IPL 2022: ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿ ಅಬ್ಬರಿಸಿದ ಐವರು ಆಟಗಾರರಿವರು

ವಿಶ್ವದ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಎಂದೇ ಖ್ಯಾತಿಯನ್ನು ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನೈದನೇ ಆವೃತ್ತಿ ನಿನ್ನೆ ( ಮೇ 29 ) ನಡೆದ ಫೈನಲ್ ಪಂದ್ಯದ ಮೂಲಕ ಮುಕ್ತಾಯಗೊಂಡಿದೆ. ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಕಣಕ್ಕಿಳಿದ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್ ಕಲೆಹಾಕಿತು. ಇತ್ತ 18.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್ ಚಚ್ಚಿದ ಗುಜರಾತ್ ಟೈಟನ್ಸ್ ತವರು ನೆಲದಲ್ಲಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿತು.
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಈ ಹಿಂದಿನ ಪಂದ್ಯಗಳಲ್ಲಿ ಆಟಗಾರರಿಂದ ಸಿಕ್ಕಿದ್ದ ಉತ್ತಮ ಪ್ರದರ್ಶನ ಈ ಪಂದ್ಯದಲ್ಲಿ ಸಿಗದೇ ಇದ್ದದ್ದೇ ಸೋಲಿಗೆ ಪ್ರಮುಖ ಕಾರಣವಾಯಿತು ಎನ್ನಬಹುದು. ತಂಡದ ಪ್ರಮುಖ ಆಟಗಾರ ಜೋಸ್ ಬಟ್ಲರ್ ಕೂಡ 39 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಮಹತ್ವದ ಪಂದ್ಯದಲ್ಲಿ ಬೃಹತ್ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆದರೆ ಟೂರ್ನಿಯುದ್ದಕ್ಕೂ ಅಬ್ಬರಿಸಿದ ಜೋಸ್ ಬಟ್ಲರ್ ಹಲವು ದಾಖಲೆ ಮತ್ತು ಮೈಲಿಗಲ್ಲುಗಳನ್ನು ನಿರ್ಮಿಸಿದ್ದು, ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಸಹ ಬರೆದಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಒಟ್ಟು 1062 ಸಿಕ್ಸರ್ ದಾಖಲಾಗಿದ್ದು, ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಟಾಪ್ 5 ಪಟ್ಟಿ ಕೆಳಕಂಡಂತಿದೆ.

1. ಜೋಸ್ ಬಟ್ಲರ್ - 45
ರಾಜಸ್ತಾನ್ ರಾಯಲ್ಸ್ ತಂಡದ ಪ್ರಮುಖ ಆಟಗಾರ ಜೋಸ್ ಬಟ್ಲರ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 17 ಪಂದ್ಯಗಳನ್ನಾಡಿ 45 ಸಿಕ್ಸರ್ ಬಾರಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡರು ಹಾಗೂ 863 ರನ್ ಬಾರಿಸಿರುವ ಬಟ್ಲರ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಕೂಡ ಹೌದು.

2. ಲಿಯಾಮ್ ಲಿವಿಂಗ್ ಸ್ಟನ್ - 34
ಪಂಜಾಬ್ ಕಿಂಗ್ಸ್ ತಂಡದ ಲಿಯಾಮ್ ಲಿವಿಂಗ್ ಸ್ಟನ್ ಈ ಬಾರಿಯ ಆವೃತ್ತಿಯಲ್ಲಿ ಒಟ್ಟು 14 ಪಂದ್ಯಗಳಲ್ಲಿ ಕಣಕ್ಕಿಳಿದು 34 ಸಿಕ್ಸರ್ ಬಾರಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

3. ಆ್ಯಂಡ್ರೆ ರಸೆಲ್ - 32
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಫೋಟಕ ಆಲ್ ರೌಂಡರ್ ಆ್ಯಂಡ್ರೆ ರಸೆಲ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 14 ಪಂದ್ಯಗಳನ್ನಾಡಿದ್ದು, 12 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದು 32 ಸಿಕ್ಸರ್ ಬಾರಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದ್ದಾರೆ.

4. ಕೆಎಲ್ ರಾಹುಲ್ - 30
ಕನ್ನಡಿಗ ಕೆಎಲ್ ರಾಹುಲ್ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡು 15 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಟೂರ್ನಿಯಲ್ಲಿ ಒಟ್ಟು 30 ಸಿಕ್ಸರ್ ಬಾರಿಸಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

5. ಸಂಜು ಸ್ಯಾಮ್ಸನ್ - 26
ಈ ಬಾರಿಯ ಐಪಿಎಲ್ ಟೂರ್ನಿಯ ರನ್ನರ್ ಅಪ್ ತಂಡವಾದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ 17 ಪಂದ್ಯಗಳಲ್ಲಿ ಕಣಕ್ಕಿಳಿದು 26 ಸಿಕ್ಸರ್ ಬಾರಿಸಿದ್ದು, ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications