ಚೆನ್ನೈಗೆ ಮಣ್ಣುಮುಕ್ಕಿಸಿದ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಲು ಇನ್ನೂ ಇಷ್ಟು ಪಂದ್ಯಗಳಲ್ಲಿ ಗೆಲ್ಲಲೇಬೇಕು!

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 49ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಬುಧವಾರ ( ಮೇ 5 ) ನಡೆಯಿತು. ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 13 ರನ್‌ಗಳ ಜಯ ಸಾಧಿಸಿ ಪ್ಲೇ ಆಫ್ ಪ್ರವೇಶಿಸುವ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇತ್ತ ಈ ಪಂದ್ಯದಲ್ಲಿ ಸೋತ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ರೇಸ್‌ನಿಂದ ದೂರ ಸರಿದಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ಎರಡೂ ತಂಡಗಳಿಗೂ ಪ್ಲೇ ಆಫ್ ಪ್ರವೇಶಿಸಲು ಮಾಡು ಇಲ್ಲವೇ ಮಡಿ ಪಂದ್ಯವಾಗಿ ಪರಿಣಮಿಸಿತ್ತು. ಒಂದುವೇಳೆ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಪಂದ್ಯದಲ್ಲಿ ಸೋತಿದ್ದರೆ ಪ್ಲೇ ಆಫ್ ಪ್ರವೇಶಿಸುವ ಆಸೆಯನ್ನು ಕೈಬಿಡಬೇಕಾಗಿತ್ತು. ಆದರೆ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಬಾರಿಸಿ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 174 ರನ್‌ಗಳ ಗುರಿಯನ್ನು ನೀಡಿತು ಹಾಗೂ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಕಲೆಹಾಕಿ ಸೋಲನ್ನು ಅನುಭವಿಸಿತು.
ಹೀಗೆ ಈ ಗೆಲುವಿನ ಮೂಲಕ ತನ್ನ ಪ್ಲೇ ಆಫ್ ಪ್ರವೇಶದ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಗಿ ಪ್ಲೇಆಫ್ ತಲುಪಲು ಇನ್ನೂ ಎಷ್ಟು ಪಂದ್ಯಗಳಲ್ಲಿ ಗೆಲ್ಲಬೇಕು ಹಾಗೂ ಯಾವ ರೀತಿ ಗೆಲ್ಲಬೇಕು ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ.

ಇನ್ನೂ ಎಷ್ಟು ಪಂದ್ಯಗಳಲ್ಲಿ ಗೆಲ್ಲಬೇಕು?
ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯಲ್ಲಿ ಇಲ್ಲಿಯವರೆಗೂ 11 ಪಂದ್ಯಗಳನ್ನಾಡಿ 6 ಪಂದ್ಯಗಳಲ್ಲಿ ಗೆದ್ದು, 5 ಪಂದ್ಯಗಳಲ್ಲಿ ಸೋತು 12 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಟೂರ್ನಿಯಲ್ಲಿ ಇನ್ನೂ 3 ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಈ 3 ಪಂದ್ಯಗಳ ಪೈಕಿ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ಅಂಕಗಳನ್ನು ಪಡೆದು ನೇರವಾಗಿ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಡಲಿದೆ. ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ನೇರವಾಗಿ ಯಾರ ಮೇಲೂ ಅವಲಂಬಿತವಾಗದೇ ಪ್ಲೇಆಫ್ ಪ್ರವೇಶಿಸಬೇಕೆಂದರೆ ತನ್ನ ಉಳಿದ ಎಲ್ಲಾ 3 ಪಂದ್ಯಗಳಲ್ಲಿಯೂ ಕಡ್ಡಾಯವಾಗಿ ಗೆಲ್ಲಬೇಕಿದೆ.

2 ಪಂದ್ಯಗಳಲ್ಲಿ ಮಾತ್ರ ಗೆದ್ದರೆ?
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಉಳಿದ 3 ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ಜಯ ಸಾಧಿಸಿದರೂ ಸಹ ಪ್ಲೇ ಆಫ್ ಪ್ರವೇಶಿಸುವ ಅವಕಾಶಗಳು ಇರಲಿವೆ. ಹೀಗೆ 2 ಪಂದ್ಯಗಳಲ್ಲಿ ಮಾತ್ರ ಗೆದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಅಂಕಗಳನ್ನು ಪಡೆದುಕೊಳ್ಳಲಿದೆ. ಆದರೆ ಇತರೆ ತಂಡಗಳೂ ಸಹ 16 ಅಂಕಗಳನ್ನು ಇದೇ ಸಮಯಕ್ಕೆ ಪಡೆದುಕೊಳ್ಳಲಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಆ ತಂಡಗಳಿಗಿಂತ ಹೆಚ್ಚಿನ ನೆಟ್ ರನ್ ರೇಟ್ ಇದ್ದರೆ ಮಾತ್ರ ಪ್ಲೇ ಆಫ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉಳಿದ 2 ಪಂದ್ಯಗಳಲ್ಲಿ ಜಯ ಸಾಧಿಸಿದರೂ ಆ ಜಯ ಬೃಹತ್ ಅಂತರದಲ್ಲಿರಲೇಬೇಕು.

ಉಳಿದ ಪಂದ್ಯಗಳು ಯಾರ ವಿರುದ್ಧ?
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಪಂದ್ಯಗಳಲ್ಲಿ ಯಾವ ತಂಡಗಳನ್ನು ಯಾವಾಗ ಎದುರಿಸಲಿದೆ ಎಂಬುದರ ಕುರಿತಾದ ವಿವರ ಇಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್ - ಮೇ 8
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ - ಮೇ 13
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟನ್ಸ್ - ಮೇ 19
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications