
ಗುಜರಾತ್ ಟೈಟನ್ಸ್ ತಂಡದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ತಂಡದ ಅದ್ಭುತ ಯಶಸ್ಸಿನ ಕಾರಣದಿಂದಾಗಿ ಸಂತಸದಲ್ಲಿ ತೇಲಾಡುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿಯೂ ಮಿಂಚುಹರಿಸಿರುವ ರಶೀದ್ ಖಾನ್ ಬೌಲಿಂಗ್‌ನ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಬ್ಯಾಟಿಂಗ್ ಮೂಲಕವೂ ತಂಡವನ್ನು ಗೆಲ್ಲಿಸುವಲ್ಲಿ ರಶೀದ್ ಖಾನ್ ಯಶಸ್ವಿಯಾಗಿದ್ದಾರೆ. ಈಗ ಗುಜರಾತ್ ಟೈಟನ್ಸ್ ತಂಡ ಐಪಿಎಲ್‌ನ ಚಾಂಪಿಯನ್ ತಂಡವಾಗಿ ಮೆರೆದಿದೆ. ಈ ಗೆಲುವಿನೊಂದಿಗೆ ರಶೀದ್ ಖಾನ್ ತಮ್ಮ ತವರಿಗೆ ವಾಪಾಸಾಗುತ್ತಿದ್ದು ಭಾರತದ ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯುದ್ದಕ್ಕೂ ತಮಗೆ ಬೆಂಬಲ ನೀಡಿದ ಅಭಿಮಾನಿಗಳನ್ನು ರಶೀದ್ ಖಾನ್ ಸ್ಮರಿಸಿಕೊಂಡಿದ್ದು ಎಲ್ಲಾ ಅಭಿಮಾನಿಗಳಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಅಲ್ಲದೆ ನೂರಾರು ಸುಂದರ ನೆನಪುಗಳನ್ನು ಹೊತ್ತು ತವರರಿಗೆ ಮರಳುತ್ತಿರುವುದಾಗಿ ರಶೀದ್ ಖಾನ್ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.
"ಭಾರತದಲ್ಲಿ ಯಾವಾಗಲೂ ಆಡುವುದೆಂದರೆ ಅದು ಅದ್ಭುತ ಅನುಭವ. ಅದರಲ್ಲೂ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಬೆಂಬಲಿಸುತ್ತಿರುವಾಗ ಆಡುವ ಅನುಭವವೇ ಭಿನ್ನ. ನಿಜಕ್ಕೂ ನಾನು ನಿಮ್ಮೆಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈ ಆವೃತ್ತಿಯಲ್ಲಿ ನೀಡಿದ ಬೆಂಬಲಕ್ಕೆ ಧನ್ಯವಾದಗಳು. ಸಾಕಷ್ಟು ಅದ್ಭಯತ ನೆನಪುಗಳೊಂದಿಗೆ ಮರಳುತ್ತಿದ್ದೇನೆ. ಮುಂದಿನ ಬಾರಿ ಮರಳುವವರೆಗೂ ಧನ್ಯವಾದಗಳು" ಎಂದು ರಶೀದ್ ಖಾನ್ ಟ್ವೀಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಗೆಲುವು ಸಾಧಿಸಿದ ಬಳಿಕ ಮಾತನಾಡಿರುವ ರಶೀದ್ ಖಾನ್ ಇದು ತನ್ನ ಈವರೆಗಿನ ಅತ್ಯುನ್ನತ ಸಾಧನೆ ಎಂದು ಹೇಳಿದ್ದರು. ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಈ ಮಾತನ್ನು ರಶೀದ್ ಖಾನ್ ಹಂದಿಕೊಂಡಿದ್ದರು. ಈ ಬಾರಿಯ ಐಪಿಎಲ್‌ನ ಫೈನಲ್ ಪಂದ್ಯದಲ್ಲಿಯೂ ಮಿಂಚಿರುವ ರಶೀದ್ ಖಾನ್ ನಾಲ್ಕು ಓವರ್‌ಗಳಲ್ಲಿ ಕೇವಲ 18 ರನ್ ನೀಡಿ ಒಂದು ವಿಕೆಟ್ ಪಡೆದುಕೊಂಡಿದ್ದರು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಈ ಮೂಲಕ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿಯೇ ಟ್ರೋಫಿ ಗೆದ್ದ ಸಾಧನೆ ಮಾಡಿದೆ ಗುಜರಾತ್ ಟೈಟನ್ಸ್. ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಎಲ್ಲಾ ವಿಭಾಗದಲ್ಲಿಯೂ ಮಿಂಚಿರುವ ಜಿಟಿ ಅರ್ಹ ಗೆಲುವು ಸಾಧಿಸಿ ಟ್ರೋಫಿ ಎತ್ತಿ ಹಿಡಿದಿದೆ.
ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಅಭಿನವ್ ಸದಾರಂಗನಿ, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್, ಡೊಮಿನಿಕ್ ಡ್ರೇಕ್ಸ್, ಜಯಂತ್ ಯಾದವ್, ವಿಜಯ್ ಶಂಕರ್, ದರ್ಶನ್ ನಲ್ಕಂಡೆ, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಗುರುಕೀರತ್ ಸಿಂಗ್, ವರುಣ್ ಆರೋನ್, ಬಿ ಸಾಯಿ ಸುದರ್ಶನ್, ರಹಮಾನುಲ್ಲಾ ಗುರ್ಬಾಜ್