಫ್ ಡು ಪ್ಲೆಸಿಸ್ ತುಂಬಾ ಅಚ್ಚುಕಟ್ಟಾಗಿ ಚೆಂಡನ್ನು ಸಂಪರ್ಕಿಸಿ ಉತ್ತಮ ಹೊಡೆತಗಳನ್ನು ಬಾರಿಸಿರುವುದು ಖುಷಿಯ ವಿಚಾರ ಎಂದು ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ. ಹಾಗೂ ಈ ಅಭ್ಯಾಸ ಶಿಬಿರದಲ್ಲಿ ಸಿದ್ಧಾರ್ಥ್ ಕೌಲ್, ಕರ್ಣ್ ಶರ್ಮಾ ಹಾಗೂ ಲುವ್ನಿತ್ ಸಿಸೋಡಿಯಾ ಸೇರಿದಂತೆ ಇನ್ನೂ ಕೆಲ ಯುವ ಕ್ರಿಕೆಟಿಗರು ಭಾಗಿಯಾಗಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್ ( ನಾಯಕ ), ಹರ್ಷಲ್ ಪಟೇಲ್, ವನಿಂದು ಹಸರಂಗಾ, ದಿನೇಶ್ ಕಾರ್ತಿಕ್, ಜೋಶ್ ಹೇಜಲ್‌ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫಾನ್ ರುದರ್‌ಫೋರ್ಡ್, ಜೇಸನ್ ಬೆಹ್ರಾಯ್, ಜೇಸನ್ ಬೆಹ್ರಾಯ್ ಮಿಲಿಂದ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್