IPL 2022 Final: ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುವ ಗುಜರಾತ್ ಟೈಟನ್ಸ್ ತಂಡ ಹೀಗಿರಲಿದೆ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು, ಹತ್ತು ತಂಡಗಳ ನಡುವೆ ಟ್ರೋಫಿಗಾಗಿ ಸೆಣಸಾಟ ನಡೆಸಿದ್ದು ಕೂಡ ಆ ವಿಶೇಷತೆಗಳಲ್ಲಿ ಒಂದು. ಇನ್ನೂ ವಿಶೇಷವೆಂದರೆ ಈ ಬಾರಿ ನೂತನವಾಗಿ ಪದಾರ್ಪಣೆ ಮಾಡಿರುವ ತಂಡಗಳಾದ ಲಕ್ನೋ ಸೂಪರ್ ಜಯಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಪ್ಲೇ ಆಫ್ ಸುತ್ತಿಗೆ ಪ್ರವೇಶಿಸುವಲ್ಲಿ ಯಶಸ್ವಿಯಾದದ್ದು, ಅದರಲ್ಲಿಯೂ ಗುಜರಾತ್ ಟೈಟನ್ಸ್ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟದ್ದು.
ಹೌದು, ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗುವ ವೇಳೆಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡು ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಟ್ಟು, 1ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ನೇರವಾಗಿ ಫೈನಲ್ ಪ್ರವೇಶವನ್ನು ಪಡೆದುಕೊಂಡಿತ್ತು.
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎರಡನೇ ಕ್ವಾಲಿಫೈಯರ್ ಪಂದ್ಯ ಗೆದ್ದು ಮತ್ತೆ ತನ್ನ ವಿರುದ್ಧ ಸೆಣಸಾಡಲು ಸಜ್ಜಾಗಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರಿಸುತ್ತಿದೆ. ಇತ್ತಂಡಗಳ ನಡುವಿನ ಈ ಪಂದ್ಯ ಇಂದು ( ಮೇ 29 ) ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ತನ್ನ ಹೋಂ ಪಿಚ್‌ನಲ್ಲಿ ಗುಜರಾತ್ ಟೈಟನ್ಸ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಕಣಕ್ಕಿಳಿದ ಮೊದಲನೇ ಆವೃತ್ತಿಯಲ್ಲಿಯೇ ಟ್ರೋಫಿ ಎತ್ತಿ ಹಿಡಿಯುವತ್ತ ಚಿತ್ತ ನೆಟ್ಟಿದೆ. ಇನ್ನು ಈ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಗುಜರಾತ್ ಟೈಟನ್ಸ್ ಸಂಭಾವ್ಯ ಆಡುವ ಬಳಗ ಈ ಕೆಳಕಂಡಂತಿದೆ.

ಆರಂಭಿಕ ಆಟಗಾರರು
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದ ವೃದ್ದಿಮಾನ್ ಸಹಾ ರಾಜಸ್ಥಾನ್ ರಾಯಲ್ಸ್ ವಿರುದ್ಧದ 1ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡಕ್ ಔಟ್ ಆಗಿ ಮಂಕಾಗಿದ್ದರು. ಆದರೆ ಇದೀಗ ಈ ಪಂದ್ಯದಲ್ಲಿ ಅದೇ ತಂಡದ ವಿರುದ್ಧ ಉತ್ತಮ ಆರಂಭ ಕಟ್ಟಿ ಕಮ್ ಬ್ಯಾಕ್ ಮಾಡುವತ್ತ ವೃದ್ದಿಮನ್ ಸಹಾ ಚಿತ್ತ ನೆಡಲಿದ್ದಾರೆ. ಸಹಾ ಜತೆಗೆ ಯುವ ಆಟಗಾರ ಶುಭ್ ಮನ್ ಗಿಲ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದು ಈಗಾಗಲೇ ಟೂರ್ನಿಯಲ್ಲಿ 400 ರನ್ ಗಡಿ ದಾಟಿದ್ದು, ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಮಧ್ಯಮ ಕ್ರಮಾಂಕ
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಮಿಂಚುವಲ್ಲಿ ವಿಫಲವಾಗಿರುವ ಮ್ಯಾಥ್ಯೂ ವೇಡ್ ಕಳೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 35 ರನ್ ಗಳಿಸಿದ್ದು, ಇಂದಿನ ಪಂದ್ಯದಲ್ಲಿ ಮತ್ತಷ್ಟು ರನ್ ಗಳಿಸಿ ತಂಡಕ್ಕೆ ಆಸರೆಯಾಗುವತ್ತ ಚಿತ್ತ ನೆಟ್ಟಿದ್ದಾರೆ. ಈ ಬಾರಿ ತಂಡವನ್ನು ಅದ್ಭುತವಾಗಿ ಮುನ್ನಡೆಸಿರುವ ನಾಯಕ ಹಾರ್ದಿಕ್ ಪಾಂಡ್ಯ ಕಳೆದ ಪಂದ್ಯದಲ್ಲಿಯೂ 27 ಎಸೆತಗಳಲ್ಲಿ ಅಜೇಯ 40 ರನ್ ಬಾರಿಸಿ ಮಿಂಚಿದ್ದು, ಮಹತ್ವದ ಫೈನಲ್ ಪಂದ್ಯದಲ್ಲಿಯೂ ಅದೇ ರೀತಿ ಅಬ್ಬರಿಸುವ ಸಾಧ್ಯತೆ ಹೆಚ್ಚಿವೆ. ಇನ್ನು ಡೇವಿಡ್ ಮಿಲ್ಲರ್ 1ನೇ ಕ್ವಾಲಿಫೈಯರ್ ಪಂದ್ಯದಲ್ಲಿ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಪಂದ್ಯದಲ್ಲಿ ಅಜೇಯ 68 ರನ್ ಬಾರಿಸಿದ್ದ ಮಿಲ್ಲರ್ ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಬಾರಿಸುವ ಮೂಲಕ ತಂಡಕ್ಕೆ ಜಯ ತಂದಿಟ್ಟಿದ್ದರು.

ಆಲ್ ರೌಂಡರ್ಸ್
ಲೀಗ್ ಹಂತದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಎಸೆತಕ್ಕೆ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಜಯ ತಂದಿಟ್ಟಿದ್ದ ರಾಹುಲ್ ತೆವಾಟಿಯಾ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಲಿಲ್ಲ. ಆದರೆ ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಸಿಕ್ಕರೆ ತಂಡಕ್ಕೆ ಅಗತ್ಯವಾದ ರನ್ ಕಲೆಹಾಕುವಲ್ಲಿ ರಾಹುಲ್ ತೆವಾಟಿಯಾ ವಿಫಲರಾಗುವುದಿಲ್ಲ ಎನ್ನಬಹುದು. ಗುಜರಾತ್ ಟೈಟನ್ಸ್ ತಂಡದ ಮತ್ತೊಂದು ಅಸ್ತ್ರ ರಶೀದ್ ಖಾನ್ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ತಂಡಕ್ಕೆ ಆಸರೆಯಾಗಬಲ್ಲ ಆಟಗಾರನಾಗಿದ್ದು ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ.

ಬೌಲರ್‌ಗಳು
ಸಾಯಿ ಕಿಶೋರ್ ಈ ಬಾರಿಯ ಆವೃತ್ತಿಯಲ್ಲಿ ಕೇವಲ 4 ಪಂದ್ಯಗಳನ್ನಾಡಿದ್ದಾರೆ. ಆದರೆ ಕಳೆದ ಒಂದನೇ ಕ್ವಾಲಿಫೈರ್ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಈತನಿಗೆ ಹಾರ್ದಿಕ್ ಪಾಂಡ್ಯ ನಂಬಿಕೆಯಿಟ್ಟು ಎಲ್ಲಾ 4 ಓವರ್ ಮಾಡುವ ಅವಕಾಶ ನೀಡಿದ್ದರು. ಅದರಂತೆ 4 ಓವರ್ ಬೌಲಿಂಗ್ ಮಾಡಿದ್ದ ಈತ 43 ರನ್ ನೀಡಿ ದುಬಾರಿಯಾದರೂ ಕೂಡ ಎದುರಾಳಿ ತಂಡದ ಪ್ರಮುಖ ಆಟಗಾರ ಸಂಜು ಸ್ಯಾಮ್ಸನ್ ವಿಕೆಟ್ ಪಡೆದು ತಂಡಕ್ಕೆ ಆಸರೆಯಾಗಿದ್ದರು. ಹೀಗಾಗಿ ಈತ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು. ಈ ಬಾರಿ ಅಲ್ಜಾರಿ ಜೋಸೆಫ್ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು, ಟೂರ್ನಿಯ ಅಂತಿಮ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ. ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿ 10 ವಿಕೆಟ್ ಪಡೆದಿರುವ ಯಶ್ ದಯಾಳ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಬಹುತೇಕ ಖಚಿತ. ಇನ್ನು ತಂಡದ ಪ್ರಮುಖ ಆಟಗಾರ ಮೊಹಮ್ಮದ್ ಶಮಿ ಆಡುವ ಬಳಗದಲ್ಲಿ ಕಡ್ಡಾಯವಾಗಿ ಇರಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications