ಐಪಿಎಲ್ 2022: ಫ್ರಾಂಚೈಸಿಗಳ ಚಾಣಾಕ್ಷ ನಡೆ; ಅಗ್ಗದ ಮೊತ್ತಕ್ಕೆ ರೀಟೈನ್ ಆದ ಪ್ರಮುಖ 5 ಆಟಗಾರರು!

ಮುಂದಿನ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಮಹಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಅದಕ್ಕೆ ಪೂರಕವಾಗಿ ಈಗ ಎಲ್ಲಾ ತಂಡಗಳು ಕೂಡ ಕೆಲ ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಕೆಲ ಷರತ್ತುಗಳೊಂದಿಗೆ ಗರಿಷ್ಠ ನಾಲ್ಕು ಆಟಗಾರರನ್ನು ತಂಡದಲ್ಲಿಯೇ ಉಳಿಸಿಕೊಳ್ಳುವ ಅವಕಾಶವನ್ನು ಈಗಾಗಲೇ ಇರುವ 8 ಫ್ರಾಂಚೈಸಿಗಳಿಗೆ ನೀಡಲಾಗಿತ್ತು. ಇದರಲ್ಲಿ ಕೆಲ ಫ್ರಾಂಚೈಸಿಗಳು ಗರಿಷ್ಠ ನಾಲ್ಕು ಆಟಗಾರರನ್ನು ಉಳಿಸಿಕೊಂಡಿದ್ದರೆ ಕೆಲ ತಂಡಗಳು ಮೂರು ಹಾಗೂ ಒಂದು ತಂಡ ಇಬ್ಬರು ಆಟಗಾರರನ್ನು ಮಾತ್ರವೇ ಉಳಿಸಿಕೊಂಡಿದೆ.
ಪ್ರತಿಯೊಂದು ಫ್ರಾಂಚೈಸಿ ಕೂಡ ತಮ್ಮದೇ ಆದ ಲೆಕ್ಕಾಚಾರಗಳೊಂದಿಗೆ ಭವಿಷ್ಯದ ಆವೃತ್ತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಆಟಗಾರರ ರೀಟೈನ್ ಮಾಡಿಕೊಂಡಿದೆ. ಆದರೆ ಇದರಲ್ಲಿ ಕೆಲ ಪ್ರಾಂಚೈಸಿಗಳು ಕೆಲ ಪ್ರಮುಖ ಆಟಗಾರರನ್ನು ಅಗ್ಗದ ಮೊತ್ತಕ್ಕೆ ರೀಟೈನ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಐಪಿಎಲ್ ಅಭಿಮಾನಿಗಳಿಗೂ ಕುತೂಹಲ ಮೂಡಿಸಿದೆ. ಆಯಾಯ ತಂಡಗಳ ಪಾಲಿಗೆ ಟ್ರಂಪ್ ಕಾರ್ಡ್ ಆಗಬಲ್ಲ ಸಾಮರ್ಥ್ಯದ ಆಟಗಾರರನ್ನು ತಂಡದಲ್ಲಿಯೇ ಕಡಿಮೆ ಮೊತ್ತಕ್ಕೆ ಉಳಿಸಿಕೊಳ್ಳುವ ಮೂಲಕ ಫ್ರಾಂಚೈಸಿಗಳು ಚಾಣಾಕ್ಷ ನಡೆಯನ್ನು ತೆಗೆದುಕೊಂಡಿದೆ.
ಹಾಗಾದರೆ ಈ ಬಾರಿಯ ರೀಟೆನ್ಶನ್‌ನಲ್ಲಿ ಕಡಿಮೆ ಮೊತ್ತಕ್ಕೆ ರೀಟೈನ್ ಆಗುವ ಮೂಲಕ ಅಚ್ಚರಿ ಮೂಡಿಸಿದ ಪ್ರಮುಖ ಐವರು ಆಟಗಾರರು ಯಾರು? ಯಾವ ಫ್ರಾಂಚೈಸಿ ಎಷ್ಟು ಮೊತ್ತಕ್ಕೆ ಉಳಿಸಿಕೊಂಡಿದೆ? ಮುಂದೆ ಓದಿ..

ಋತುರಾಜ್ ಗಾಯಕ್ವಾಡ್, 6 ಕೋಟಿ ರೂಪಾಯಿ
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಅವರನ್ನು ತಂಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯ ರೀಟೆನ್ಶನ್‌ನಲ್ಲಿ ಚೆನ್ನೈ ತಂಡ ರೀಟೆನ್ಶನ್ ಮಾಡಿಕೊಂಡ ನಾಲ್ಕನೇ ಆಟಗಾರನಾಗಿದ್ದಾರೆ ಋತುರಾಜ್ ಗಾಯಕ್ವಾಡ್. ಇತ್ತೀಚೆಗಷ್ಟೇ ಅಂತ್ಯವಾದ ಐಪಿಎಲ್ ಆವೃತ್ತಿಯಲ್ಲಿ ಋತುರಾಜ್ ಗಾಯಕ್ವಾಡ್ ಅಮೋಘ ಪ್ರದರ್ಶನ ನೀಡಿದ್ದಾರೆ. ಐಪಿಎಲ್‌ನಲ್ಲಿ ಆಡಿದ 19 ಪಂದ್ಯಗಳಲ್ಲಿ ಋತುರಾಜ್ ಗಾಯಕ್ವಾಡ್ 45.35ರ ಸರಾಸರಿಯಲ್ಲಿ 635 ರನ್‌ಗಳಿಸಿದ್ದಾರೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿದ್ದಾರೆ ಋತುರಾಜ್. ಈ ಬಲಗೈ ಆಟಗಾರ ಐಪಿಎಲ್‌ನಲ್ಲಿ ನಾಲ್ಕು ಅರ್ಧ ಶತಕ ಬಾರಿಸಿದ್ದರೆ 1 ಅಜೇಯ ಶತಕ ಸಿಡಿಸಿ ಮಿಂಚಿದ್ದಾರೆ.
ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟ್ ತಂಡಕ್ಕೂ ಪದಾರ್ಪಣೆ ಮಾಡಿರುವ ಋತುರಾಜ್ ಗಾಯಕ್ವಾಡ್ ಈ ಬಾರಿ ಹರಾಜಿಗೆ ಹೋಗಿದ್ದರೆ ಮತ್ತಷ್ಟು ಹೆಚ್ಚಿನ ಬೆಲೆ ಪಡೆಯುವ ಸಾಧ್ಯತೆಯಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈ ಯುವ ಆಟಗಾರನನ್ನು 6 ಕೋಟಿ ರೂಪಾಯಿಗೆ ತನ್ನಲ್ಲೇ ಉಳಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ಚಾಣಾಕ್ಷ ನಡೆಯನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಋತುರಾಜ್ ಈ ಹಿಂದಿನ ಆವೃತ್ತಿಯಲ್ಲಿ ಕೇವಲ 20 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದರು ಎಂಬುದು ಕೂಡ ಗಮನಾರ್ಹ ಸಂಗತಿ.

ಅನ್ರಹ್ ನೋರ್ಕಿಯಾ, 6.5 ಕೋಟಿ ರೂಪಾಯಿ
ಡೆಲ್ಲಿ ಕ್ಯಾಪಿಟಲ್ಸ್ ತಂಡ ವೇಗಿ ಅನ್ರಹ್ ನಾರ್ಕಿಯಾ ಅವರನ್ನು 6.5 ಕೋಟಿ ರೂಪಾಯಿಗೆ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿದ್ದಾರೆ ನಾರ್ಕಿಯಾ. ಕಳೆದ ಐಪಿಎಲ್ ಆವೃತ್ತಿಯಲ್ಲಿ 8 ಪಂದ್ಯಗಳಲ್ಲಿ ನಾರ್ಕಿಯಾ 12 ವಿಕೆಟ್ ಕಬಳಿಸಿದ್ದರು. 15.58ರ ಸರಾಸರಿ ಹಾಗೂ 6.16ರ ಸರಾಸರಿಯಲ್ಲಿ ಬೌಲಿಂಗ್ ಮಾಡಿರುವ ನಾರ್ಕಿಯಾ 150 ಕಿ.ಮೀ ಗೂ ಅಧಿಕ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ನಾರ್ಕಿಯಾ ಬೌಲಿಂಗ್ ವಿಭಾಗದಲ್ಲಿ ತಂಡಕ್ಕೆ ಪ್ರಮುಖ ಅಸ್ತ್ರವಾಗಿದ್ದಾರೆ. ಐಪಿಎಲ್ ಮಹಾ ಹರಾಜಿಗೆ ಹೋಗಿದ್ದರೆ ಮತ್ತಷ್ಟು ಹೆಚ್ಚಿನ ಮೊತ್ತವನ್ನು ಪಡೆಯುವ ಸಾಧ್ಯತೆಯಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನಾರ್ಕಿಯಾ ಅವರನ್ನು 6.5 ಕೋಟಿ ಮೊತ್ತಕ್ಕೆ ತಂಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸುನಿಲ್ ನರೈನ್, 6 ಕೋಟಿ ರೂಪಾಯಿ
ಈ ಪಟ್ಟಿಯಲ್ಲಿರುವ ಮೂರನೇ ಆಟಗಾರ ಕೆರೀಬಿಯನ್ ಮೂಲದ ಆಟಗಾರ ಸುನಿಲ್ ನರೈನ್. ಈ ಆಲ್‌ರೌಂಡರ್ ಆಟಗಾರನನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 6 ಕೋಟಿ ಮೊತ್ತಕ್ಕೆ ರೀಟೈನ್ ಮಾಡಿಕೊಂಡಿದೆ. ಕುತೂಹಲ ಕಾರಿ ಸಂಗತಿಯೆಂದರೆ ಸುನಿಲ್ ನರೈನ್‌ಗಿಂತ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಅತ್ಯಂತ ಕಡಿಮೆ ಅನುಭವ ಹೊಂದಿರುವ ವೆಂಕಟೇಶ್ ಐಯ್ಯರ್ ಹಾಗೂ ವರುಣ್ ಚಕ್ರವರ್ತಿ ಸುನಿಲ್ ನರೈನ್‌ಗಿಂತ ದೊಡ್ಡ ಮೊತ್ತವನ್ನು ಪಡೆದುಕೊಂಡು ಅಚ್ಚರಿ ಮೂಡಿಸಿದ್ದಾರೆ.
ಸುನಿಲ್ ನರೈನ್ 2012ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ಕೆಕೆಆರ್ ತಂಡದ ಭಾಗವಾಗಿದ್ದಾರೆ. ಐಪಿಎಲ್ 2021ರ ಆವೃತ್ತಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 16 ವಿಕೆಟ್ ಕಿತ್ತಿರುವ ನರೈನ್ 22.56ರ ಸರಾಸರಿ ಹಾಗೂ ಕೇವಲ 6.44ರ ಎಕಾನಮಿ ಹೊಂದಿದ್ದಾರೆ. ಬ್ಯಾಟಿಂಗ್‌ನಲ್ಲಿಯೂ ಸ್ಪೋಟಕ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿರುವ ನರೈನ್ ಮೆಗಾ ಆಕ್ಷನ್‌ನಲ್ಲಿ ಮತ್ತಷ್ಟು ಹೆಚ್ಚಿನ ಮೊತ್ತ ಗಳಿಸುವ ಸಾಧ್ಯತೆಯಿತ್ತು.

ಕಿರಾನ್ ಪೊಲಾರ್ಡ್, 6 ಕೋಟಿ ರೂಪಾಯಿ
ಮುಂಬೈ ಇಂಡಿಯನ್ಸ್ ತಂಡ ತನ್ನ ಪ್ರಮುಖ ಆಟಗಾರ ಕಿರಾನ್ ಪೊಲಾರ್ಡ್ ಅವರನ್ನು 6 ಕೋಟಿ ರೂಪಾಯಿ ಮೊತ್ತಕ್ಕೆ ರೀಟೈನ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಪ್ರತಿಯೊಬ್ಬರ ಅಚ್ಚರಿಗೆ ಕಾರಣವಾಗಿದೆ. ವೈಟ್‌ಬಾಲ್ ಮಾದರಿಯಲ್ಲಿ ವೆಸ್ಟ್ ಇಂಡೀಸ್ ತಮಡದ ನಾಯಕನೂ ಆಗಿರುವ ಪೊಲಾರ್ಡ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಉಪನಾಯಕನೂ ಆಗಿದ್ದಾರೆ.
ಸ್ಪೋಟಕವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಪೊಲಾರ್ಡ್ ಏಕಾಂಗಿಯಾಗಿ ಅನೇಕ ಪಂದ್ಯಗಳನ್ನು ಮುಂಬೈ ಪರವಾಗಿ ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಜಸ್ಪ್ರೀತ್ ಬೂಮ್ರಾ ಹಾಗೂ ಸೂರ್ಯಕುಮಾರ್ ಯಾದವ್ ಅವರಿಗಿಂತಲೂ ಕಡಿಮೆ ಮೊತ್ತವನ್ನು ಪಡೆದುಕೊಂಡಿದ್ದಾರೆ ಕಿರಾನ್ ಪೊಲಾರ್ಡ್. ಈ ಕೆರೇಬಿಯನ್ ಮೂಲದ ಆಟಗಾರ ಹರಾಜು ಪ್ರಕ್ರಿಯೆಗೆ ಒಳಗಾಗಿದ್ದರೆ ಬಹುತೇಕ ತಂಡಗಳು ಈ ಆಟಗಾರನನ್ನು ತೆಕ್ಕೆಗೆ ಹಾಕಿಕೊಳ್ಳಲು ಪೈಪೋಟಿ ನಡೆಸುತ್ತಿದ್ದವು. ಈ ಮೂಲಕ ಪೊಲಾರ್ಡ್ ದೊಡ್ಡ ಮೊತ್ತ ಗಳಿಸುವ ಸಾಧ್ಯತೆಯಿತ್ತು. ಆದರೆ ಪೊಲಾರ್ಡ್ ಮುಂಬೈ ಇಂಡಿಯನ್ಸ್‌ನಲ್ಲಿ ಅಚ್ಚರಿಯ ಮೊತ್ತಕ್ಕೆ ರೀಟೈನ್ ಆಗಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್, 11 ಕೋಟಿ ರೂಪಾಯಿ
ಆಸ್ಟ್ರೇಲಿಯಾ ಮೂಲದ ಆಲ್‌ರೌಂಡರ್ ಗ್ಲೆಮ್ ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ ಬರಿಬ್ಬರಿ 11 ಕೋಟಿ ಮೊತ್ತವನ್ನು ನೀಡಿ ತನ್ನಲ್ಲಿಯೇ ಉಳಿಸಿಕೊಂಡಿದೆ. ಆದರೆ ಈ ಹಿಂದಿನ ಹರಾಜಿನಲ್ಲಿ ಆಸ್ಟ್ರೇಲಿಯಾದ ಈ ಆಟಗಾರ ಪಡೆದಿರುವ ಮೊತ್ತವನ್ನು ನೀವು ನೋಡಿದರೆ ಈ ಮೊತ್ತ ಬಹಳ ಕಡಿಮೆ ಎನಿಸದಿರದು. ಈ ಹಿಂದಿನ ವರ್ಷ ನಡೆದ ಮಿನಿ ಹರಾಜಿನಲ್ಲಿ ಸ್ವತಃ ಆರ್‌ಸಿಬಿ ಮ್ಯಾಕ್ಸ್‌ವೆಲ್ ಅವರನ್ನು ಪಡೆಯಲು 14.25 ಕೋಟಿ ರೂಪಾಯಿ ತೆತ್ತು ಸೇರ್ಪಡೆಗೊಳಿಸಿತ್ತು. ಹಾಗಿದ್ದರೂ ಈ ಬಾರಿಯ ರೀಟೆನ್ಶನ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಿಂದಿನ ಆವೃತ್ತಿಯಲ್ಲಿ ಪಡೆದ ಮೊತ್ತಕ್ಕಿಂತಲೂ ಕಡಿಮೆ ಸಂಬಳವನ್ನು ಪಡೆದುಕೊಳ್ಳಲಿದ್ದಾರೆ.
2021ರ ಆವೃತ್ತಿಯಲ್ಲಿ ಆರ್‌ಸಿಬಿ ಪರವಾಗಿ ಅದ್ಭುತ ಪ್ರದರ್ಶನ ನೀಡಿರುವ ಗ್ಲೆನ್ ಮ್ಯಾಕ್ಸ್‌ವೆಲ್ 14 ಪಂದ್ಯಗಳಲ್ಲಿ 513 ರನ್‌ಗಳಿಸಿದ್ದರು. ಇದರಲ್ಲಿ 6 ಅರ್ಧ ಶತಕಗಳಿಸಿದ್ದರು ಆಸಿಸ್‌ನ ಈ ಆಟಗಾರ, ಹಾಗಾಗಿ ಹರಾಜಿಗೆ ಬಿಡುಗಡೆಯಾಗಿದ್ದರೆ ಖಂಡಿತವಾಗಿಯೂ 11 ಕೋಡಿಗಿಂತ ದೊಡ್ಡ ಮೊತ್ತವನ್ನು ಆಸ್ಟ್ರೇಲಿಯಾದ ಈ ಆಲ್‌ರೌಂಡರ್ ಆಟಗಾರ ಪಡೆಯುತ್ತಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications