
ಗುಜರಾತ್ ಟೈಟನ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಚಾಂಪಿಯನ್ ಆಗಿ ಮೆರೆದಿದೆ. ಚೊಚ್ಚಲ ಆವೃತ್ತಿಯಲ್ಲಿಯೇ ಚಾಂಪಿಯನ್ ಆಗಿ ಮೆರೆಯುವ ಮೂಲಕ ಜಿಟಿ ಪಡೆ ಅನೇಕ ದಾಖಲೆಗಳನ್ನು ಬರೆದಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿರುವ ಈ ತಂಡದ ಪರವಾಗಿ ಆಟಗಾರರು ಕೂಡ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ತಂಡದ ಆಟಗಾರ ಸಾಧನೆಯ ಜೊತೆಗೆ ಗುಜರಾತ್ ಟೈಟನ್ಸ್ ಕೋಚ್ ಆಶಿಶ್ ನೆಹ್ರಾ ಕೂಡ ಐಪಿಎಲ್ ಇತಿಹಾಸದಲ್ಲಿ ಶ್ರೇಷ್ಠ ಸಾಧನೆಯೊಂದನ್ನು ಮಾಡಿದ್ದಾರೆ.
14 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೆಡ್ ಕೋಚ್ ಆಗಿ ಭಾರತೀಯನೋರ್ವ ಟ್ರೋಫಿಯನ್ನು ಗೆದ್ದಂತಾಗಿದೆ. ಕಳೆದ 14 ಆವೃತ್ತಿಗಳಲ್ಲಿ ಯಾವ ಭಾರತೀಯ ಹೆಡ್ ಕೋಚ್‌ನಿಂದ ಈ ಸಾಧನೆ ಸಾಧ್ಯವಾಗಿರಲಿಲ್ಲ. ಈ ಬಾರಿ ಆಶಿಶ್ ನೆಹ್ರಾ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ತಾನು ಕೋಚ್ ಆಗಿ ಎಷ್ಟು ಸಮರ್ಥ ಎಂಬುದನ್ನು ಭಾರತದ ಮಾಜಿ ವೇಗಿ ಸಾಬೀತುಪಡಿಸಿದ್ದಾರೆ.
2011ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ 43ರ ಹರೆಯದ ಆಶಿಶ್ ನೆಹ್ರಾಗೆ ಈ ಬಾರಿ ಗುಜರಾತ್ ಟೈಟಮ್ಸ್ ತಂಡದಲ್ಲಿ ವಿಶ್ವಕಪ್ ಗೆದ್ದ ಭಾರತೀಯ ತಂಡದ ಮುಖ್ಯ ಕೋಚ್ ಗ್ಯಾರಿ ಗ್ಯಾರಿ ಕಿರ್ಸ್ಟನ್ ಅವರ ಬೆಂಬಲ ಕೂಡ ಇದೆ. ಗ್ಯಾರಿ ಕಿರ್ಸ್ಟನ್ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿ ತಂಡಕ್ಕೆ ನೆರವಾಗಿದ್ದು ನೆಹ್ರಾ ಹಾಗೂ ಕಿರ್ಸ್ಟನ್ ಜೋಡಿಯ ಯೋಜನೆಗಳು ಅದ್ಭುತವಾಗಿ ಕಾರ್ಯ ನಿರ್ವಹಿಸಿದೆ.
ಇನ್ನು ಎಡಗೈ ವೇಗಿ ಆಶಿಶ್ ನೆಹ್ರಾ 2016ರ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದರು. ಹೀಗಾಗಿ ಆಟಗಾರ ಹಾಗೂ ಕೋಚ್ ಎರಡೂ ಜವಾಬ್ಧಾರಿಯಲ್ಲಿ ಟ್ರೋಫಿ ಗೆದ್ದ ಕೇವಲ ನಾಲ್ಕನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ ಆಶಿಶ್ ನೆಹ್ರಾ. ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಶೇನ್ ವಾರ್ನ್, ಡ್ಯಾರೆನ್ ಲೆಹ್ಮನ್ ಮತ್ತು ರಿಕಿ ಪಾಂಟಿಂಗ್ ಮಾತ್ರವೇ ಈ ಸಾಧನೆ ಮಾಡಿದವರಾಗಿದ್ದಾರೆ.
ಆಶಿಶ್ ನೆಹ್ರಾ ಈ ಸಾಧನೆ ಮಾಡುವ ಮುನ್ನ 14 ಆವೃತ್ತಿಗಳಲ್ಲಿ 6 ಆವೃತ್ತಿಗಳಲ್ಲಿ ಐವರು ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಶೇನ್ ವಾರ್ನ್, ಡ್ಯಾರೆನ್ ಲೆಹ್ಮನ್, ರಿಕಿ ಪಾಂಟಿಂಗ್, ಟ್ರೇವರ್ ಬೈಲಿಸ್ ಮತ್ತು ಟಾಮ್ ಮೂಡಿ ಹೆಡ್ ಕೋಚ್‌ಗಳಾಗಿ ಕರ್ತವ್ಯ ನಿರ್ವಹಿಸಿದ್ದರು. ಇನ್ನು ಐದು ಆವೃತ್ತಿಗಳಲ್ಲಿ ನ್ಯೂಜಿಲೆಂಡ್‌ನ ಮಾಜಿ ಆಟಗಾರರಾದ ಸ್ಟೀಫನ್ ಫ್ಲೆಂಮಿಂಗ್ ಹಾಗೂ ಜಾನ್ ರೈಟ್ ಕೋಚ್ ಆಗಿ ಟ್ರೋಫಿ ಗೆದ್ದಿದ್ದರು. ಉಳಿದ ಮೂರು ಆವೃತ್ತಿಗಳಲ್ಲಿ ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧೆನೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕೋಚ್ ಆಗಿ ಟ್ರೋಫಿ ಗೆದ್ದುಕೊಂಡಿದ್ದಾರೆ.
ಇನ್ನು ಕೋಚ್ ಆಗಿ ಅತಿ ಹೆಚ್ಚು ಟ್ರೋಫಿ ಗೆದ್ದ ಪಟ್ಟಿಯಲ್ಲಿ ಕಿವೀಸ್ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಮೊದಲ ಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಆಗಿ ಫ್ಲೆಮಿಂಗ್ ನಾಲ್ಕು ಬಾರಿ ಟ್ರೋಫಿ ಗೆದ್ದಿದ್ದಾರೆ. ಮಹೇಲ ಜಯವರ್ಧನೆ ಮೂರು ಬಾರಿ ಕೋಚ್ ಆಗಿ ಗೆದ್ದಿದ್ದರೆ ಮಾಜಿ ಕೆಕೆಆರ್ ಕೋಚ್ ಟ್ರೆವರ್ ಬೈಲಿಸ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.